ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ವಿವಾದಿತ ಕಟ್ಟಡದ ಬಳಿಯಿದ್ದ ನವಾಬ್ ಸಮದ್ ಖಾನ್ ಅವರ ಸಮಾಧಿಯನ್ನು ಹಿಂದುತ್ವ ಗುಂಪುಗಳು ಧ್ವಸಂಗೊಳಿಸಿದ ಘಟನೆ ಸೋಮವಾರ (ಆ.11) ನಡೆದಿದೆ.
ಬಿಜೆಪಿ, ಬಜರಂಗದಳ ಸೇರಿದಂತೆ ವಿವಿಧ ಹಿಂದುತ್ವ ಗುಂಪುಗಳ ಸದಸ್ಯರು ಕೋಲುಗಳನ್ನು ಹಿಡಿದುಕೊಂಡು ಏಕಾಏಕಿ ವಿವಾದಿತ ಕಟ್ಟಡದ ಪರಿಸರಕ್ಕೆ ನುಗ್ಗಿದ್ದು, ಕಟ್ಟಡದ ಹೊರಗಡೆಯಿದ್ದ ಸಮಾಧಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ವಿಡಿಯೋಗಳು ವೈರಲ್ ಆಗಿವೆ.
At a religious shrine in Fatehpur district of Uttar Pradesh. pic.twitter.com/At3P7Hkd8o
— Piyush Rai (@Benarasiyaa) August 11, 2025
ದುಷ್ಕೃತ್ಯದಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ವರದಿಗಳ ಪ್ರಕಾರ, ಫತೇಪುರ್ ಜಿಲ್ಲೆಯ ಸದರ್ ತಾಲೂಕಿನ ರೆಡಿಯಾ ಪ್ರದೇಶದ ಅಬು ನಗರದಲ್ಲಿರುವ ಸಮಾಧಿ ಮತ್ತು ಕಟ್ಟಡ ವಿವಾದ ಕೇಂದ್ರ ಬಿಂದುವಾಗಿದೆ. ಇಲ್ಲಿನ ಸರ್ವೆ ನಂಬರ್ 753ರಲ್ಲಿ ಮಕ್ಬರಾ ಮಾಂಗಿ( ಸೂಫಿ ಸಂತರ ಸಮಾಧಿ ಇರುವ ಜಾಗ ಎಂದು ಹೇಳಬಹುದು) ಇದೆ ಎಂದು ಸರ್ಕಾರದ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ವಿಡಿಯೋಗಳಲ್ಲಿ ಇಸ್ಲಾಮಿಕ್ ಶೈಲಿಯ ಬೃಹತ್ ಪುರಾತನ ಕಟ್ಟಡ ಮತ್ತು ಅದರ ಸಮೀಪ ಸಮಾಧಿ ಇರುವುದನ್ನು ನೋಡಬಹುದು. ವರದಿಗಳ ಪ್ರಕಾರ, ಪುರಾತನ ಕಟ್ಟಡದ ಅಂಗಳದಲ್ಲಿ ನವಾಬ್ ಸಮದ್ ಖಾನ್ ಅವರ ಸಮಾಧಿ ಇದೆ. ಇದನ್ನು ಸರ್ಕಾರ ರಾಷ್ಟ್ರೀಯ ಆಸ್ತಿ ಎಂದು ಗುರುತಿಸಿದೆ.
ಸರ್ಕಾರಿ ದಾಖಲೆಗಳಲ್ಲಿ ಕೂಡ ವಿವಾದಿತ ಕಟ್ಟಡವನ್ನು ಚಕ್ರವರ್ತಿ ಔರಂಗಜೇಬರ ಆಳ್ವಿಕೆಯಲ್ಲಿ ಪೈಲಾನಿಯ ಫೌಜ್‌ದಾರ್ ಆಗಿದ್ದ ನವಾಬ್ ಅಬ್ದುಸಮದ್ ಖಾನ್ ಬಹದ್ದೂರ್ ಅವರ ಸಮಾಧಿ ಎಂದು ದಾಖಲಿಸಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಹಂಚಿಕೊಂಡಿದ್ದಾರೆ.
The building, recorded as the tomb of Nawab Abdus Samad Khan Bahadur, Faujdar of Pailani under Emperor Aurangzeb, is now claimed by Hindus, backed by the ruling BJP, as a Hindu temple, with plans announced to hold prayers there on 11 August.
— Fatehpur Gazetteer, published 1906 https://t.co/WADmFcZrij pic.twitter.com/5WhG4Lrpuy
— Indian Muslim Archives (@Rustum_0) August 10, 2025
ಆದರೆ, ಹಿಂದುತ್ವ ಗುಂಪುಗಳು ಇದು ಠಾಕೂರ್ಜಿ ಮತ್ತು ಶಿವನಿಗೆ ಅರ್ಪಿತವಾದ ದೇವಾಲಯವಾಗಿದ್ದು, ಸಾವಿರ ವರ್ಷಗಳಿಗಿಂತ ಹಳೆಯದು ಎಂದು ಹೇಳಿಕೊಂಡಿವೆ.
ಸದರ್ ತಾಲೂಕಿನಲ್ಲಿರುವ ನವಾಬ್ ಅಬ್ದುಸಮದ್ ಅವರ ಸಮಾಧಿ ವಾಸ್ತವವಾಗಿ ಸಾವಿರ ವರ್ಷಗಳಷ್ಟು ಹಳೆಯದಾದ ಠಾಕೂರ್ಜಿ ಮತ್ತು ಶಿವನ ದೇವಾಲಯವಾಗಿದೆ ಎಂದು ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮುಖ್ಲಾಲ್ ಪಾಲ್ ಆರೋಪಿಸಿದ ನಂತರ ವಿವಾದ ಭುಗಿಲೆದ್ದಿದೆ. ಕಟ್ಟಡದ ಒಳಗೆ ಕಮಲದ ಹೂವು ಮತ್ತು ತ್ರಿಶೂಲ ಇದೆ ಎಂದು ತಮ್ಮ ಆರೋಪಕ್ಕೆ ಹಿಂದುತ್ವ ಗುಂಪುಗಳು ಪುರಾವೆಯಾಗಿ ಉಲ್ಲೇಖಿಸಿದೆ.
ವರದಿಗಳ ಪ್ರಕಾರ, ಮುಖ್ಲಾಲ್ ಪಾಲ್ ಅವರು ಸನಾತನಿಗಳು ಸೋಮವಾರ ಬೆಳಿಗ್ಗೆ 9 ಗಂಟೆಗೆ ಪುರಿ ಠಾಕೂರ್ ಡಾಕ್ ಬಂಗಲೆಯಿಂದ ಮೆರವಣಿಗೆ ನಡೆಸಿ, ವಿವಾದಿತ ಜಾಗದಲ್ಲಿ ಪೂಜೆ ಸಲ್ಲಿಸಲು ಸೇರುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ.
ಅವರ ಕರೆಯ ನಂತರ, ಹಿಂದುತ್ವ ಸಂಘಟನೆಯ ಸದಸ್ಯರು ಸಮಾಧಿಯ ಹೊರಗಿನ ಪ್ರದೇಶವನ್ನು ಧ್ವಂಸಗೊಳಿಸಿದ್ದಾರೆ. ಉದ್ರಿಕ್ತರು ಪೂಜೆ ಸಲ್ಲಿಸಲು ಮುಂದಾಗಿದ್ದು ಬಿಗುವಿನ ವಾತಾವರಣ ಸೃಷ್ಟಿಸಿತ್ತು ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿರುವ ವಿಡಿಯೋಗಳಲ್ಲಿ ಕೈಯಲ್ಲಿ ಕೇಸರಿ ಧ್ವಜ ಮತ್ತು ಕೋಲುಗಳನ್ನು ಹಿಡಿದು ವಿವಾದಿತ ಕಟ್ಟಡದ ಪ್ರದೇಶಕ್ಕೆ ನುಗ್ಗಿದ ಹಿಂದುತ್ವ ಗುಂಪು, ಪುರಾತನ ಕಟ್ಟಡ ಮತ್ತು ಸಮಾಧಿಯ ಸುತ್ತ ದಾಂದಲೆ ನಡೆಸಿದ್ದನ್ನು ನೋಡಬಹುದು. ದುಷ್ಕರ್ಮಿಗಳು ಜೈಶ್ರೀರಾಮ್ ಘೋಷಣೆ ಕೂಗಿರುವುದು ಮತ್ತು ಪೊಲೀಸರ ಮುಂದೆಯೇ ವಿವಾದಿತ ಜಾಗಕ್ಕೆ ನುಗ್ಗುವುದು ಕೂಡ ವಿಡಿಯೋದಲ್ಲಿ ಇದೆ.
1992 rerun?
Situation tense in Fatehpur district of Uttar Pradesh. Members of right wing group armed with lathies have stormed into premises of a "disputed" structure. While one group claims it is there religious shrine, a strong mob of the right wing groups had already… pic.twitter.com/ERyUWXUd4N
— Piyush Rai (@Benarasiyaa) August 11, 2025
ಘಟನೆಯ ನಂತರ ಜಿಲ್ಲಾಡಳಿತ ಭಾರೀ ಪೊಲೀಸ್ ಮತ್ತು ಪಿಎಸಿ ಪಡೆಗಳನ್ನು ನಿಯೋಜಿಸಿದೆ ಮತ್ತು ವಿವಾದಿತ ಸ್ಥಳದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಮತ್ತಷ್ಟು ಅಶಾಂತಿ ಉಂಟಾಗದಂತೆ ಎಚ್ಚರ ವಹಿಸಿದೆ ಎಂದು ವರದಿಯಾಗಿದೆ.
ವಿವಾದಿತ ಪ್ರದೇಶದೊಳಗೆ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳಲು ಜಿಲ್ಲಾ ಅಧಿಕಾರಿಯ ಆದೇಶದ ಮೇರೆಗೆ ಬ್ಯಾರಿಕೇಡ್ ಹಾಕಲಾಗುತ್ತಿದೆ.
ಫತೇಪುರ್ ಬಜರಂಗದಳ ಜಿಲ್ಲಾ ಸಹ-ಸಂಚಾಲಕ ಧರ್ಮೇಂದ್ರ ಸಿಂಗ್ ಕೂಡ ಸಮಾಧಿಯಲ್ಲಿ ಪೂಜೆ ಸಲ್ಲಿಸುವ ಬಗ್ಗೆ ಘೋಷಿಸಿದ್ದರು. “ನಾವು ಮಧ್ಯಾಹ್ನ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಆಡಳಿತವು ನಮ್ಮನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಜ್ಯ ಉಪಾಧ್ಯಕ್ಷ ವೀರೇಂದ್ರ ಪಾಂಡೆ ಅವರು ಈ ಸ್ಥಳವು ಭಗವಾನ್ ಭೋಲೆನಾಥ ಮತ್ತು ಶ್ರೀಕೃಷ್ಣನಿಗೆ ಅರ್ಪಿತವಾದ ದೇವಾಲಯವಾಗಿದೆ, ಸಮಾಧಿಯಲ್ಲ ಎಂದು ಹೇಳಿದ್ದಾರೆ.
ಧಾರ್ಮಿಕ ಚಿಹ್ನೆಗಳು, ಪರಿಕ್ರಮ ಮಾರ್ಗ ಮತ್ತು ದೇವಾಲಯವನ್ನು ಅವರು ಸಾಕ್ಷಿಯಾಗಿ ತೋರಿಸಿದ್ದು, ಆಗಸ್ಟ್ 16 ರಂದು ಜನ್ಮಾಷ್ಟಮಿ ಆಚರಣೆಗಾಗಿ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕು ಎಂದಿದ್ದಾರೆ.
“ನಾವು ಹತ್ತು ದಿನಗಳ ಹಿಂದೆಯೇ ಆಡಳಿತಕ್ಕೆ ಮಾಹಿತಿ ನೀಡಿದ್ದೆವು. ಆದರೆ, ಅವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ” ಎಂದು ಪಾಂಡೆ ಹೇಳಿದ್ದು, ಇದು ಹಿಂದೂಗಳ ನಂಬಿಕೆಯ ಕೇಂದ್ರ ಸ್ಥಳ, ಮರಳಿ ಪಡೆಯುತ್ತೇವೆ ಎಂದಿದ್ದಾರೆ.
ಇಂಡಿಯಾ ಟುಡೇ ಪ್ರಕಾರ, ಆಡಳಿತವು ಭೂಮಿಯನ್ನು ಅಧಿಕೃತವಾಗಿ ರಾಷ್ಟ್ರೀಯ ಆಸ್ತಿ ಸಮಾಧಿ ಎಂದು ದಾಖಲಿಸಲಾಗಿದೆ ಎಂದು ಪುನರುಚ್ಚರಿಸಿದೆ. ಅಧಿಕಾರಿಗಳು ಮತ್ತಷ್ಟು ಉದ್ವಿಗ್ನತೆ ಉಂಟಾಗದಂತೆ ತಡೆಯಲು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ರಾಷ್ಟ್ರೀಯ ಉಲಮಾ ಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ನಸೀಮ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಇತಿಹಾಸವನ್ನು ವಿರೂಪಗೊಳಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಎಂದಿದ್ದಾರೆ.
ಅಸ್ಸಾಂನಲ್ಲಿ ತೆರವು ಕಾರ್ಯಾಚರಣೆ: ಮುಂದಿನ ವರ್ಷ ನಡೆಯುವ ಚುನಾವಣೆಗಾಗಿ ‘ನರೇಟಿವ್’ ಸೃಷ್ಟಿ ಎಂದು ತಜ್ಞರ ಆರೋಪ


