ಗೋಪಾಲ್‌ಗಂಜ್ (ಬಿಹಾರ): ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ, ಗೋವುಗಳನ್ನು ಸಾಕಣೆಗಾಗಿ ಸಾಗಿಸುತ್ತಿದ್ದ ವೃದ್ಧ ಮುಸ್ಲಿಂ ದಂಪತಿಯನ್ನು ಹಿಂದೂ ಸಂಘಟನೆಯೊಂದರ ನಾಯಕರು ತಡೆದು ನಿಲ್ಲಿಸಿ, ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದಿ ಅಬ್ಸರ್ವರ್ ಪೋಸ್ಟ್ ವರದಿ ಮಾಡಿದೆ.
ಘಟನೆಯು ಪಂಚದೇವರಿಯ ಗ್ರಾಮದಲ್ಲಿ ನಡೆದಿದ್ದು, ದಂಪತಿಯು ತಾವು ಸಾಕಲು ಖರೀದಿಸಿದ್ದ ಎರಡು ಹಸುಗಳನ್ನು ಹುಲ್ಲುಗಾವಲು ಮೈದಾನಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ, ಹಿಂದೂ ಸಂಘಟನೆಯ ನಾಯಕ ಪ್ರದೀಪ್ ಮೌರ್ಯ ತನ್ನ ಸಹಚರರೊಂದಿಗೆ ದಂಪತಿಯನ್ನು ಅಡ್ಡಗಟ್ಟಿ, “ಗೋ ಕಳ್ಳಸಾಗಣೆದಾರರು” ಎಂದು ಆರೋಪಿಸಿದ್ದಾನೆ. ಆರೋಪಿಗಳಾದ ಮೌರ್ಯ ಮತ್ತು ಆತನ ಸಂಗಡಿಗರು ಯಾವುದೇ ದಾಖಲೆಗಳನ್ನು ಪರಿಶೀಲಿಸಲು ಮುಂದಾಗದೆ, ದಂಪತಿಯ ಹೇಳಿಕೆಯನ್ನೂ ನಂಬಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ದಂಪತಿಯ ನಿರಂತರ ಮನವಿ
ದಂಪತಿಯಲ್ಲಿನ ವೃದ್ಧ ವ್ಯಕ್ತಿ ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು, “ನಾನು ಈ ಹಸುಗಳನ್ನು ಸಾಕಲು ತೆಗೆದುಕೊಂಡು ಹೋಗುತ್ತಿದ್ದೇನೆ. ಇದು ನಮ್ಮ ಕುಟುಂಬದ ವ್ಯಾಪಾರ. ಹಾಲು ಮತ್ತು ಇತರ ವ್ಯವಹಾರಗಳಿಗಾಗಿ ನಾವು ಯಾವಾಗಲೂ ಎರಡು-ಮೂರು ಹಸುಗಳನ್ನು ಸಾಕುತ್ತೇವೆ. ನಾನು ಮಾಡುತ್ತಿರುವುದು ಕಾನೂನುಬಾಹಿರವಾದುದಲ್ಲ” ಎಂದು ಹೇಳಿದ್ದಾರೆ. ಅವರ ಪತ್ನಿಯೂ, “ನಾವು ಈ ಹಸುಗಳನ್ನು ಪ್ರೀತಿಯಿಂದ ನೋಡಿಕೊಳ್ಳಲು ಖರೀದಿಸಿದ್ದೇವೆ. ನಮ್ಮನ್ನು ಯಾಕೆ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ?” ಎಂದು ಕಣ್ಣೀರು ಹಾಕಿದ್ದಾರೆ.
ಬೆದರಿಕೆ ಹಾಕಿದ ಆರೋಪಿ
ದಂಪತಿಯ ಮನವಿಗೆ ಕಿವಿಗೊಡದ ಮೌರ್ಯ, ಅವರಿಗೆ ಬೆದರಿಕೆ ಹಾಕಿರುವುದು ವೈರಲ್ ಆದ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. “ನೀವು ಪ್ರತಿದಿನ ಹಸುಗಳನ್ನು ಸಾಗಿಸುವುದನ್ನು ನಾನು ನೋಡಿದ್ದೇನೆ. ಮುಂದಿನ ಬಾರಿ ನೀವು ನನ್ನ ಕಣ್ಣಿಗೆ ಬಿದ್ದರೆ, ನಾನು ನಿಮ್ಮನ್ನು ಇಲ್ಲಿಯೇ ಕಟ್ಟಿಹಾಕುತ್ತೇನೆ ಮತ್ತು ಪೊಲೀಸರಿಗೆ ಕರೆ ಮಾಡುತ್ತೇನೆ” ಎಂದು ಆತ ಗದರಿಸಿದ್ದಾನೆ. ಈ ಬೆದರಿಕೆ ದಂಪತಿಯನ್ನು ಇನ್ನಷ್ಟು ಆತಂಕಕ್ಕೆ ದಳ್ಳಿದೆ.
ಸ್ಥಳೀಯರ ಆಕ್ಷೇಪ
ಘಟನೆಯ ಬಗ್ಗೆ ಸ್ಥಳೀಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಒಬ್ಬ ಸ್ಥಳೀಯ ನಿವಾಸಿ, “ಗ್ರಾಮಗಳ ನಡುವೆ ಹಸು ಅಥವಾ ಎಮ್ಮೆಗಳನ್ನು ಖರೀದಿಸುವುದು ಮತ್ತು ಸಾಗಿಸುವುದು ಇಲ್ಲಿನ ರೈತರಿಗೆ ಸಾಮಾನ್ಯ ಅಭ್ಯಾಸ. ಇದು ಹಾಲು ಮತ್ತು ಜಾನುವಾರು ಸಾಕಣೆಗೆ ಅಗತ್ಯವಾಗಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಇಲ್ಲ” ಎಂದು ಹೇಳಿದ್ದಾರೆ. ದಂಪತಿಯನ್ನು ಅನಗತ್ಯವಾಗಿ ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಯು ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಆಧಾರದ ಮೇಲೆ ನಡೆಯುತ್ತಿರುವ ದ್ವೇಷ ಮತ್ತು ಬೆದರಿಕೆಗಳ ಬಗ್ಗೆ ಗಂಭೀರ ಕಳವಳ ಮೂಡಿಸಿದೆ. ಕಾನೂನು ತಜ್ಞರು, ಗೋವು ಸಾಕಣೆ ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಲ್ಲ ಮತ್ತು ಕೇವಲ ಧರ್ಮದ ಆಧಾರದ ಮೇಲೆ ಜನರನ್ನು ಬೆದರಿಸುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೆಯಾಗುತ್ತಿದ್ದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಲವರು “ಕಾನೂನುಬದ್ಧ ವ್ಯಾಪಾರವನ್ನು ಮಾಡುವುದಕ್ಕೆ ಯಾರನ್ನೂ ಬೆದರಿಸಬಾರದು” ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ, ಗೋಪಾಲ್‌ಗಂಜ್ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಜುನೈದ್ ಖಾನ್ ಹತ್ಯೆ ಪ್ರಕರಣ: ಪ್ರಧಾನ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್


