ಭಾರತೀಯ ಚುನಾವಣಾ ಆಯೋಗ (ಇಸಿಐ) ಶುಕ್ರವಾರ (ಆ.1) ಬಿಡುಗಡೆ ಮಾಡಿರುವ ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಸ್ವಿ ಪ್ರಸಾದ್ ಯಾದವ್ ಶನಿವಾರ (ಆ.2) ಹೇಳಿದ್ದಾರೆ.
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, “ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಸಮಯದಲ್ಲಿ ನೋಂದಣಿ ನಮೂನೆಯನ್ನು (enumeration form) ಭರ್ತಿ ಮಾಡಿದ್ದೇನೆ ಎಂದಿದ್ದಾರೆ.
“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಹೇಗೆ ಸ್ಪರ್ಧಿಸಲಿ?” ಎಂದು ಅವರು ಪ್ರಶ್ನಿಸಿದ್ದಾರೆ.
#WATCH | Patna, Bihar: "My name is not there in the electoral roll. How will I contest the elections?" asks RJD leader Tejashwi Yadav, as his EPIC number is unable to fetch his name in the electoral roll. pic.twitter.com/eF2VkeNIRw
— ANI (@ANI) August 2, 2025
EPIC ಸಂಖ್ಯೆಯ ಮೂಲಕ ತನ್ನ ಹೆಸರನ್ನು ಹುಡುಕಿದಾಗ ಯಾವುದೇ ಮಾಹಿತಿ ಕಂಡುಬಂದಿಲ್ಲ. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ವೈಯಕ್ತಿಕವಾಗಿ ತನ್ನ ಭರ್ತಿ ಮಾಡಿದ ಫಾರ್ಮ್ ಅನ್ನು ಸಂಗ್ರಹಿಸಿದ್ದಾರೆ. ಆದರೆ, ಕರಡು ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲ ಎಂದು ತೇಜಸ್ವಿ ಯಾದವ್ ಹೇಳಿಕೊಂಡಿದ್ದಾರೆ.
“ಪ್ರತಿ ವಿಧಾನಸಭಾ ಕ್ಷೇತ್ರದಿಂದ ಸುಮಾರು 20 ರಿಂದ 30 ಸಾವಿರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಒಟ್ಟು ಸುಮಾರು 65 ಲಕ್ಷ ಅಂದರೆ, ಸುಮಾರು 8.5% ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಚುನಾವಣಾ ಆಯೋಗ ಜಾಹೀರಾತು ನೀಡಿದಾಗಲೆಲ್ಲಾ, ಇಷ್ಟೊಂದು ಜನರು ಸ್ಥಳಾಂತರಗೊಂಡಿದ್ದಾರೆ, ಇಷ್ಟೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು ಇಷ್ಟೊಂದು ಜನರು ನಕಲಿ ಹೆಸರುಗಳನ್ನು ಹೊಂದಿದ್ದಾರೆ ಎಂದು ಉಲ್ಲೇಖಿಸಿತ್ತು” ಎಂದು ತೇಜಸ್ವಿ ವಿವರಿಸಿದ್ದಾರೆ.
“ಆದರೆ ಚುನಾವಣಾ ಆಯೋಗವು ನಮಗೆ ಒದಗಿಸಿದ ಪಟ್ಟಿಯಲ್ಲಿ, ಅವರು ಯಾವುದೇ ಮತದಾರರ ವಿಳಾಸ, ಬೂತ್ ಸಂಖ್ಯೆ ಮತ್ತು ಎಪಿಕ್ ಸಂಖ್ಯೆಯನ್ನು ನೀಡಿಲ್ಲ. ಆದ್ದರಿಂದ, ಮತದಾರರ ಪಟ್ಟಿಯಿಂದ ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದನ್ನು ನಾವು ಕಂಡುಹಿಡಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಆರೋಪ ನಿರಾಕರಿಸಿದ ಚುನಾವಣಾ ಆಯೋಗ
ತೇಜಸ್ವಿ ಯಾದವ್ ಆರೋಪವನ್ನು ಭಾರತೀಯ ಚುನಾವಣಾ ಆಯೋಗ ತಳ್ಳಿ ಹಾಕಿದೆ. ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿದೆ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ ತೇಜಸ್ವಿ ಹೆಸರು ಇರುವ ಪಟ್ಟಿಯ ಪ್ರತಿಯನ್ನು ಬಿಡುಗಡೆ ಮಾಡಿದೆ.
ಅವರ ಹೆಸರು ಕ್ರಮ ಸಂಖ್ಯೆ 416, ಮನೆ ಸಂಖ್ಯೆ 10 ಮತ್ತು EPICಸಂಖ್ಯೆ RABO456228ನೊಂದಿಗೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತೇಜಸ್ವಿ ಯಾದವ್ ತಮ್ಮ ಹಳೆಯ EPIC ಸಂಖ್ಯೆಯನ್ನು ಬಳಸಿಕೊಂಡು ಹುಡುಕಿರಬಹುದು. ಹಾಗಾಗಿ, ಅವರ ವಿವರಗಳು ಕಂಡುಬಂದಿರಲಿಕ್ಕಿಲ್ಲ ಎಂದು ಚುನಾವಣಾ ಆಯೋಗದ ಪ್ರಕಾರ ಹೇಳಿದೆ.


