ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಬಿಹಾರದಲ್ಲಿ ಹಮ್ಮಿಕೊಂಡಿರುವ 16 ದಿನಗಳ ‘ವೋಟರ್ ಅಧಿಕಾರ್ ಯಾತ್ರಾ’ಗೆ(ಮತದಾರನ ಅಧಿಕಾರ ಯಾತ್ರೆ) ಸಸಾರಾಮ್‌ನಲ್ಲಿ ಭಾನುವಾರ ಚಾಲನೆ ನೀಡಲಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ, 2024ರ ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ,”ಬಿಹಾರದಲ್ಲಿ ‘ಮತ ಕಳ್ಳತನ’ ಮಾಡುವುದಕ್ಕೆ ಬಿಜೆಪಿಗರು ಮತ್ತು ಚುನಾವಣಾ ಆಯೋಗಕ್ಕೆ ನಾವು ಅವಕಾಶ ನೀಡುವುದಿಲ್ಲ. ಬಡವರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ದೇಶದಾದ್ಯಂತ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ. ನಮ್ಮದು ಸಂವಿಧಾನ ಉಳಿಸುವ ಹೋರಾಟವಾಗಿದ್ದರೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂವಿಧಾನವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ” ಎಂದು ರಾಹುಲ್ ಗಾಂಧಿ ದೂರಿದ್ದಾರೆ.
‘ವೋಟ್ ಚೋರಿ’ (ಮತಗಳ್ಳತನ) ಬಗ್ಗೆ ನಾವು ಧ್ವನಿ ಎತ್ತಿದ ಬೆನ್ನಲ್ಲೇ ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗ ನನ್ನನ್ನು ಕೇಳಿದೆ. ಆದರೆ, ಅಫಿಡವಿಟ್ ಸಲ್ಲಿಸುವ ಕುರಿತು ಬಿಜೆಪಿ ನಾಯಕರನ್ನು ಆಯೋಗ ಪ್ರಶ್ನಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ವೋಟರ್ ಅಧಿಕಾರ್ ಯಾತ್ರಾ 16 ದಿನಗಳಲ್ಲಿ 1,300 ಕಿಲೋಮೀಟರ್ ಕ್ರಮಿಸಲಿದ್ದು, ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಬೃಹತ್ ರ‍್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಅಲ್ಲಿನ ಕಾರ್ಯಕ್ರಮದಲ್ಲಿ ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಯಾತ್ರೆಯ ವಿವರಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “16 ದಿನಗಳು, 20ಕ್ಕೂ ಹೆಚ್ಚು ಜಿಲ್ಲೆಗಳು, 1,300ಕ್ಕೂ ಹೆಚ್ಚು ಕಿ.ಮೀ ದೂರ ಮತದಾರರ ಹಕ್ಕುಗಳ ಯಾತ್ರೆಯೊಂದಿಗೆ ನಾವು ಜನರ ನಡುವೆ ಬರುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಇದು ಅತ್ಯಂತ ಮೂಲಭೂತ ಪ್ರಜಾಪ್ರಭುತ್ವದ ಹಕ್ಕನ್ನು ರಕ್ಷಿಸುವ ಹೋರಾಟ.’ಒಬ್ಬ ವ್ಯಕ್ತಿ, ಒಂದು ಮತ. ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ” ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಸಸಾರಾಮ್ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ದೀಂಪಕರ್ ಭಟ್ಟಾಚಾರ್ಯ ಸೇರಿದಂತೆ ಪ್ರಮುಖರು ಇದ್ದರು.
Bihar SIR| ಉತ್ತರದ ಬದಲು ಸಮಜಾಯಿಷಿ ನೀಡುತ್ತಿರುವ ಚು.ಆಯೋಗ: ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್


