ಬೆಂಗಳೂರು: ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪ್ರಮಾಣ ಮಾಡುವಂತೆ ಕೇಳಿದ್ದ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ ಅವರು, “ನಾನು ಈಗಾಗಲೇ ಸಂಸತ್ತಿನಲ್ಲಿ ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಮತ ಕಳ್ಳತನದ ಬಗ್ಗೆ ಸಮಗ್ರ ವರದಿ ನೀಡಲು ಚುನಾವಣಾ ಆಯೋಗ ನಿರಾಕರಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಮಹಾರಾಷ್ಟ್ರದಲ್ಲಿನ ಮತದಾರರ ಪಟ್ಟಿಯಲ್ಲೂ ಗೊಂದಲಗಳಿವೆ ಎಂದು ಉಲ್ಲೇಖಿಸಿ, ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕದ ಒಂದು ಕೋಟಿ ಹೊಸ ಮತದಾರರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನ ರಕ್ಷಣೆ ಕೆಲಸವನ್ನು ಮಾಡಿದ್ದೇವೆ. ಈ ಒಂದು ಪವಿತ್ರವಾದ ಗ್ರಂಥದಲ್ಲಿ ಭಾರತದ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಈ ಸಂವಿಧಾನದಲ್ಲಿ ಅಂಬೇಡ್ಕರ್, ಮಹಾತ್ಮಾಗಾಂಧಿ ಜವಾಹರ ಲಾಲ್ ನೆಹರು ಅವರ ಧ್ವನಿ ಇದರಲ್ಲಿ ಕೇಳಿ ಬರುತ್ತದೆ. ಅಷ್ಟು ಮಾತ್ರವಲ್ಲದೇ ಬಸವಣ್ಣ, ಪುಲೆ ಮುಂತಾದ ಎಲ್ಲರ ಧ್ವನಿ ಕೇಳಿ ಬರುತ್ತದೆ ಎಂದು ಅವರು ತಿಳಿಸಿದರು.
ಈ ನಮ್ಮ ಗ್ರಂಥದ ಮೂಲಭೂತ ಅಡಿಪಾಯವೆಂದರೆ ಒಬ್ಬ ವ್ಯಕ್ತಿಗೆ ಒಂದೇ ಮತದಾನದ ಹಕ್ಕು ಎನ್ನುವುದಾಗಿದೆ. ಪ್ರತಿಯೊಬ್ಬರ ಪ್ರಜೆಗೂ ಈ ಸಂವಿಧಾನದ ಮೂಲಕ ಒಂದೇ ಒಂದು ಮತದಾನದ ಹಕ್ಕು ಕೊಡುವಂತಹದ್ದಾಗಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು, ಮೋದಿಯವರು ಈ ಸಂವಿಧಾನದ ಮೇಲೆ ಬೇರೆ ಬೇರೆ ಪ್ರಹಾರ ಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಈ ಬಿಜೆಪಿಯವರು ದೇಶದ ವಿವಿಧ ಸಂಸ್ಥೆಗಳನ್ನು ಬಳಸಿಕೊಂಡು ಪ್ರಹಾರ ಮಾಡಿ ಸಂವಿಧಾನವನ್ನು ಮುಗಿಸುವ ಸಂಚು ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಮುಂದೆ ಒಂದು ಪ್ರಶ್ನೆ ಉದ್ಭವಿಸಿತು. ನಾವೇಕೆ ಸೋಲನ್ನು ಅನುಭವಿಸುತ್ತಿದ್ದೇವೆ ಎಂಬುದೇ ಆ ಪ್ರಶ್ನೆಯಾಗಿತ್ತು ಎಂದು ರಾಹುಲ್ ಹೇಳಿದರು.
ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ನಡೆದ ಬೆನ್ನಲ್ಲೆ ವಿಧಾನಸಭೆ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯ ನಂತರದ ನಡೆದ ಮಹಾರಾಷ್ಟದ ವಿಧಾನಸಭೆಯ ಚುನಾವಣೆಯಲ್ಲಿ ನಾವು ಸೋಲು ಅನುಭವಿಸಿದೆವು. ಈ ವಿಧಾನಸಭೆ ಚುನಾವಣೆಯು ಲೋಕಸಭೆ ಚುನಾವಣೆ ನಡೆದ ನಂತರ ನಡೆದಿದೆ. ಅಂದರೆ ಕೇವಲ 4 ತಿಂಗಳ ಅಂತರದಲ್ಲಿ ನಡೆದ ವಿಧಾನಸಭ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ! ಇದು ಹೇಗೆ ಎಂಬುದೇ ನಮ್ಮ ಪ್ರಶ್ನೆಯಾಗಿತ್ತು ಎಂದು ರಾಹುಲ್ ತಿಳಿಸಿದರು.
ಇಂದು ಅದರ ಪರಿಣಾಮ ಏನಾಗಿದೆ? ಇಂದು ಆ ಫಲಿತಾಂಶಕ್ಕೆ ಕಾರಣವನ್ನು ನಾವು ಪತ್ತೆ ಹಚ್ಚಿದ್ದೇವೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ನಂತರ ನಡೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ 1 ಒಂದು ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದರು. ಕೇವಲ 4 ತಿಂಗಳ ಅವಧಿಯಲ್ಲಿ ಒಂದು ಕೋಟಿ ಹೊಸ ಮತದಾರರ ಸೇರ್ಪಡೆ ಹೇಗೆ ಎಂದು ರಾಹುಲ್ ಪ್ರಶ್ನಿಸಿದರು.
ಒಂದು ಕೋಟಿ ಜನ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದವರು ವಿಧಾನಸಭೆಯ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಇದರ ಪ್ರತಿಫಲ ಮಹಾರಾಷ್ಟ್ರದಲ್ಲಿ ಬಿಜೆಪಿ ಜಯ ಗಳಿಸಿ, ಅಧಿಕಾರವನ್ನು ಹಿಡಿದಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಹಾರಾಷ್ಟ್ರದ ವಿಧಾನಸಭೆಯ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟ ಪಕ್ಷಗಳಲ್ಲಿ ಯಾವುದೇ ಮತ ಗಳಿಕೆಯಲ್ಲಿ ಒಂದು ಚೂರು ಕಡಿಮೆಯಾಗಿಲ್ಲ. ಅಂದರೆ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಗಳಿಸಿದ ಮತಗಳು ಮತ್ತು ವಿಧಾನಸಭೆಯಲ್ಲಿ ಗಳಿಸಿದ ಮತಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಮಗೆ ವಿಧಾನಸಭೆಯಲ್ಲಿ ಎಷ್ಟು ಮತಗಳು ದೊರೆತಿದ್ದವೋ ಅಷ್ಟು ಮತಗಳು ಲೋಕಸಭೆಯ ಚುನಾವಣೆಯಲ್ಲಿ ದೊರೆತಿದ್ದವು. ಆದರೆ ಬಿಜೆಪಿ ಜಯಗಳಿಸಲು ಕಾರಣವಾಗಿದ್ದು ಈ ಹೊಸ ಮತದಾರರ ಸೇರ್ಪೆಡೆ. ಈ ಸೇರ್ಪಡೆಯಲ್ಲಿ ಒಂದು ಕೋಟಿ ಮತದಾರರಿದ್ದಾರೆ. ಇದು ನಮ್ಮ ಸೋಲಿನ ನಿಜವಾದ ಕಾರಣವನ್ನು ಹುಡುಕುವಾಗ ನಮ್ಮಲ್ಲಿ ಈ ರೀತಿ ಪ್ರಶ್ನೆ ಹಾಕಿಕೊಳ್ಳಲು ಸಾಧ್ಯವಾಯಿತು ಎಂದು ಗಾಂಧಿ ಮಾಹಿತಿ ನೀಡಿದರು.
ಅಂದೇ ನಾವು ಒಂದು ತೀರ್ಮಾನ ಮಾಡಿದೆವು. ಇದರಲ್ಲಿ ಏನೋ ಒಂದು ಸಂದೇಹವಿದೆ ಎಂದು. ಈ ಕುರಿತು ನಮ್ಮ ಶೋಧನೆಯನ್ನು ಮುಂದುವರಿಸಿದೆವು. ನಮಗೆ ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಸಮೀಕ್ಷೆ 15-16 ಸೀಟು ಬರುತ್ತದೆ ಎಂದು ಅಂದಾಜಿಸಿತ್ತು. ನಮ್ಮ ಅಂತರಿಕ ಸಮೀಕ್ಷೆ 16 ಗೆಲ್ಲುತ್ತೇವೆ ಎಂದು ಹೇಳಿತ್ತು. ಆದರೆ ನಮಗೆ ಫಲಿತಾಂಶ ಸಿಕ್ಕಿದ್ದು ಕೇವಲ 9 ಮಾತ್ರ. ಆಗಲೇ ನಾವು ಪ್ರಶ್ನೆ ಮಾಡಲು ಶುರುಮಾಡಿದೆವು ಎಂದು ರಾಹುಲ್ ಹೇಳಿದರು.
ನಾವು ಎಲ್ಲಾ ಚುನಾವಣೆಗಳಲ್ಲಿ ಸೋತಿತ್ತು ಈ ರೀತಿಯದ್ದೇ? ಎಂಬ ಪ್ರಶ್ನೆ ಕಾಡಾಲಾರಂಭಿಸಿತು. ಇದರ ವಾಸ್ತವಾಂಶವನ್ನು ತಿಳಿದುಕೊಳ್ಳಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆವು. ಈ ಕುರಿತು ಸಮಗ್ರ ವರದಿ ಕೇಳಿದೆವು. ಒಟ್ಟು ಮತದಾರರ ಪಟ್ಟಿಯನ್ನು ನೀಡಲು ಮನವಿ ಮಾಡಿದರೆ ಅದನ್ನು ಈಗಾಗಲೇ ಆಯೋಗವು ಬದಲಿಸಿ ಬಿಟ್ಟಿದೆ. ಆದರ ಜೊತೆಗೆ ಹೊಸ ಆದೇಶ ಹೊರಡಿಸಿ ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ರೆಕಾರ್ಡ್ ಅನ್ನು ಅಳಿಸಿ ಹಾಕಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇದನ್ನೆಲ್ಲಾ ಅರಿತು ನಾವು ಒಂದು ಲೋಕಸಭೆ ಚುನಾವಣೆ ಸಮೀಕ್ಷೆ ಮಾಡಿದೆವು. ರಾಜ್ಯದ ಬೆಂಗಳೂರು ಮಹಾದೇವಪುರ ಕ್ಷೇತ್ರ ವಿಶ್ಲೇಷಣೆ ಮಾಡಿದೆವು. ನೀವು ನಿನ್ನೆ (ಜು.7) ನಾನು ದೆಹಲಿಯಲ್ಲಿ ಮಾಡಿದ ಪತ್ರಿಕಾಗೋಷ್ಠಿ ಕೇಳಿದ್ದೀರಿ. ಅದರಲ್ಲಿ ಹೇಳಿದ್ದು 100% ಸಾಬೀತು ಮಾಡುತ್ತೇವೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಮಾಡಿರುವ ಮೋಸವನ್ನು ನಾವು ಸಾಬೀತು ಮಾಡಲು ಸಿದ್ದರಿದ್ದೇವೆ. ಮಹಾದೇವಪುರ ಕ್ಷೇತ್ರದಲ್ಲಿ 6.5 ಲಕ್ಷ ಮತಗಳಿವೆ. ಅದರಲ್ಲಿ 1 ಲಕ್ಷ 2,250 ಮತಗಳು ಮತಗಳ್ಳತನವಾಗಿದೆ ಎಂದು ಘಂಟಾಘೋಷವಾಗಿ ಹೇಳುತ್ತೇವೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
ಮಹಾದೇವಪುರದಲ್ಲಿ 6ರಲ್ಲಿ ಒಂದು ಮತವನ್ನು ಕಳ್ಳತನ ಮಾಡಲಾಗಿದೆ. ಈ ಮಹಾದೇವಪುರದಲ್ಲಿ 5 ವಿಧಗಳಲ್ಲಿ ಮತಗಳ್ಳತನವಾಗಿದೆ. ದ್ವಿಪ್ರತಿಯಲ್ಲಿ ಹಲವರು ಬಾರಿ ಒಬ್ಬ ವ್ಯಕ್ತಿಯ ಹೆಸರು ಬರುತ್ತದೆ. 5 ಮತಗಟ್ಟೆಗಳಲ್ಲಿ ಹೋಗಿ ಈ ಒಬ್ಬ ವ್ಯಕ್ತಿ ಮತದಾನ ಮಾಡಿ ಬರುತ್ತಾನೆ. ಈ ರೀತಿಯಲ್ಲಿ 12 ಸಾವಿರ ಕಳ್ಳತನವನ್ನು ನಾವು ಪತ್ತೆ ಮಾಡಿದ್ದೇವೆ. ನಕಲಿ ವಿಳಾಸದಲ್ಲಿ ಇರುವ 40 ಸಾವಿರ ನಕಲಿ ಮತದಾರರನ್ನು ಗುರುತಿಸಿದ್ದೇವೆ. ಒಂದೇ ಕೊಠಡಿ ಹೊಂದಿರುವ ಮನೆಯಲ್ಲಿ 40ರಿಂದ 60, 80 ಮತದಾರರಿದ್ದಾರೆ. ಅಲ್ಲಿಗೆ ನಮ್ಮ ಪಕ್ಷದ ಜನರನ್ನು ಕಳುಹಿಸಿ ಪರಿಶೀಲಿಸಿದರೆ ಅಲ್ಲಿ ಯಾರು ಕೂಡ ವಾಸವಿರುವುದಿಲ್ಲ. ಅಂದರೆ ಅಲ್ಲಿ ಅಷ್ಟು ಮತದಾರರು ಇರಲಿಲ್ಲ. ಎಲ್ಲವೂ ಬೊಗಸ್ ಆಗಿದ್ದ ಮತದಾರರೇ ಆಗಿದ್ದರು. ಅಲ್ಲಿಯ ಮನೆಯ ಮಾಲೀಕ ಬಿಜೆಪಿ ಪಕ್ಷದ ಒಬ್ಬ ನಾಯಕನಾಗಿರುತ್ತಾನೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು.

ಕೆಲವೊಂದು ಮತದಾರರ ಗುರುತಿನ ಚೀಟಿಯಲ್ಲಿ ಮತದಾರರ ಪೋಟೊ ಸಿಗುವುದಿಲ್ಲ. ಅದರ ಜೊತೆಗೆ 32 ಸಾವಿರ ಹೊಸ ಮತದಾರರಿದ್ದು, ಇದು ನಮೂನೆ 6ರಲ್ಲಿಅವ್ಯವಹಾರ ನಡೆದಿದೆ ಎಂಬುದನ್ನು ನಾವು ಕಂಡು ಕೊಂಡಿದ್ದೇವೆ. ಈ 6ರ ನಮೂನೆಯು ನೂತನ ಮತದಾರರನ್ನು ಸೇರ್ಪಡೆ ಮಾಡುವ ನಮೂನೆಯಾಗಿದೆ. ಇದರಲ್ಲಿ 34 ಸಾವಿರ ಈ ರೀತಿ ಜನ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 85 ವಯಸ್ಸಿನ, 90 ವಯಸ್ಸಿನ ಜನ ಅಲ್ಲಿ ಇದ್ದಾರೆ. ಇಷ್ಟು ವಯಸ್ಸಿನ ಜನ ಅದು ಹೇಗೆ ಹೊಸ ಮತದಾರರಾಗುತ್ತಾರೆ? ಈ ರೀತಿಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗವು ಈ ಮಹಾದೇವಪುರ ಕ್ಷೇತ್ರ ಒಂದರಲ್ಲೇ 1 ಲಕ್ಷ ಮತ ಕಳ್ಳತನವನ್ನು ಮಾಡಿದ್ದನ್ನು ನೋಡಿದ್ದೇವೆ ಎಂದು ರಾಹುಲ್ ಆರೋಪಿಸಿದರು.
ಇಲ್ಲಿಯ ಒಬ್ಬ ನಕಲಿ ಮತದಾರರ ಉತ್ತರಪ್ರದೇಶಕ್ಕೆ ಹೋಗಿ ಮತ ಚಲಾಯಿಸುತ್ತಾನೆ. ಹಾಗೆಯೇ ಮಹಾರಾಷ್ಟ್ರಕ್ಕೆ ಹೋಗಿ ಮತ ಹಾಕುತ್ತಾನೆ. ಒಬ್ಬ ವ್ಯಕ್ತಿಗೆ ಮತದಾನದ ಹಕ್ಕು ಬೆಂಗಳೂರು, ಲಕ್ನೋ, ವಾರಾವಾಸಿಯಲ್ಲಿಯೂ ಕೊಟ್ಟಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ರಾಹುಲ್ ಹೇಳಿದರು.
ಚುನಾವಣೆ ಆಯೋಗವು ಈ ನಮ್ಮ ಆರೋಪಗಳ ಕುರಿತು ಪ್ರಮಾಣ ಮಾಡಬೇಕು, ನಮ್ಮ ಮುಂದೆ ಬಂದು ಪ್ರಮಾಣ ಮಾಡಿ ಎಂದು ಕೇಳುತ್ತಿದ್ದಾರೆ. ನಾನು ಸಂಸತ್ ಭವನದಲ್ಲೇ ಪ್ರತಿಜ್ಞೆ ಮಾಡಿದ್ದಾನೆ. ಸಂವಿಧಾನದ ಮೇಲೆ ಕೈಯಿಟ್ಟು ಪ್ರತಿಜ್ಞೆ ಮಾಡಿದ್ದೇನೆ. ನಾನು ಹೇಳುವುದು ಸತ್ಯವೇ ಆಗಿದೆ ಎಂದು ರಾಹುಲ್ ಗುಡುಗಿದರು.
ಈ ಆರೋಪವನ್ನು ನಿನ್ನೆ (ಜು.7) ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದೇನೆ. ಈ ಕುರಿತು ದೇಶದ ಪ್ರಜೆಗಳು ಚುನಾವಣಾ ಅಯೋಗದ ವೆಬ್‌ಸೈಟ್ ನಲ್ಲಿ ಪ್ರಶ್ನೆ ಮಾಡಿದಾಗ, ಕೆಲ ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗಿದೆ. ಯಾಕೆಂದರೆ ಇದು ಆಯೋಗಕ್ಕೆ ಮನವರಿಕೆಯಾಗಿದೆ. ನನ್ನ ಆರೋಪಗಳ ಕುರಿತು ದೇಶದ ಪ್ರಜೆಗಳು ಪ್ರಶ್ನೆ ಮಾಡಿದರೆ ಅವರ ಒಂದು ನಾಟಕ ಮುಗಿಯುವ ಭಯ ಬಂದಿದೆ. ಬಿಹಾರ, ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ಗಳು ಬಂದ್ ಅಗಿವೆ ಎಂದು ರಾಹುಲ್ ಆರೋಪಿಸಿದರು.
ನಾನು ಈ ಪ್ರತಿಭಟನಾ ವೇದಿಕೆಯಲ್ಲಿ ಮನವಿ ಏನೆಂದರೆ ನಡೆದಿರುವ ಲೋಕಸಭಾ ಚುನಾವಣೆಗಳ ಮಾಹಿತಿಯನ್ನು ಡಿಜಿಟಲ್ ಪಾರ್ಮ್ ನಲ್ಲಿ ನಮಗೆ ಕೊಡಿ ಎಂದು. ಅಂದಿನ ರೆಕಾರ್ಡ್ ನಮಗೆ ಕೊಡಿ ಎಂದು ನಾವು ಕೇಳಿದ್ದೇವೆ. ಇವತ್ತು ಮಾಹಿತಿಯನ್ನು ಕೊಟ್ಟರೆ ನಮ್ಮ ಆರೋಪವನ್ನು ಸಾಬೀತು ಮಾಡಿ ತೋರಿಸುತ್ತೇವೆ ಎಂದು ರಾಹುಲ್ ಸವಾಲು ಹಾಕಿದರು.
ಈ ಮತಕಳ್ಳತನ ಈ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಆಗಿದೆ. ಇಂದು ಚುನಾವಣಾ ಆಯೋಗ ಬಿಜೆಪಿಯ ಪರವಾಗಿ ಇದೆ. ಆಯೋಗವು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದೆ. ಇವತ್ತು ಕರ್ನಾಟಕದಲ್ಲಿ ಒಂದು ಕ್ಷೇತ್ರದಲ್ಲಿ ಪರಿಶೀಲನೆ ಮಾಡಿ ಚುನಾವಣಾ ಆಯೋಗದ ಮತಕಳ್ಳತನವನ್ನು ಸಾಬೀತು ಮಾಡಿದ್ದೇವೆ. ಈ ರಾಜ್ಯದಲ್ಲಿ ಇನ್ನು ಹಲವು ಕ್ಷೇತ್ರಗಳನ್ನು ಪರಿಶೀಲನೆ ಮಾಡಿದರೆ ಇಂತಹ ಹಲವು ಉದಾಹರಣೆ ಸಿಗುತ್ತವೆ ಎಂದು ರಾಹುಲ್ ದೃಢಪಡಿಸಿದರು.
ಇಂದು ಸಂವಿಧಾನದ ಮೂಲ ಧ್ಯೇಯ ಒಬ್ಬ ವ್ಯಕ್ತಿಗೆ ಒಂದು ಮತದಾನದ ಹಕ್ಕು. ಇದನ್ನು ಉಲ್ಲಂಘಿಸಿ ಚುನಾವಣಾ ಆಯೋಗವು ಸಂವಿಧಾನದ ಮೇಲೆ ಹಲ್ಲೆ ಮಾಡಿದೆ. ಇದು ರಾಜ್ಯದ ಬಡವರ, ಕಾರ್ಮಿಕರ, ರೈತರ, ಮಹಿಳೆಯರ ಮೇಲೆ ನಡೆದ ಆಕ್ರಮಣವಾಗಿದೆ. ಚುನಾವಣಾ ಆಯೋಗವು ಬಿಜೆಪಿಯ ಮಾತನ್ನು ಕೇಳುತ್ತಿದ್ದರಿಂದ ಈ ಮೋಸವೆಲ್ಲಾ ಯಶಸ್ವಿಯಾಗುತ್ತಿದೆ. ನಾವು ಈಗ ಚುನಾವಣಾ ಆಯೋಗಕ್ಕೆ ಒಂದು ಎಚ್ಚರಿಕೆ ಕೊಡುತ್ತೇವೆ. ಆಯೋಗಕ್ಕೆ ಒಂದು ಸಮಯ ಬರುತ್ತದೆ ಎಂದು ಹೇಳುತ್ತೇವೆ. ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ರಾಹುಲ್ ಗಾಂಧಿ ಗುಡುಗಿದರು.
ಇಂತಹ ಹಲವಾರು ಮೋಸಗಳನ್ನು ದೇಶಾದ್ಯಂತ ಹುಡುಕಿ ಕೊಡುತ್ತೇವೆ. ಈ ರೀತಿಯ ಮತಗಳ್ಳತನ ಸಂವಿಧಾನದ ಮೇಲಿನ ಹಲ್ಲೆಯಾಗಿದೆ. ಈ ರೀತಿ ಮಾಡಿದರೆ ಚುನಾವಣಾ ಆಯೋಗದ ಮೇಲೆ ನಾವು ಹಲ್ಲೆ ಮಾಡುತ್ತೇವೆ. ಸಂವಿಧಾನ ನಮ್ಮ ಪವಿತ್ರ ಗ್ರಂಥ ಮತ್ತು ಅದು ದೇಶದ ಜನರ ಧ್ವನಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ನರೇಂದ್ರ ಮೋದಿಯವರು ಕೇವಲ 25 ಸ್ಥಾನಗಳಿಂದ ಪ್ರಧಾನಿಯಾಗಿದ್ದಾರೆ. ಅಂದರೆ ಮತ ಕಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ. ಈಗ ಒಂದು ಸ್ಥಾನದಲ್ಲಿ ಮತಗಳ್ಳತನವಾಗಿದ್ದನ್ನು ಸಾಬೀತುಮಾಡಿ ತೋರಿಸಿದ್ದೇವೆ. ಬಿಜೆಪಿಯು 25 ಸ್ಥಾನಗಳಲ್ಲಿ 35 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇಲ್ಲೆಲ್ಲಾ ಮತಗಳ್ಳನತನವಾಗಿರುವ ಸಾಧ್ಯತೆ ಇದೆ ಎಂದು ರಾಹುಲ್ ಆರೋಪಿಸಿದರು.
ಚುನಾವಣಾ ಆಯೋಗವು ನಮಗೆ ಸರಿಯಾದ ಮಾಹಿತಿಯನ್ನು ಕೊಟ್ಟರೆ ಸಾಕ್ಷಿ ಸಮೇತ ಮತಗಳ್ಳತನವನ್ನು ತೋರಿಸುತ್ತೇವೆ. ಈ ರೀತಿಯಾಗಿ ಮತ ಕಳ್ಳತನ ಮಾಡಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ ಎಂದು ಸಾಬೀತು ಮಾಡುತ್ತೇವೆ. ಇಂದು ಇಡೀ ದೇಶ ಒಕ್ಕೊರಲಿನಿಂದ ಪ್ರಶ್ನೆ ಮಾಡುತ್ತಿದೆ. ನಡೆದ ಚುನಾವಣೆಗಳ ಡಿಜಿಟಲ್ ಮಾಹಿತಿ ಕೊಡಿ ಎನ್ನುತ್ತಿದ್ದೇವೆ. ಇದನ್ನು ನಾನು ಒಬ್ಬಂಟಿಯಾಗಿ ಮಾತನಾಡುತ್ತಿಲ್ಲ. ಈ ದೇಶದ ಎಲ್ಲ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಹಾಗಾಗಿ ಚುನಾವಣಾ ಆಯೋಗವು ಈ ಕುರಿತು ಮಾಹಿತಿ ಬಹಿರಂಗಪಡಿಸಬೇಕು ಎಂದು ರಾಹುಲ್ ಒತ್ತಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಮತಗಳ್ಳತನದ ಮಾಹಿತಿ ಕುತಂತ್ರದ ಒಂದು ಸಾಕ್ಷಿಯಾಗಿದೆ. ಈ ಮಾಹಿತಿಯನ್ನು ಕಲೆಹಾಕಲು ನಮಗೆ 6 ತಿಂಗಳು ಕಾಲಾವಧಿ ತಗೆದುಕೊಂಡಿದೆ. 7 ಅಡಿ ಎತ್ತರದ ಕಾಗದಪತ್ರ ಪರಿಶೀಲನೆ ಮಾಡಿದ್ದೇವೆ. 1 ಭಾವಚಿತ್ರಕ್ಕಾಗಿ ಲಕ್ಷಾಂತರ ಭಾವಚಿತ್ರಗಳನ್ನು ಪರಿಶೀಲನೆ ಮಾಡಿದ್ದೇವೆ. ಎಲ್ಲಾ ಹೆಸರುಗಳನ್ನು ಪರಿಶೀಲನೆ ಮಾಡಿದ್ದೇವೆ ಎಂದು ರಾಹುಲ್ ತಾವು ಮತಗಳ್ಳತನವನ್ನು ಬಯಲು ಮಾಡುವುದಕ್ಕಾಗಿ ತಾವು ಏನೆಲ್ಲಾ ಮಾಡಿದೆವು ಎಂಬುದನ್ನು ಹೇಳಿದರು.
ಇಂದು ದೇಶದಲ್ಲಿ ಈ ರೀತಿ ಪ್ರಶ್ನೆ ಮಾಡಿದರೆ ಅವರನ್ನು ನಾಶ ಮಾಡುವ ಕುತಂತ್ರದಲ್ಲಿದ್ದಾರೆ. ಈ ಕುತಂತ್ರ ಮುಂದುವರಿಸುತ್ತಾ ಹೋಗುತ್ತಾ ಇದೆ. ಆಯೋಗಕ್ಕೆ ಜನರ ಪ್ರಶ್ನೆ ಮಾಡುತ್ತಿದ್ದಾರೆ. ನಮಗೆ ಒಂದು ಸ್ಥಾನವನ್ನು ಪರಿಶೀಲನೆ ಮಾಡಲು 6 ತಿಂಗಳು ಬೇಕಾಯಿತು. ಆಯೋಗವು ಮಾಹಿತಿ ಕೊಟ್ಟಿಲ್ಲವೆಂದರೆ 20 ಕ್ಷೇತ್ರಗಳ ಮಾಹಿತಿ ತೆಗೆದು ಬಯಲು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ. ಆಯೋಗವು ಒಂದು ದಿನ ವಿಪಕ್ಷಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಎಚ್ಚರಿಕೆ ನೀಡಿದರು.
ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಈ ವಿಷಯ ಮನವರಿಕೆಯಾಗಬೇಕು. ಒಂದು ಚುನಾವಣಾ ಪಲಿತಾಂಶದಲ್ಲಿ ಮತಗಳ್ಳತನವಾದರೆ ಅದು ಕ್ರಿಮಿನಲ್ ಕೃತ್ಯವಾಗುತ್ತದೆ. ರಾಜ್ಯ ಸರಕಾರ ಈ ಅಪರಾಧದ ತನಿಖೆ ನಡೆಸಬೇಕು. ನ್ಯಾಯ ಕೊಡಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ಇಂದು ಆಯೋಗದ ಅಧಿಕಾರಿಗಳು ಮತಗಳ್ಳತನದ ಕುರಿತು ಮಾಹಿತಿ ನೀಡಬೇಕು. ಮಹಾದೇವಪುರದಲ್ಲಿ ನಡೆದ ವಾಸ್ತವನ್ನು ಹೊರ ತಗೆಯಬೇಕಾಗಿದೆ. ನಾನು ಮತ್ತೊಮ್ಮೆ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಸಂವಿಧಾನದಡಿ ನಾವು ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕದಲ್ಲಿ ಈ ಹಿಂದೆ ನಡೆಸಿದ ಕೆಲವು ರಾಜ್ಯ ಸರಕಾರಗಳಲ್ಲಿ ಕಳ್ಳತನವಾಗಿದೆ ಎಂದು ನಾನು ಹೇಳುತ್ತೇನೆ. ನಾನು ಮತ್ತೊಮ್ಮೆ100 ಲೋಕಸಭೆ ಚುನಾವಣೆಗಳಲ್ಲಿ ಕೂಡ ಕಳ್ಳತನವಾಗಿದೆ ಎಂದು ಹೇಳುತ್ತೇನೆ. ಬಿಜೆಪಿ ತತ್ವ ಸಿದ್ದಾಂತ ಸಂವಿಧಾನದ ವಿರೋಧವಾಗಿದೆ ಎಂದು ರಾಹುಲ್ ಆರೋಪಿಸಿದರು.
ಈ ಸಂವಿಧಾನವನ್ನು ಬಡವರು, ಕಾರ್ಮಿಕರೆಲ್ಲ ಸೇರಿ ರಕ್ಷಣೆ ಮಾಡಬೇಕಿದೆ ಮತ್ತು ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಇದರ ರಕ್ಷಣೆ ಮಾಡಬೇಕೆಂದು ಮನವಿ ಮಾಡುತ್ತೇನೆ. ಚುನಾವಣೆ ಆಯೋಗವು ಕಳೆದ 10 ವರ್ಷಗಳಲ್ಲಿ ಮತದಾನದ ಪಟ್ಟಿಯನ್ನು ಈ ಕೂಡಲೇ ಬಿಡುಗಡೆ ಮಾಡುಬೇಕು ಎಂದು ಮನವಿ ಮಾಡುತ್ತೇನೆ. ಹಾಗೆಯೇ ಮತಗಟ್ಟೆಯ ವೀಡಿಯೋ ರೆಕಾರ್ಡ್ ಬಿಡುಗಡೆ ಮಾಡಬೇಕೆಂದು ಮನವಿ ಮಾಡುತ್ತೇನೆ. ಮತ್ತೆ ಅದರ ಜೊತೆಗೆ ಆಯೋಗ ಬಿಜೆಪಿ ಸಹಕಾರ ಕೊಡುತ್ತಿದೆ ಎಂದು ಆರೋಪಿಸುತ್ತೇನೆ ಎಂದು ರಾಹುಲ್ ಹೇಳಿದರು.


