ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಹೂಲಿಕಟ್ಟಿ ಗ್ರಾಮದ ಜನತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ (ಕೀಟನಾಶಕ) ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸವದತ್ತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಗರ ಪಾಟೀಲ, ನಾಗನಗೌಡ ಪಾಟೀಲ ಮತ್ತು ಕೃಷ್ಣ ಮಾದರ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಗರ ಪಾಟೀಲ ಪ್ರಕರಣದ ಪ್ರಮುಖ ಆರೋಪಿ. ಹಿಂದುತ್ವ ಸಂಘಟನೆ ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಘಟಕದ ಅಧ್ಯಕ್ಷನಾಗಿರುವ ಈತ, ಸರ್ಕಾರಿ ಶಾಲೆಯಲ್ಲಿ 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿರುವ ಮುಸ್ಲಿಂ ಸಮುದಾಯದ ಸುಲೇಮಾನ್ ಗೋರಿನಾಯ್ಕ ಅವರಿಗೆ ಕೆಟ್ಟ ಹೆಸರು ತರಲು ಮತ್ತು ಅವರ ವರ್ಗಾವಣೆ ಆಗಬೇಕು ಎಂಬ ಉದ್ದೇಶದಿಂದ ಈ ದುಷ್ಕೃತ್ಯವೆಸಗಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶನಿವಾರ (ಆ.2) ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಭೀಮಾಶಂಕರ ಗುಳೇದ್ ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದರಿಂದ ಹಲವು ಮಕ್ಕಳು ಅಸ್ವಸ್ತಗೊಂಡಿದ್ದರು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಸವದತ್ತಿ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲೊಂದು ಬಾಟಲಿ ದೊರೆತಿತ್ತು. ಅದರಲ್ಲಿ ವಿಷದ ಅಂಶ ಇದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಅದರ ಆಧಾರದ ಮೇಲೆ ಮತ್ತು ಜನತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುಲೇಮಾನ್ ಗೋರಿನಾಯ್ಕ್ ಅವರು ನೀಡಿರುವ ದೂರಿನ ಆಧಾರ ಮೇಲೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದರು ಎಂದು ಹೇಳಿದ್ದಾರೆ.
ಸವದತ್ತಿ ಠಾಣೆಯ ಪೊಲೀಸರು ಬಹಳ ವೈಜ್ಞಾನಿಕವಾಗಿ, ತುಂಬಾ ಮುತುವರ್ಜಿ ವಹಿಸಿಕೊಂಡು ಈ ಪ್ರಕರಣವನ್ನು ಬೇಧಿಸಿದ್ದಾರೆ. ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಹೂಲಿಕಟ್ಟೆ ಗ್ರಾಮದ ಕೃಷ್ಣ ಮಾದರ, ನಾಗನಗೌಡ ಪಾಟೀಲ್ ಮತ್ತು ನಾಗನಗೌಡನ ಹತ್ತಿರದ ಸಂಬಂಧಿ ಸಾಗರ್ ಪಾಟೀಲ್ ಬಂಧಿತ ಆರೋಪಿಗಳು ಎಂದು ತಿಳಿಸಿದ್ದಾರೆ.
ದುರದೃಷ್ಟಕರ ಸಂಗತಿಯೆಂದರೆ ಬಂಧಿತರೆಲ್ಲ ಯುವಕರು. ನಾಡನ್ನು ಕಟ್ಟಿ ಬೆಳೆಸಬೇಕಾದ ವಯಸ್ಸಲ್ಲಿ ಈ ರೀತಿಯ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ತಮ್ಮ ಕೃತ್ಯಕ್ಕೆ ಒಬ್ಬರ ಬಾಲಕನನ್ನೂ ಬಳಸಿಕೊಂಡಿದ್ದಾರೆ. ಆದರೆ, ತನಿಖೆಯಲ್ಲಿ ಆತ ಅಮಾಯಕ ಎಂದು ಗೊತ್ತಾಗಿದೆ. ಆರೋಪಿಗಳು ಅವನ ಮುಗ್ದತೆಯನ್ನು ತಮ್ಮ ಹೀನಾಯ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸಾಗರ್ ಪಾಟೀಲ್. ಈತನೇ ಈ ದುಷ್ಕೃತ್ಯದ ಕಾರಣೀಕರ್ತ. ಈತ ಈ ಆಘಾತಕಾರಿ ಕೃತ್ಯವೆಸಗಲು ಎರಡ್ಮೂರು ತಿಂಗಳಿನಿಂದ ಪೂರ್ವ ತಯಾರಿ ಮಾಡಿಕೊಂಡಿದ್ದ. ಅದಕ್ಕೆ ತನ್ನ ಜೊತೆ ಕೆಲಸ ಮಾಡುತ್ತಿದ್ದ ಚಾಲಕ ಕೃಷ್ಣ ಮಾದರನ ಸಹಾಯ ಪಡೆದಿದ್ದ. ಕೃಷ್ಣಗೆ ಸ್ವಲ್ಪ ಹಣ ಕೊಟ್ಟಿದ್ದ. ಆತನ ಮೂಲಕವೇ ವಿಷ ಖರೀದಿ ಮಾಡಿಸಿದ್ದ. ಅಪ್ರಾಪ್ತ ಬಾಲಕನನ್ನೂ ಆತನ ಮೂಲಕವೇ ಕರೆ ತಂದಿದ್ದ ಎಂದು ವಿವರಿಸಿದ್ದಾರೆ.
ಆರೋಪಿಗಳಾದ ಕೃಷ್ಣ ಮಾದರ ಮತ್ತು ನಾಗನಗೌಡ ಪಾಟೀಲ್ ದುಷ್ಕೃತ್ಯ ಎಸಗುವುದಕ್ಕಿಂತ 6 ದಿನಗಳ ಮುಂಚೆ (8ನೇ ತಾರೀಖು) ಮುನವಲ್ಲಿಗೆ ಹೋಗಿ ರಸಗೊಬ್ಬ ಮತ್ತು ಕೀಟನಾಶಕದ ಅಂಗಡಿಯಿಂದ ವಿಷ ಖರೀದಿಸಿದ್ದರು.
ಅದಕ್ಕೂ ಮುನ್ನ ಹೂಲಿಕಟ್ಟೆಯಲ್ಲಿ ಸಾಗರ್ ಪಾಟೀಲ ಜೊತೆ ಚರ್ಚೆ ನಡೆಸಿದ್ದರು ಎಂದು ಎಸ್ಪಿ ಹೇಳಿದ್ದಾರೆ.
13ನೇ ತಾರೀಕು ಆರೋಪಿಗಳು ಮತ್ತೊಮ್ಮೆ ಪರಸ್ಪರ ಚರ್ಚೆ ನಡೆಸಿದ್ದರು. ಅಂದೇ ಸಾಗರ್ ಪಾಟೀಲ್‌ಗೆ ವಿಷದ ಬಾಟಲಿಯನ್ನು ಹಸ್ತಾಂತರಿಸಿದ್ದರು. ಮಾಝಾ ಜ್ಯೂಸ್ ಬಾಟಲಿಯಲ್ಲಿ ವಿಷವನ್ನು ತುಂಬಲಾಗಿತ್ತು. ಸಾಗರ್ ಪಾಟೀಲ್ ರೈತನಾಗಿರುವುದರಿಂದ ಆತನಿಗೆ ಕೀಟನಾಶಕ ಖರೀದಿಸುವ ಅವಕಾಶವಿತ್ತು. ಆತ ಕೃಷ್ಣ ಮಾದರ ಮತ್ತು ನಾಗನಗೌಡನ ಭೇಟಿಗೆ ಬರುವ ಮುನ್ನವೇ ಮಾಝಾ ಬಾಟಲಿಯಲ್ಲಿ ಕೀಟನಾಶಕ ತುಂಬಿಕೊಂಡು ಬಂದಿದ್ದ. ನಂತರ ಇವರಿಬ್ಬರು ತಂದ ಕೀಟನಾಶಕವನ್ನೂ ಅದಕ್ಕೆ ಸೇರಿಸಿದ್ದರು. ನಂತರ ಬಾಟಲಿಯನ್ನು ಕೃಷ್ಣ ಮಾದರ ಕೈಗೆ ಕೊಡಲಾಗಿತ್ತು ಎಂದು ವಿವರಿಸಿದ್ದಾರೆ.
ಕೃಷ್ಣ ಮಾದರ ವಿಷವನ್ನು ತೆಗೆದುಕೊಂಡು ಹೋಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುವ ಬಾಲಕನಿಗೆ ಕೊಟ್ಟಿದ್ದ. ಅದನ್ನು ಶಾಲೆಯ ಟ್ಯಾಂಕ್‌ಗೆ ಸುರಿಯುವಂತೆ ಸೂಚಿಸಿದ್ದ. ಇದಕ್ಕಾಗಿ ಬಾಲಕನಿಗೆ ಸ್ವಲ್ಪ ದುಡ್ಡು ಕೊಟ್ಟಿದ್ದ. ತಿಂಡಿ ತಿನಿಸುಗಳನ್ನು ನೀಡಿ ಪುಸಲಾಯಿಸಿದ್ದ. ಬಾಲಕ ಶಾಲೆಯ ಟ್ಯಾಂಕ್‌ಗೆ ಕೀಟನಾಶಕ ಸುರಿಯುವ ಮುನ್ನ ಈ ಬಾಟಲಿಯಲ್ಲಿ ಏನಿದೆ? ಎಂದು ಕೇಳಿದ್ದ. ಅದಕ್ಕೆ ಆರೋಪಿಗಳು ಇದರಲ್ಲಿ ಜ್ಯೂಸ್ ಇದೆ. ಟ್ಯಾಂಕ್‌ಗೆ ಸುರಿದರೆ ನೀರು ಸಿಹಿಯಾಗುತ್ತದೆ ಎಂದಿದ್ದರು. ಈ ಮಾತನ್ನು ನಂಬಿದ್ದ ಮುಗ್ದ ಬಾಲಕ ನೀರಿನ ಟ್ಯಾಂಕ್‌ಗೆ ಕೀಟನಾಶಕ ಸುರಿದಿದ್ದ. ಬಾಲಕ ವಿಷ ಸುರಿದು ಆ ಟ್ಯಾಂಕ್‌ನಿಂದ ಸ್ವಲ್ಪ ನೀರು ತೆಗೆದುಕೊಂಡು ಬರುವಾಗ ಕೊಂಚ ಗಲಿಬಿಲಿಗೊಂಡಿದ್ದ. ಈ ವೇಳೆ ಆತನ ಕೈಯಿಂದ ವಿಷದ ಬಾಟಲಿ ಕೆಳಗೆ ಬಿದ್ದಿತ್ತು. ಅದು ದುಷ್ಕೃತ್ಯದ ಸುಳಿವನ್ನು ನೀಡಿತ್ತು ಎಂದು ಹೇಳಿದ್ದಾರೆ.
ಪ್ರಮುಖ ಆರೋಪಿ ಸಾಗರ್ ಪಾಟೀಲ್, ಇನ್ನೊಬ್ಬ ಆರೋಪಿ ಕೃಷ್ಣ ಮಾದರ ಮೂಲಕ ದುಷ್ಕೃತ್ಯವನ್ನು ಮಾಡಿಸಿದ್ದ. ಮೂಲಗಳ ಪ್ರಕಾರ, ಈ ಕೃಷ್ಣ ಮಾದರ ಅನ್ಯಜಾತಿಯ ಹುಡುಗಿಯೊಬ್ಬರನ್ನು ಪ್ರೀತಿಸುತಿದ್ದಾರೆ. ಇದಕ್ಕೆ ಅಸ್ತ್ರವಾಗಿ ಮಾಡಿಕೊಂಡ ಸಾಗರ್ ಪಾಟೀಲ್, ತಾನು ಹೇಳಿದ ಕೆಲಸ ಮಾಡದಿದ್ದೆ “ನೀನು ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಬಹಿರಂಗಪಡಿಸುತ್ತೇನೆ” ಎಂದು ಬೆದರಿಸಿದ್ದ. ಹಾಗಾಗಿ, ಕೃಷ್ಣ ಮಾದರ ವಿಷ ಬೆರೆಸಲು ಒಪ್ಪಿಕೊಂಡಿದ್ದ ಎನ್ನಲಾಗಿದೆ.
ಧರ್ಮಸ್ಥಳ ಪ್ರಕರಣ: ನ್ಯಾಯಾಧೀಶರ ಮೇಲೆ ಆಕ್ಷೇಪ, ವಿಚಾರಣೆ ಬೇರೆ ನ್ಯಾಯಾಲಯಕ್ಕೆ ವರ್ಗಾವಣೆಗೆ ಅರ್ಜಿ


