ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ಬುಧವಾರ (ಆ.6) ಸಂಜೆ ನಾಲ್ವರು ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಇತರ ಘಟನೆಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಲ್ಕು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
1. ಕುಡ್ಲ ರ್‍ಯಾಂಪೇಜ್ ಯೂಟ್ಯೂಬ್ ಚಾನೆಲ್‌ನ ಮಾಲೀಕ ಅಜಯ್ ಅಂಚನ್ ಅವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ.
ಬುಧವಾರ (ಆ.6) ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬರ ವಿಡಿಯೊ ಬೈಟ್ ಪಡೆಯುತ್ತಿದ್ದಾಗ ಸ್ಥಳಕ್ಕೆ ಬಂದ ಸುಮಾರು 15 ರಿಂದ 50 ಜನರ ತಂಡ ತನ್ನ ಕ್ಯಾಮರಾಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೋ ಚಾನೆಲ್‌ನ ಸಂತೋಷ್ ಮತ್ತು ಯುನೈಟೆಡ್ ಮೀಡಿಯಾ ಚಾನೆಲ್‌ನ ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ತಮ್ಮ ಕ್ಯಾಮರಾವನ್ನು ರಸ್ತೆಗೆಸೆದು ಹಾನಿಗೊಳಿಸಿದ್ದಾರೆ. ಅದರಲ್ಲಿದ್ದ ಮೆಮೋರಿ ಕಾರ್ಡ್ ಕಳವು ಮಾಡಿದ್ದಾರೆ. ಅಲ್ಲದೆ, ಬಳಿಕ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಅಜಯ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 189(2), 191(2), 115(2), 324(5) , 352, 307 ಮತ್ತು 190 ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
2. ಧರ್ಮಸ್ಥಳ ಠಾಣೆಯಲ್ಲಿ ಎರಡೇ ಎಫ್‌ಐಆರ್ ಅನ್ನು ಪೊಲೀಸರು ಸ್ವಯಂ (ಸುಮೋಟೋ) ದಾಖಲಿಸಿಕೊಂಡಿದ್ದಾರೆ.
ಬುಧವಾರ ಸಂಜೆ ಪಾಂಗಳ ಕ್ರಾಸ್ ಬಳಿ ಸುಮಾರು 25 ರಿಂದ 50 ಜನರು ಎರಡು ಪ್ರತ್ಯೇಕ ಗುಂಪುಗಳಾಗಿ ಅಪರಾಧ ಕೃತ್ಯ ನಡೆಸಲು ಅಕ್ರಮ ಕೂಟ ಸೇರಿದ್ದು, ಈ ವೇಳೆ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗೆ ನಡೆಸದೇ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿ, ಸೇರಿದ್ದ ಗುಂಪುಗಳು ಪರಸ್ಪರ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189(2), 191(2), 132, 324(6) ಮತ್ತು 190ರ ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
3. ಧರ್ಮಸ್ಥಳ ಠಾಣೆಯಲ್ಲಿ ಮೂರನೇ ಎಫ್‌ಐಆರ್ ಕೂಡ ಪೊಲೀಸರು ಸ್ವಯಂ ದಾಖಲಿಸಿಕೊಂಡಿದ್ದಾರೆ. ಇದೂ ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ಬಳಿ ಬುಧವಾರ (ಆ.6) ಸಂಜೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದೆ.
ಸುಮಾರು 50 ರಿಂದ 100 ಮಂದಿ ಧರ್ಮಸ್ಥಳ ಠಾಣಾ ಆವರಣ ಮುಂದೆ ಯಾವುದೇ ಪೂರ್ವಾನುಮತಿಯಿಲ್ಲದೇ, ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿದ್ದಾರೆ ಎಂದು ಆರೋಪಿಸಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 189(2) ಮತ್ತು 190ರ ಅಡಿ ಕ್ರಮ ಕೈಗೊಂಡಿದ್ದಾರೆ.
4. ಇನ್ನು ಧರ್ಮಸ್ಥಳ ಠಾಣೆಯಲ್ಲಿ ನಾಲ್ಕನೇ ಪ್ರಕರಣ ಬೆಳ್ತಂಗಡಿ ನಿವಾಸಿ ಪ್ರಮೋದ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ದಾಖಲಾಗಿದೆ. ಪಾಂಗಳ ಕ್ರಾಸ್‌ನಲ್ಲಿ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಕ್ಕೆ ಹಾನಿ ಮಾಡಿದ್ದಾರೆ ಎಂದು ಪ್ರಮೋದ್ ಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 189(2), 191(2), 115(2), 110, 324(3), 352, 351(2) ಮತ್ತು 190 ಅಡಿ ಎಫ್‌ಐಆರ್ ದಾಖಲಾಗಿದೆ.
5. ಬೆಳ್ತಂಗಡಿ ಠಾಣೆಯಲ್ಲಿ ಮೊದಲ ಎಫ್‌ಐಆರ್ ಎಷ್ಯಾನೆಟ್ ಸುವರ್ಣ ನ್ಯೂಸ್‌ನ ಕ್ರೈ ರಿಪೋರ್ಟರ್, ಬೆಂಗಳೂರು ನಿವಾಸಿ ಹರೀಶ್ ಆರ್ ನೀಡಿದ ದೂರು ಆಧರಿಸಿ ದಾಖಲಾಗಿದೆ.
ಧರ್ಮಸ್ಥಳ ಪಾಂಗಳ ಕ್ರಾಸ್‌ನಲ್ಲಿ ನಡೆದ ಹಲ್ಲೆ ಘಟನೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆ ಬೆನಕ ಆಸ್ಪತ್ರೆಯ ಬಳಿ ತೆರಳಿದ್ದೆ. ಅಲ್ಲಿ ಗಿರೀಶ್ ಮಟ್ಟಣ್ಣನವರ್ ಅವರೊಂದಿಗೆ ವಿಡಿಯೋ ಬೈಟ್ ಕೊಡುವಂತೆ ಕೇಳಿದ್ದೆ. ಈ ವೇಳೆ ಅವರು ನನಗೆ ಬೈದರು, ಸ್ಥಳದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರೊಂದಿಗಿದ್ದ ಇತರರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದರು. ಆಗ ಸ್ಥಳಕ್ಕೆ ಬಂದ ಯೂಟ್ಯೂಬರ್ ಸಮೀರ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹರೀಶ್ ಅರೋಪಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 189(2), 191(1) (2), 115(2), 351(2), 352 ಮತ್ತು 190 ಅಡಿ ಎಫ್‌ಐಆರ್ ದಾಖಲಾಗಿದೆ.
6. ಬೆಳ್ತಂಗಡಿ ಠಾಣೆಯಲ್ಲಿ ಎರಡನೇ ಎಫ್‌ಐಆರ್ ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ ಅವರು ಸುವರ್ಣ ನ್ಯೂಸ್ ಸಂಪಾದಕ ಹಾಗೂ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ದ ನೀಡಿರುವ ದೂರು ಆಧರಿಸಿ ದಾಖಲಾಗಿದೆ.
ಧರ್ಮಸ್ಥಳದ ಪಾಂಗಳ ಕ್ರಾಸ್‌ನಲ್ಲಿ ಹಲ್ಲೆಗೊಳಗಾದವರನ್ನು ಚಿಕಿತ್ಸೆಗಾಗಿ ಉಜಿರೆ ಬೆನಕಾ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆತಂದಿದ್ದೆ. ಗಾಯಾಳುಗಳನ್ನು ನೋಡಲು ಬಂದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರನ್ನು ಬೈಟ್ ಕೊಡುವಂತೆ ಸುವರ್ಣ ನ್ಯೂಸ್ ನ ವರದಿಗಾರ ಹಾಗೂ ಕ್ಯಾಮರಾಮ್ಯಾನ್ ತಡೆದು ನಿಲ್ಲಿಸಿದ್ದರು. ಮಹೇಶ್ ಶೆಟ್ಟಿ ಮತ್ತು ಮಟ್ಟಣ್ಣವರ್ ಬೈಟ್ ಕೊಡಲು ನಿರಾಕರಿಸಿದಾಗ ಬೈಟ್ ಕೊಡಲು ನಿರಾಕರಿಸಿದಾಗ ಸುವರ್ಣ ನ್ಯೂಸ್ ವರದಿಗಾರ ಮತ್ತು ಕ್ಯಾಮರಾ ಮ್ಯಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಾಟ ನಡೆಸಿದ್ದರು. ಈ ಘಟನೆ ನಡೆದು ಕೆಲಹೊತ್ತಿನಲ್ಲಿ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಅಜಿತ್ ಹನುಮಕ್ಕನವರ್ “ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ” ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ಸೆಕ್ಷನ್ 126(2), 296, 351 ಮತ್ತು 3(5) ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
7. ಬೆಳ್ತಂಗಡಿ ಠಾಣೆಯಲ್ಲಿ ಮೂರನೇ ಎಫ್‌ಐಆರ್ ಪೊಲೀಸರು ಸ್ವಯಂ ದಾಖಲಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದೆ.
ಬುಧವಾರ (ಆ.6) ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್‌ನಲ್ಲಿ ನಡೆದ ಹಲ್ಲೆಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಉಜಿರೆಯ ಬೆನಕ ಆಸ್ಪತ್ರೆಯ ಬಳಿ ಸಾರ್ವಜನಿಕರು ಜಮಾವಣೆಗೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು.ಈ ವೇಳೆ ಸ್ಥಳದಲ್ಲಿ ಸುಮಾರು 50 ರಿಂದ 100 ಜನರು ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ ಘೋಷಣೆಗಳನ್ನು ಕೂಗುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಸದಂತೆ ಹಾಗೂ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೂರ್ವಾನುಮತಿ ಪಡೆಯದೇ ಅಕ್ರಮಕೂಟ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 189(2)r/ w 190 ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
4 ಯೂಟ್ಯೂಬರ್‌ಗಳ ಮೇಲೆ ಹಲ್ಲೆ: ಧರ್ಮಸ್ಥಳದ ಧರ್ಮಾಧಿಕಾರಿಯ ಸರ್ವಾಧಿಕಾರಕ್ಕೆ ಅಂತಿಮ ಮೊಳೆ – ಕೆ.ಎಲ್. ಅಶೋಕ್ ಎಚ್ಚರಿಕೆ


