ಮಧ್ಯಪ್ರದೇಶದಲ್ಲಿ 2022 ರಿಂದ 2024ರ ನಡುವೆ ಒಟ್ಟು 7,418 ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. 558 ಮಹಿಳೆಯರನ್ನು ಕೊಲೆ ಮಾಡಲಾಗಿದೆ ಮತ್ತು 338 ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ರಾಜ್ಯ ಸರ್ಕಾರ ವಿಧಾನಸಭೆಗೆ ಮಾಹಿತಿ ನೀಡಿದೆ.
ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರತಿದಿನ ಏಳು ಎಸ್‌ಸಿ/ಎಸ್‌ಟಿ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳಿದೆ.
ಗಮನಾರ್ಹವಾಗಿ, ಮಧ್ಯ ಪ್ರದೇಶದ ಒಟ್ಟು ಜನಸಂಖ್ಯೆಯ ಶೇಕಡ 38ರಷ್ಟು ಈ ಎರಡು ತಳ ಸಮುದಾಯಗಳ ಜನರಿದ್ದಾರೆ. ಒಟ್ಟು ಜನ ಸಂಖ್ಯೆಯಲ್ಲಿ ಎಸ್‌ಸಿಗಳ ಪ್ರಮಾಣ ಶೇಕಡ 16 ಮತ್ತು ಎಸ್‌ಟಿಗಳ ಪ್ರಮಾಣ ಶೇಕಡ 20ರಷ್ಟಿದೆ.
2022-2024 ರ ನಡುವೆ ಮಧ್ಯಪ್ರದೇಶದಲ್ಲಿ ಸುಮಾರು 558 ಎಸ್‌ಸಿ/ಎಸ್‌ಟಿ ಮಹಿಳೆಯರು ಕೊಲೆಯಾಗಿದ್ದಾರೆ. ಈ ಪೈಕಿ 411 ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು 147 ಪರಿಶಿಷ್ಟ ಜಾತಿಯವರು ಎಂದು ಸರ್ಕಾರ ತಿಳಿಸಿದೆ.
ಅದೇ ಅವಧಿಯಲ್ಲಿ ಎರಡೂ ಸಮುದಾಯಗಳ ಮಹಿಳೆಯರ ಮೇಲೆ ನಡೆದ 338 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಸಂತ್ರಸ್ತ ಮಹಿಳೆಯರ ಪೈಕಿ 186 ಮಂದಿ ಎಸ್‌ಟಿ 152 ಜನರು ಎಸ್‌ಸಿ ಸಮುದಾಯಕ್ಕೆ ಸೇರಿದವರು.
ಇದೇ ಅವಧಿಯಲ್ಲಿ ಒಟ್ಟು 5,983 ಎಸ್‌ಸಿ/ಎಸ್‌ಟಿ ಮಹಿಳೆಯರು ಕಿರುಕುಳಕ್ಕೊಳಗಾಗಿದ್ದಾರೆ. ಅಂದರೆ ಪ್ರತಿದಿನ ಐದು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 3,367 ಸಂತ್ರಸ್ತರು ಪರಿಶಿಷ್ಟ ಜಾತಿಯವರು ಮತ್ತು 2,616 ಮಹಿಳೆಯರು ಪರಿಶಿಷ್ಟ ಪಂಗಡದವರು.
ಪರಿಶಿಷ್ಟ ಪಂಗಡದ ಮಹಿಳೆಯರು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯಂತಹ ಹಿಂಸಾತ್ಮಕ ಮತ್ತು ಲೈಂಗಿಕ ಅಪರಾಧಗಳಿಗೆ ಹೆಚ್ಚು ಗುರಿಯಾಗಿದ್ದಾರೆ ಎಂದು ಹೇಳಲಾಗಿದ್ದರೂ, ಪರಿಶಿಷ್ಟ ಜಾತಿಯ ಮಹಿಳೆಯರು ತುಲನಾತ್ಮಕವಾಗಿ ಹೆಚ್ಚು ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದ ಅಪಾಯವನ್ನು ಹೊಂದಿದ್ದಾರೆ ಎಂದು ದತ್ತಾಂಶವು ಬಹಿರಂಗಪಡಿಸಿದೆ.
ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲಿನ 1,906 ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ 1,352 ಬಲಿಪಶುಗಳು ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು 554 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಮೂರು ವರ್ಷಗಳ ಅವಧಿಯಲ್ಲಿ ಪ್ರತಿದಿನ ಸರಾಸರಿ ಇಬ್ಬರು ಎಸ್‌ಸಿ/ಎಸ್‌ಟಿ ಮಹಿಳೆಯರು ಕೌಟುಂಬಿಕ ದೌರ್ಜನ್ಯವನ್ನು ಎದುರಿಸಿದ್ದಾರೆ ಎಂದು ಸರ್ಕಾರದ ಅಂಕಿ ಅಂಶ ಹೇಳಿದೆ.
ಸದನದಲ್ಲಿ ಹಂಚಿಕೊಂಡ ಅಧಿಕೃತ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ಮೂರು ವರ್ಷಗಳಲ್ಲಿ ಎಸ್‌ಸಿ/ಎಸ್‌ಟಿ ಮಹಿಳೆಯರ ವಿರುದ್ಧ ಒಟ್ಟು 44,978 ಅಪರಾಧ ಪ್ರಕರಣಗಳು ದಾಖಲಾಗಿವೆ, ಅಂದರೆ ದಿನಕ್ಕೆ ಸರಾಸರಿ 41 ಪ್ರಕರಣಗಳು ದಾಖಲಾಗಿವೆ.
ಈ ಆಘಾತಕಾರಿ ಅಂಕಿ ಅಂಶಗಳು ರಾಜ್ಯದ ತಳ ಸಮುದಾಯಗಳ ಮಹಿಳೆಯರ ಅಸಹಾಯಕತೆಯನ್ನು ಎತ್ತಿ ತೋರಸಿದೆ. ಅವರ ಸುರಕ್ಷತೆ ಮತ್ತು ನ್ಯಾಯ ಕೊಡಿಸಲು ಕ್ರಮಗಳ ತುರ್ತು ಅಗತ್ಯತೆಯನ್ನು ಒತ್ತಿ ಹೇಳಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಜೈಲಿನಿಂದಲೇ ಶಾರ್ಜೀಲ್ ಇಮಾಮ್ ಸ್ಪರ್ಧೆ: ವರದಿ


