ಧರ್ಮಸ್ಥಳದ ಶವಶೋಧ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಯಲ್ಲಿರುವ ಅಧಿಕಾರಿಯೊಬ್ಬರ ವಿರುದ್ದವೇ ಗಂಭೀರ ಆರೋಪ ಕೇಳಿ ಬಂದಿದೆ.
ಎಸ್‌ಐಟಿಯ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಅವರು ಸಾಕ್ಷಿ ದೂರುದಾರನಿಗೆ (ಭೀಮ) ಬೆದರಿಕೆ ಹಾಕಿದ್ದಾರೆ. ದೂರು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ವರದಿಯಾಗಿದೆ.
ಮಂಜುನಾಥ್ ಗೌಡ ಅವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ತಮ್ಮ ಮೊಬೈಲ್ ಫೋನ್ ಮೂಲಕ ದೂರುದಾರನ ಹೇಳಿಕೆಯನ್ನು ರೆಕಾರ್ಡ್ ಮಾಡುವಾಗ, ದೂರು ಹಿಂಪಡೆಯಲು ಇಚ್ಛಿಸಿರುವುದಾಗಿ ಸುಳ್ಳು ಹೇಳುವಂತೆ ಆತನಿಗೆ ಒತ್ತಾಯಿಸಿದ ಆರೋಪವಿದೆ ಎಂದು blrpost.com ವರದಿ ಮಾಡಿದೆ.
ದೂರುದಾರನ ಪರ ವಕೀಲರು ಈ ಬಗ್ಗೆ ಎಸ್‌ಐಟಿಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬೆಳವಣಿಗೆಯು ಎಸ್‌ಐಟಿಯಲ್ಲಿರುವ ಕೆಳ ಹಂತದ ಅಧಿಕಾರಿಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು blrpost.com ಹೇಳಿದೆ.
ಈ ಮಾಹಿತಿಯನ್ನು ಗೃಹ ಇಲಾಖೆಯ ಅಧಿಕಾರಿಯೊಬ್ಬರು ನಮ್ಮ ಜೊತೆ ಹಂಚಿಕೊಂಡಿದ್ದು, ಅವರು ದೂರಿನ ವಿಷಯವನ್ನು ಸಹ ಒದಗಿಸಿದ್ದಾರೆ. ಅಧಿಕಾರಿಯ ಪ್ರಕಾರ, ವಕೀಲರಾದ ಅನನ್ಯಾ ಗೌಡ ಅವರು ಮಂಜುನಾಥ ಗೌಡ ಅವರನ್ನು ಎಸ್‌ಐಟಿಯಿಂದ ತಕ್ಷಣ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ ಎಂದು blrpost.com ತಿಳಿಸಿದೆ.
ವಕೀಲೆ ಅನನ್ಯಾ ಗೌಡ ಅವರು ಎಸ್‌ಐಟಿಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಈಮೇಲ್ ಸ್ಕ್ರೀನ್ ಶಾಟ್ ಮತ್ತು ವಿಯಷವನ್ನು blrpost.com ತನ್ನ ವರದಿಯಲ್ಲಿ ಹಂಚಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಪೊಲೀಸ್ ಅಧಿಕಾರಿ ಮಂಜುನಾಥ್ ಗೌಡ ಅವರ ವಿರುದ್ದ ಆರೋಪದ ಬಗ್ಗೆ ಚರ್ಚೆಯಾಗುತ್ತಿದೆ.
ಮಂಜುನಾಥ್ ಗೌಡ ಅವರು ಶವ ಶೋಧದ ವೇಳೆ ಸಿಕ್ಕ ಅವಶೇಷಗಳ ಫೋಟೋ ತೆಗೆದು ಪ್ರಭಾವಿ ಕುಟುಂಬಕ್ಕೆ ಕಳುಹಿಸಿದ್ದಾರೆ ಎಂದು ಹೇಳಲಾಗ್ತಿದೆ. ಶವಶೋಧದ ವೇಳೆ ಸ್ಥಳದಲ್ಲಿದ್ದ ಮಂಜುನಾಥ್ ಗೌಡ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಸುದ್ದಿ ವಾಹಿನಿಯೊಂದರ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗ್ತಿದೆ.

ಹಾಗಾಗಿ, ಶವ ಶೋಧದ ವೇಳೆ ದೂರುದಾರನ ಪರ ವಕೀಲರು ಮತ್ತು ನಿವೃತ್ತ ನ್ಯಾಯಾಧೀಶರು ಸ್ಥಳದಲ್ಲಿರಬೇಕು ಎಂದು ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ.
ಹೈಕೋರ್ಟ್‌ನಿಂದ ಧರ್ಮಸ್ಥಳ ಪ್ರಕರಣದ ಸುದ್ದಿ ಪ್ರಸಾರಕ್ಕೆ ಹಸಿರು ನಿಶಾನೆ: ವಿಚಾರಣಾ ನ್ಯಾಯಾಲಯದ ಆದೇಶ ರದ್ದು


