ಆಡಳಿತಾರೂಢ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಯಾವುದೇ ಅನೈತಿಕತೆಯ ಮಟ್ಟಕ್ಕೆ ಇಳಿಯಲು ಸಿದ್ಧವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದರು.
ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ ಅವರು, “ದೇಶಾದ್ಯಂತ ಚುನಾವಣೆಗಳಲ್ಲಿ ಹಲವಾರು ‘ಅಕ್ರಮಗಳು’ ಹೊರಹೊಮ್ಮುತ್ತಿವೆ. ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ವಿರೋಧ ಪಕ್ಷದ ಮತಗಳನ್ನು ಬಹಿರಂಗವಾಗಿ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಜೀವಂತ ಮತದಾರರನ್ನು ಸತ್ತವರು ಎಂದು ಘೋಷಿಸಲಾಗುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.
“ಅತ್ಯಂತ ಆಶ್ಚರ್ಯಕರ, ವಿಷಯವೆಂದರೆ 65 ಲಕ್ಷ ಜನರ ಮತಗಳನ್ನು ಕಡಿತಗೊಳಿಸಲು ಬಿಜೆಪಿಗೆ ಯಾವುದೇ ಆಕ್ಷೇಪವಿಲ್ಲ. ಎಸ್‌ಐಆರ್ ಪ್ರಕ್ರಿಯೆಯಿಂದ ಯಾರು ಪ್ರಯೋಜನ ಪಡೆದರು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಅವರು ಹೇಳಿದರು.
“ಇದು ಚುನಾವಣೆಗಳನ್ನು ಗೆಲ್ಲುವ ಹೋರಾಟವಲ್ಲ. ಆದರೆ, ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು” ಎಂದು ಖರ್ಗೆ ಅವರು ಎಸ್‌ಐಆರ್ ಪ್ರಕ್ರಿಯೆಯ ಕಾಂಗ್ರೆಸ್‌ನ ವಿರೋಧವನ್ನು ಉಲ್ಲೇಖಿಸಿ ಹೇಳಿದರು.
“ಈಗ ಆಡಳಿತ ಪಕ್ಷವು ಅಧಿಕಾರದಲ್ಲಿ ಉಳಿಯಲು ಯಾವುದೇ ಅನೈತಿಕತೆಗೆ ಹೋಗಲು ಸಿದ್ಧವಾಗಿದೆ. ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ಬೆಳಕಿಗೆ ಬರುತ್ತಿವೆ” ಎಂದು ಅವರು ಆರೋಪಿಸಿದರು.
“ವಿಶೇಷ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ, ವಿರೋಧ ಪಕ್ಷದ ಮತಗಳನ್ನು ಬಹಿರಂಗವಾಗಿ ಕಡಿತಗೊಳಿಸಲಾಗುತ್ತಿದೆ. ಜೀವಂತವಾಗಿರುವವರನ್ನು ಸತ್ತವರು ಎಂದು ಘೋಷಿಸಲಾಗಿದೆ. ಯಾರ ಮತಗಳನ್ನು ಕಡಿತಗೊಳಿಸಲಾಗುತ್ತಿದೆ ಮತ್ತು ಯಾವ ಆಧಾರದ ಮೇಲೆ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಲು ಚುನಾವಣಾ ಆಯೋಗ ಸಿದ್ಧವಾಗಿಲ್ಲದಿರುವುದರಿಂದ ಅದರ ನಿಷ್ಪಕ್ಷಪಾತತೆಯನ್ನು ಅರ್ಥಮಾಡಿಕೊಳ್ಳಬಹುದು” ಎಂದು ಅವರು ಹೇಳಿದರು.
ಇಡಿ ಮತ್ತು ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಮುಂತಾದ ಕೇಂದ್ರ ತನಿಖಾ ಸಂಸ್ಥೆಗಳನ್ನು “ವಿರೋಧಿಗಳ ವಿರುದ್ಧ ರಾಜಕೀಯ ಉದ್ದೇಶಗಳಿಗಾಗಿ ಬಹಿರಂಗವಾಗಿ ಬಳಸಲಾಗಿದೆ, ದೇಶದ ಸುಪ್ರೀಂ ಕೋರ್ಟ್ ಅವರಿಗೆ ಕನ್ನಡಿ ತೋರಿಸಬೇಕಾಗಿದೆ” ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.
‘ಅಲಿಪ್ತ ನೀತಿ’ಯಿಂದಾಗಿ ಭಾರತ ಗಳಿಸಿದ ವಿಶೇಷ ಸ್ಥಾನವನ್ನು ಕಳೆದುಕೊಂಡಿದೆ. ಸ್ವಾತಂತ್ರ್ಯದ ವೀರರು ಈ ದೇಶಕ್ಕಾಗಿ ಕಂಡ ಕನಸು ಇಂದು ನಮ್ಮಿಂದ ದೂರವಾಗುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.
ಗಾಂಧಿ ಜೊತೆ ಸಾವರ್ಕರ್ ಚಿತ್ರ ಪ್ರಕಟಿಸಿದ ಕೇಂದ್ರ ಸರ್ಕಾರ; ಕೇಂದ್ರ ಸರ್ಕಾರವನ್ನು ಟೀಕಿಸಿದ ಜಾನ್ ಬ್ರಿಟ್ಟಾಸ್


