ರಾಜ್ಯಕ್ಕೆ ಮರಳುವ ಬಂಗಾಳದ ವಲಸೆ ಕಾರ್ಮಿಕರು ಮಾಸಿಕ 5 ಸಾವಿರ ರೂಪಾಯಿ ಧನ ಸಹಾಯ ಪಡೆಯಲಿದ್ದಾರೆ ಎಂದು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಆ.18) ಘೋಷಿಸಿದ್ದಾರೆ.
ರಾಜ್ಯ ಆಡಳಿತ ಕೇಂದ್ರವಾದ ನಬನ್ನಾದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, “ಇತರ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಹಿಂದಿರುಗುವ ವಲಸೆ ಕಾರ್ಮಿಕರಿಗೆ ಮುಂದಿನ 12 ತಿಂಗಳವರೆಗೆ ಮಾಸಿಕ 5,000 ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುವುದು ಮತ್ತು ‘ಖಾದ್ಯ ಸತಿ’ ಮತ್ತು ‘ಸ್ವಸ್ಥ ಸತಿ’ ನಂತಹ ಸಾಮಾಜಿಕ ಪ್ರಯೋಜನಗಳನ್ನು ಅವರು ಪಡೆಯಬಹುದು ಎಂದು ಹೇಳಿದ್ದಾರೆ.
ಈ ಸೌಲಭ್ಯಗಳನ್ನು ಜಾರಿಗೆ ತರಲು ‘ಶ್ರಮಶ್ರೀ’ ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.
“ಈ ಯೋಜನೆಯು ಬಂಗಾಳದ ವಲಸೆ ಕಾರ್ಮಿಕರಿಗೆ ಮಾತ್ರ ಅನ್ವಯವಾಗುತ್ತದೆ. ರಾಜ್ಯಕ್ಕೆ ಮರಳುವವರು ಪ್ರಯಾಣ ಸಹಾಯದೊಂದಿಗೆ 5,000 ರೂ.ಗಳ ಒಂದು ಮೊದಲ ಪಾವತಿಯನ್ನು ಪಡೆಯಲಿದ್ದಾರೆ. ಇದು ಪುನರ್ವಸತಿ ಭತ್ಯೆಯಾಗಿದೆ. ಅವರಿಗೆ ಹೊಸ ಕೆಲಸದ ವ್ಯವಸ್ಥೆ ಮಾಡುವವರೆಗೆ, ಕನಿಷ್ಠ ಒಂದು ವರ್ಷದವರೆಗೆ ತಿಂಗಳಿಗೆ 5,000 ರೂ.ಗಳ ಆರ್ಥಿಕ ಸಹಾಯವನ್ನು ಸಹ ನೀಡಲಾಗುವುದು” ಎಂದು ಮಮತಾ ಬ್ಯಾರ್ಜಿ ತಿಳಿಸಿದ್ದಾರೆ.
ಈ ಯೋಜನೆಗೆ ಪಶ್ಚಿಮ ಬಂಗಾಳ ಕಾರ್ಮಿಕ ಇಲಾಖೆ ನೋಡಲ್ ಇಲಾಖೆಯಾಗಿದೆ. ರಾಜ್ಯ ಸರ್ಕಾರದ ‘ಉತ್ಕರ್ಷ್ ಬಾಂಗ್ಲಾ’ ಯೋಜನೆಯ ಮೂಲಕ ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಿದ್ದಾರೆ.
“ರಾಜ್ಯಕ್ಕೆ ಮರಳುವ ಕಾರ್ಮಿಕರ ಕೌಶಲ್ಯಗಳನ್ನು ನಾವು ಪರಿಶೀಲಿಸುತ್ತೇವೆ. ಅವರಲ್ಲಿ ಕೌಶಲ್ಯವಿದ್ದರೆ ಅದಕ್ಕೆ ತಕ್ಕ ತರಬೇತಿ ನೀಡುತ್ತೇವೆ. ಅಲ್ಲದೆ, ಉದ್ಯೋಗವನ್ನೂ ಒದಗಿಸುತ್ತೇವೆ. ಜೊತೆಗೆ ‘ಉದ್ಯೋಗ ಕಾರ್ಡ್’ಗಳನ್ನು ವಿತರಿಸುತ್ತೇವೆ. ‘ಕರ್ಮಶ್ರೀ’ ಯೋಜನೆಯಡಿ ಇದುವರೆಗೆ 78 ಲಕ್ಷ ಉದ್ಯೋಗ ಕಾರ್ಡ್‌ಗಳನ್ನು ನೀಡಲಾಗಿದೆ” ಎಂದು ಸಿಎಂ ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಮನೆ ಇಲ್ಲದಿದ್ದರೆ ಸಮುದಾಯ ತರಬೇತಿ ಕೇಂದ್ರಗಳಲ್ಲಿ ಅವರಿಗೆ ವಸತಿ ಒದಗಿಸಲಾಗುವುದು. ಅವರ ಮಕ್ಕಳಿಗೆ ಶಾಲಾ ಪ್ರವೇಶ ವ್ಯವಸ್ಥೆ ಮಾಡಲಾಗುವುದು. ಇದಲ್ಲದೆ ವಲಸೆ ಕಾರ್ಮಿಕರು ‘ಕನ್ಯಾಶ್ರೀ’ ಮತ್ತು ‘ಶಿಕ್ಷಶ್ರೀ’ಯ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆಯಲಿದ್ದಾರೆ ಎಂದಿದ್ದಾರೆ.
“ಬಂಗಾಳದಿಂದ ವಲಸೆ ಹೋಗಿರುವ 22.40 ಲಕ್ಷ ಕಾರ್ಮಿಕರಿಗೆ ‘ಶ್ರಮಶ್ರೀ’ ಯೋಜನೆಯ ಪ್ರಯೋಜನಗಳು ಸಿಗಲಿವೆ. ಅವರು ‘ಶ್ರಮಶ್ರೀ’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡರೆ, ಐ-ಕಾರ್ಡ್ ನೀಡಲಾಗುವುದು. ಇದರ ಮೂಲಕ ಅವರು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಾರೆ” ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಲ್ಲಿ, ಇತರ ರಾಜ್ಯಗಳಲ್ಲಿ ಚಿತ್ರಹಿಂಸೆಗೊಳಗಾದ 2,700 ಕುಟುಂಬಗಳು ಬಂಗಾಳಕ್ಕೆ ಮರಳಿವೆ . ರಾಜ್ಯ ಸರ್ಕಾರವು 10,000ಕ್ಕೂ ಹೆಚ್ಚು ಜನರನ್ನು ಕರೆತಂದಿದೆ ಎಂದು ಸಿಎಂ ವಿವರಿಸಿದ್ದಾರೆ.
ಬಿಜೆಪಿಯ ಹೆಸರನ್ನು ಉಲ್ಲೇಖಿಸದೆ, ‘ಡಬಲ್ ಎಂಜಿನ್ ಸರ್ಕಾರ’ ಆಳ್ವಿಕೆ ನಡೆಸುತ್ತಿರುವ ವಿವಿಧ ರಾಜ್ಯಗಳಲ್ಲಿ ಬಂಗಾಳಿ ಭಾಷೆ ಮತ್ತು ಬಂಗಾಳಿ ಗುರುತಿನ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ಯಾರಾದರೂ ಬಂಗಾಳಿ ಮಾತನಾಡಿದರೆ, ಅವರನ್ನು ಅಪರಾಧಿ ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಸಿಕ್ಕ ಸಿಕ್ಕವರನ್ನು ಬಾಂಗ್ಲಾದೇಶಕ್ಕೆ ತಳ್ಳಲಾಗುತ್ತಿದೆ. ಎಲ್ಲೋ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಎಲ್ಲೋ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕಿರುಕುಳ ನೀಡಲಾಗುತ್ತಿದೆ” ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಸುಮಾರು 22 ಲಕ್ಷ ವಲಸೆ ಕಾರ್ಮಿಕರಿಗೆ ಇತರ ರಾಜ್ಯಗಳಲ್ಲಿ ಬಂಗಾಳಿ ಮಾತನಾಡಿದಕ್ಕಾಗಿ ಕಿರುಕುಳ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇತರ ರಾಜ್ಯಗಳ ಸುಮಾರು 1.5 ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಇದೇ ವೇಳೆ ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ | ‘ಇಂಡಿಯಾ’ ಅಭ್ಯರ್ಥಿಯಾಗಿ ನಿವೃತ್ತ ನ್ಯಾ. ಬಿ ಸುದರ್ಶನ್ ರೆಡ್ಡಿ ಆಯ್ಕೆ


