ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (CUK) ಭೂವಿಜ್ಞಾನ ಕೋರ್ಸ್‌ನ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ಜಯಶ್ರೀ (22) ಅವರ ಆತ್ಮಹತ್ಯೆ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದೆ. ಒಡಿಶಾ ಮೂಲದ ದಲಿತ ವಿದ್ಯಾರ್ಥಿನಿಯಾದ ಜಯಶ್ರೀ ಅವರು ಬುಧವಾರ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೇವಲ ಒಂದು ವೈಯಕ್ತಿಕ ದುರಂತವಲ್ಲ, ಬದಲಾಗಿ ವಿಶ್ವವಿದ್ಯಾಲಯದ ಆಡಳಿತದಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ವ್ಯವಸ್ಥಿತ ನಿರ್ಲಕ್ಷ್ಯದ ಪರಿಣಾಮ ಎಂದು ವಿದ್ಯಾರ್ಥಿ ಸಮುದಾಯ ಹಾಗೂ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಘಟನೆಯ ಸುತ್ತ ಹಲವಾರು ಅನುಮಾನಗಳು: ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.
ಆರೋಪಿತರಿಗೆ ಆಡಳಿತದ ಕುಮ್ಮಕ್ಕು: ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಲೈಂಗಿಕ ಕಿರುಕುಳದ ಪ್ರಕರಣಗಳು ನಡೆದಿದ್ದರೂ, ಆಡಳಿತ ಮಂಡಳಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಂಧಾನದ ಮೂಲಕ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದೆ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ. ಕ್ಯಾಂಟೀನ್ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಾಗ, ಆತನ ಸಹೋದರನಾದ ಪ್ರಾಧ್ಯಾಪಕ ಮಲ್ಲಿಕಾರ್ಜುನ ಹೂಗಾರ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಸಂಧಾನ ನಡೆಸಿದೆ ಎನ್ನಲಾಗಿದೆ.
ಸಾವಿಗೂ ಮುನ್ನ ದೂರು: ಜಯಶ್ರೀ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ದಿನಗಳ ಮೊದಲು ವಿಶ್ವವಿದ್ಯಾಲಯದ ಡೀನ್ ಆಗಿರುವ ಪ್ರೊ. ಬಸವರಾಜ ಕುಬಕಡ್ಡಿ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಆದರೆ ಆ ದೂರಿನ ಕುರಿತು ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಇಲ್ಲ.
ನಿರ್ಲಕ್ಷ್ಯದ ಇ-ಮೇಲ್ ದೂರು: ಈ ಹಿಂದೆ, ತೆಲಂಗಾಣ ಮೂಲದ ಬಿಜೆಪಿ ನಾಯಕ ಮತ್ತು ಕ್ಯಾಂಟೀನ್ ಗುತ್ತಿಗೆದಾರನ ವಿರುದ್ಧ ದಲಿತ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೇರವಾಗಿ ಡೀನ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಳು. ಆದರೂ, ಆ ದೂರಿನ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಾ. ಪಿ. ನಂದಕುಮಾರ್ ದೂರಿದ್ದಾರೆ.
ಪೊಲೀಸರ ಆಗಮನಕ್ಕೂ ಮುನ್ನ ಬಾಗಿಲು ಮುರಿಯುವ ಯತ್ನ: ಜಯಶ್ರೀ ಅವರು ನೇಣಿಗೆ ಶರಣಾದ ದೃಶ್ಯವನ್ನು ಕಿಟಕಿಯಿಂದ ನೋಡಬಹುದಾಗಿತ್ತು. ಆದರೆ ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಕೆಲವು ಪ್ರಾಧ್ಯಾಪಕರು ಉಪಕುಲಪತಿಗಳ ಅನುಪಸ್ಥಿತಿಯಲ್ಲೇ ಕೊಠಡಿಯ ಬಾಗಿಲು ಮುರಿಯಲು ಪ್ರಯತ್ನಿಸಿರುವುದು ಅನುಮಾನಕ್ಕೆ ಮತ್ತಷ್ಟು ಇಂಬು ಕೊಟ್ಟಿದೆ. ಸಾಕ್ಷ್ಯ ನಾಶ ಮಾಡುವ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಯೂ ಈಗ ಎದುರಾಗಿದೆ.
ಸಾಮಾಜಿಕ ಕಾರ್ಯಕರ್ತರ ಆಕ್ರೋಶ: ಈ ಪ್ರಕರಣದ ಕುರಿತು ಸಾಮಾಜಿಕ ಕಾರ್ಯಕರ್ತರಾದ ವಿಕಾಸ್ ಆರ್. ಮೌರ್ಯ ಮತ್ತು ಹುಲಿಕುಂಟೆ ಮೂರ್ತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸೌಜನ್ಯ ಪರ ದನಿ ಎತ್ತಿದ ಕರ್ನಾಟಕ ಜಯಶ್ರೀ ವಿಷಯದಲ್ಲಿ ಮೌನವಾಗಿದೆ. ಯಾಕೆ? ಜಾತಿ ತಿಳಿಯಿತೆ?” ಎಂದು ವಿಕಾಸ್ ಮೌರ್ಯ ಅವರು ನೇರವಾಗಿ ಪ್ರಶ್ನಿಸಿದ್ದಾರೆ.
“ಇದು ಮತ್ತೊಂದು ಸಾಂಸ್ಥಿಕ ಹತ್ಯೆ… ದಲಿತರ ಬದುಕುಗಳು ಹೀಗೆ ಹುಳ ಉಪ್ಪಟೆಗಳ ಹಾಗೆ ನಶಿಸಿಹೋಗುತ್ತಿದ್ದರೆ ಮುಂದೇನು?” ಎಂದು ಹುಲಿಕುಂಟೆ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಲ್ಬುರ್ಗಿ ಕೇಂದ್ರೀಯ ವಿವಿಯಲ್ಲಿ(ಸಿಯುಕೆ) ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿ ದೌರ್ಜನ್ಯ, ಹಿಂಸೆ ನಡೆದಿದೆ. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದರೆ ನಾಗರಿಕ ಸಮಾಜದ ಮೌನ ಮಾತ್ರ … ಸಿಯುಕೆನಲ್ಲಿ ಆರೆಸ್ಸಸ್ ನ ಪ್ರಾಬಲ್ಯ, ದಲಿತರ ಮೇಲಿನ ಶೋಷಣೆ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದರ ವಿರುದ್ಧ ಕಲ್ಬುರ್ಗಿಯ ಸ್ಥಳೀಯ ಹೋರಾಟ ಯಾಕೆ ರೂಪುಗೊಳ್ಳಲಿಲ್ಲ ಎನ್ನುವುದು ಯಕ್ಷಪ್ರಶ್ನೆ. ಒಂದು ವಿವಿಯೊಳಗಿನ ಮತಧರ್ಮಾಂದರು, ಜಾತಿವಾದಿಗಳ ವಿರುದ್ಧ ಹೋರಾಟ ರೂಪಿಸಲು ಸೋ ಕಾಲ್ಡ್ ಚಳುವಳಿಗಳು ವಿಫಲವಾಗಿವೆ ಎಂದರೆ ಇನ್ನು ಜಿಲ್ಲೆ, ರಾಜ್ಯ, ದೇಶಾದ್ಯಂತ ಈ ದುಷ್ಟರ ವಿರುದ್ಧ ಸಂಘಟನೆ ಕಟ್ಟುವುದು ಕನಸಿನ ಮಾತು. ಈಗ ಹೇಗೆ ಸಾಂಕೇತಿಕ ಮಟ್ಟದಲ್ಲಿದೆಯೋ ಹಾಗೆ ಮುಂದುವರಿಸಿಕೊಂಡು ಹೋಗುವುದು ‘ಎಲ್ಲರಿಗೂ ಅನುಕೂಲ’… ಇದಕ್ಕೆ ಮುಖ್ಯ ಕಾರಣಗಳನ್ನು ಹೇಳುತ್ತಾ ಹೋದರೆ… ಎಂದು ಶ್ರೀಪಾದ್ ಭಟ್ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಗಳು, ವಿಶ್ವವಿದ್ಯಾಲಯದ ಆಡಳಿತವು ದಲಿತ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಒದಗಿಸುವಲ್ಲಿ ವಿಫಲವಾಗಿದೆ ಎಂಬುದನ್ನು ತೋರಿಸುತ್ತವೆ.
ತನಿಖೆಗೆ ಒತ್ತಾಯ: ವಿದ್ಯಾರ್ಥಿಗಳು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಆಡಳಿತ ಮಂಡಳಿಯ ನಿರ್ಲಕ್ಷ್ಯ, ಲೈಂಗಿಕ ಕಿರುಕುಳದ ಆರೋಪಗಳು ಮತ್ತು ಸಾಕ್ಷ್ಯ ನಾಶದ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯು ವಿಶ್ವವಿದ್ಯಾಲಯದ ಆಡಳಿತಕ್ಕೆ ಒಂದು ಸವಾಲಾಗಿ ಪರಿಣಮಿಸಿದ್ದು, ವಿದ್ಯಾರ್ಥಿನಿಯರಿಗೆ ಸೂಕ್ತ ನ್ಯಾಯ ದೊರೆಯುವುದೇ ಎಂದು ಕಾದು ನೋಡಬೇಕಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣ: ಆರೋಪಿಗಳ ದೋಷಮುಕ್ತಿ, ನ್ಯಾಯಕ್ಕಾಗಿ ಬಾಂಬೆ ಹೈಕೋರ್ಟ್ ಕಡೆಗೆ ಸಂತ್ರಸ್ತರ ಚಿತ್ತ


