ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬಂಧಿತರು ಕೋಲಾರ ಮತ್ತು ಚಿತ್ರದುರ್ಗ ಮೂಲದವರು ಎಂಬ ಮಾಹಿತಿ ದೊರೆತಿದೆ. ಒಟ್ಟು 13 ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನು 11 ಜನರ ಮಾಹಿತಿ ದೊರೆತಿದೆ. ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಟಿ ರಮ್ಯಾ, ತಮಗೆ ಬಂದ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಒಟ್ಟು 43 ಇನ್‌ಸ್ಟಾಗ್ರಾಂ ಖಾತೆಗಳಿಂದ ತಮಗೆ ಅವಹೇಳನಕಾರಿ ಸಂದೇಶಗಳು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶದ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ನಟಿ ರಮ್ಯಾ, “ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ” ಎಂದಿದ್ದರು. ಈ ಕಾರಣಕ್ಕೆ ರಮ್ಯಾ ಅವರಿಗೆ ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದವರು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಬೆದರಿಕೆ ಹಾಕಿದ್ದರು.
ಅಭಿಮಾನಿಗಳ ಈ ಅತಿರೇಕದ ವರ್ತನೆಯನ್ನು ಖಂಡಿಸಿದ್ದ ರಾಜ್ಯ ಮಹಿಳಾ ಆಯೋಗ, ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿತ್ತು. ಇತರ ಸಂಘಟನೆಗಳು ಕೂಡ ರಮ್ಯಾ ಬೆಂಬಲಕ್ಕೆ ನಿಂತಿತ್ತು.
ಧರ್ಮಸ್ಥಳ ಪ್ರಕರಣದ ದೂರುದಾರನಿಗೆ ಬೆದರಿಕೆ, ಕೇಸ್ ವಾಪಸ್ ಪಡೆಯಲು ಒತ್ತಡ: ಎಸ್‌ಐಟಿ ಅಧಿಕಾರಿ ವಿರುದ್ಧ ಗಂಭೀರ ಆರೋಪ


