ಬೆಂಗಳೂರು ಕೇಂದ್ರ ಸೇರಿದಂತೆ ದೇಶದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ‘ಮತಗಳ್ಳತನ’ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆರೋಪದ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ಮತದಾರರ ಪಟ್ಟಿಯ ತಯಾರಿಕೆ, ನಿರ್ವಹಣೆ ಮತ್ತು ಪ್ರಕಟಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಚೌಕಟ್ಟಿಗೆ (ರೂಪುರೇಷೆ) ನಿರ್ದೇಶನಗಳನ್ನು ನೀಡುವಂತೆ ಮತ್ತು ನಕಲಿ ಅಥವಾ ಕಾಲ್ಪನಿಕ ನಮೂದುಗಳನ್ನು ಪತ್ತೆಹಚ್ಚುವ ಮತ್ತು ತಡೆಗಟ್ಟುವ ಕಾರ್ಯವಿಧಾನಗಳನ್ನು ಒಳಗೊಂಡಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ಅರ್ಥಪೂರ್ಣ ಪರಿಶೀಲನೆ, ಲೆಕ್ಕಪರಿಶೋಧನೆ ಮತ್ತು ಸಾರ್ವಜನಿಕ ಪರಿಶೀಲನೆಗೆ ಅನುವು ಮಾಡಿಕೊಡಲು ಮತದಾರರ ಪಟ್ಟಿಯನ್ನು ಸುಲಭವಾಗಿ ಪ್ರವೇಶಿಸಬಹುದಾದ, ಮೆಶಿನ್ ರೀಡೇಬಲ್ (ಯಂತ್ರ-ಓದಬಲ್ಲ) ಮತ್ತು ಆಪ್ಟಿಕಲ್ ಕ್ಯಾರೆಕ್ಟರ್ ರಿಕಗ್ನಿಷನ್ (ಒಸಿಆರ್) ಕಂಪ್ಲೈಂಟ್ ಸ್ವರೂಪಗಳಲ್ಲಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 7ರಂದು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಆಧರಿಸಿ ವಕೀಲ ರೋಹಿತ್ ಪಾಂಡೆ ಪಿಐಎಲ್ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ರೀತಿಯ ವಿಳಾಸ ಮತ್ತು ತಂದೆಯ ಹೆಸರಿನ ಸುಮಾರು 40,000–50,000 ಮತದಾರರು ಮತ್ತು ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಒಂದೇ ವಿಳಾಸದಲ್ಲಿ ನೋಂದಾಯಿಸಲಾದ ಸುಮಾರು 80 ಮತದಾರರು ಸೇರಿದಂತೆ ಆಪಾದಿತ ಅಕ್ರಮಗಳ ಉದಾಹರಣೆಗಳನ್ನು ಪಿಐಎಲ್ ಉಲ್ಲೇಖಿಸಿದೆ.
ಈ ವಿಷಯವು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸುವಂತದ್ದು ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಸ್ವತಂತ್ರ ಪರಿಶೀಲನೆ ನಡೆಯುವವರೆಗೆ ಮತ್ತು ಮತದಾರರ ಪಟ್ಟಿಗಳ ತಯಾರಿಕೆ, ನಿರ್ವಹಣೆ ಮತ್ತು ಪ್ರಕಟಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಪ್ರಕಟಿಸುವವರೆಗೆ ಮತದಾರರ ಪಟ್ಟಿಗಳ ಅಂತಿಮಗೊಳಿಸುವಿಕೆಯನ್ನು ನಿಲ್ಲಿಸಲು ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ದೆಹಲಿ ಗಲಭೆ ಪ್ರಕರಣ: ಮೂವರು ಆರೋಪಿಗಳ ಖುಲಾಸೆ; ತನಿಖೆಯ ಲೋಪಗಳ ಬಗ್ಗೆ ನ್ಯಾಯಾಲಯದ ತೀವ್ರ ಟೀಕೆ


