ಕಳಸ: ಕಳಸ ಸಮೀಪದ ಸಂಸೆ ಗ್ರಾಮದ ದಲಿತ ಯುವಕ ನಾಗೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುದುರೆಮುಖ ಪೊಲೀಸರ ವಿರುದ್ಧ ಜನಶಕ್ತಿ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರ ದೌರ್ಜನ್ಯ ಹಾಗೂ ಸ್ಥಳೀಯ ಗೂಂಡಾಗಳ ಹಲ್ಲೆಯೇ ನಾಗೇಶ್ ಸಾವಿಗೆ ನೇರ ಕಾರಣ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ. ಈ ಕೂಡಲೇ ತಪ್ಪಿತಸ್ಥ ಪೊಲೀಸರು ಮತ್ತು ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಮಿತಿ ಎಚ್ಚರಿಕೆ ನೀಡಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಸಂಘಟನೆ ತಿಳಿಸಿರುವ ಪ್ರಕಾರ, ನಾಗೇಶ್ ಮೇಲೆ ಕುದುರೆಮುಖ ಪೊಲೀಸ್ ಸಿಬ್ಬಂದಿ ಸಿದ್ದೇಶ್ ಮತ್ತು ಸ್ಥಳೀಯ ಮೇಲ್ಜಾತಿ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ, ನಾಗೇಶ್ ಅವರ ಬದುಕಿಗೆ ಆಧಾರವಾಗಿದ್ದ ಆಟೋವನ್ನು ಸುಳ್ಳು ಪ್ರಕರಣ ದಾಖಲಿಸಿ ಜಪ್ತಿ ಮಾಡಲಾಗಿದೆ. ಇದರಿಂದ ತೀವ್ರವಾಗಿ ನೊಂದ ನಾಗೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಪೊಲೀಸರು ಮತ್ತು ಗೂಂಡಾಗಳು ಸೇರಿಕೊಂಡು ನಡೆಸಿದ ವ್ಯವಸ್ಥಿತ ದೌರ್ಜನ್ಯ ಎಂದು ಸಂಘಟನೆ ಖಂಡಿಸಿದೆ.
ಸಂಘಟನೆಯ ಪ್ರಮುಖ ಬೇಡಿಕೆಗಳು ಇವು:
ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಸಿದ್ದೇಶ್ ಅವರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿ, ಕೊಲೆ ಪ್ರಕರಣ ದಾಖಲಿಸಬೇಕು.
ಸುಳ್ಳು ಪ್ರಕರಣ ದಾಖಲಿಸಿ, ನಾಗೇಶ್ ಆತ್ಮಹತ್ಯೆಗೆ ಕಾರಣರಾದ ಕುದುರೆಮುಖ ಸಬ್ ಇನ್ಸ್‌ಪೆಕ್ಟರ್ ಆದರ್ಶ್ ಅವರನ್ನು ಕೂಡಲೇ ಬಂಧಿಸಿ, ಅವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು.
ಹಲ್ಲೆ ನಡೆಸಿದ ಸ್ಥಳೀಯ ಗೂಂಡಾಗಳಾದ ರಕ್ಷಿತ್ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಬೇಕು.
ಪೊಲೀಸ್ ಇಲಾಖೆಯೇ ನಾಗೇಶ್ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರಬೇಕು.
ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಮತ್ತು ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು.
ಈ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ, ಜಿಲ್ಲೆಯ ಎಲ್ಲ ದಲಿತ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ‘ಕಳಸ ಚಲೋ’ ಬೃಹತ್ ಪ್ರತಿಭಟನೆಯನ್ನು ಆಯೋಜಿಸುವುದಾಗಿ ಜನಶಕ್ತಿ ಜಿಲ್ಲಾ ಸಮಿತಿ ಎಚ್ಚರಿಕೆ ನೀಡಿದೆ. ಈ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಪೊಲೀಸರಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಸಂಸೆ ಗ್ರಾಮದ ಬಸ್ತಿಗದ್ದೆ ವ್ಯಾಪ್ತಿಯಲ್ಲಿ ನಡೆದಿತ್ತು.
ಮೃತ ಯುವಕ ನಾಗೇಶ್ (29), ಕುದುರೆಮುಖ ಠಾಣೆಯ ಪೊಲೀಸ್ ಪೇದೆ ಸಿದ್ದೇಶ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಯುವಕ ನಾಗೇಶನಿಗೆ ಮನಸೋ ಇಚ್ಛೆ ಬಂದಂಗೆ ಹಲ್ಲೆ ಮಾಡಲಾಗಿತ್ತು ಎಂದು ಎಲ್ಲೆಡೆ ಸುದ್ದಿ ಹರಡಿತ್ತು ಹಾಗೂ ಎಫ್ಐಅರ್ ಕೂಡ ದಾಖಲಾಗಿತ್ತು. ಹಾಗೆಯೇ, ನಾಗೇಶ್ ವಿರುದ್ಧ ಸುಳ್ಳು ಎಫ್ಐಆರ್ ಪೊಲೀಸರು ದಾಖಲಿಸಿದ್ದರು ಎನ್ನಲಾಗಿದೆ. ಮೃತ ಯುವಕನ ಜೀಪ್ ಸಹ ಪೊಲೀಸರು ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಾಗೇಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣದ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮಟೆ, ಕೊಪ್ಪ DYSP ನೇತೃತ್ವದಲ್ಲಿ ತಂಡ ರಚಿಸಿದ್ದರು. ಮಂಗಳವಾರ ಪೊಲೀಸ್ ಠಾಣೆಯಲ್ಲಿ ಎಂಟು ಸಾವಿರ ಹಣ ದಂಡ ಕಟ್ಟುವಂತೆ ನಾಗೇಶ್ ಗೆ ತಿಳಿಸಿದರು. ಈ ಕುರಿತು ಹಣ ಸಂಗ್ರಹಿಸಲು ಎಲ್ಲರ ಬಳಿ ಕೇಳಿದಾಗ ಇಲ್ಲವೆಂದು ತಿಳಿದಾಗ, ಮಾಡದ ತಪ್ಪಿಗೆ ದಂಡ ಕಟ್ಟಬೇಕೆಂದು ಬುಧಾವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮಟೆ ಪೊಲೀಸ್ ಪೇದೆ ಸಿದ್ದೇಶ್ ನನ್ನು ಅಮಾನತ್ತು ಮಾಡಿದ್ದಾರೆ. ಆದರೆ, ಕುದುರೆಮುಖ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಚೆನ್ನೈಯಲ್ಲಿ ನೈರ್ಮಲ್ಯ ಕಾರ್ಮಿಕರ ಪ್ರತಿಭಟನೆ: ಸ್ವಾತಂತ್ರ್ಯ ಮುನ್ನಾದಿನ 2000 ಕಾರ್ಮಿಕರ ಬಂಧನ


