ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿ ಅನ್ವಯ ಪರಿಶಿಷ್ಟ ಜಾತಿಯ (ಎಸ್‌ಸಿ) ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ ತೀವ್ರಗೊಂಡಿದ್ದು, ಆಹ್ವಾನ ಇಲ್ಲದೆಯೇ ವೇದಿಕೆಗೆ ಆಗಮಿಸಿದ ಬಿಜೆಪಿ ನಾಯಕರನ್ನು ಹೋರಾಟಗಾರರು ವಾಪಸ್ ಕಳುಹಿಸಿದರು.
‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ-ರಾಜ್ಯ ಸಮಿತಿ’ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ. ಈಗಾಗಲೇ ಸರ್ಕಾರ 6-6-5ರ ಅನುಪಾತದಲ್ಲಿ ಒಳಮೀಸಲಾತಿ ಜಾರಿ ಮಾಡಿದ್ದರೂ, ನಾಗಮೋಹನ್ ದಾಸ್ ಆಯೋಗದ ಸಲಹೆಯಾದ ಅಲೆಮಾರಿಗಳಿಗೆ ಶೇ.1ರ ಪ್ರತ್ಯೇಕ ಮೀಸಲಾತಿಯನ್ನು ಕೈಬಿಡಲಾಗಿದೆ. ಸರ್ಕಾರದ ನಿರ್ಧಾರವನ್ನು ಪುನರ್ ಪರಿಶೀಲನಗೆಗೆ ಒಳಪಡಿಸಿ ಅಲೆಮಾರಿಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಹೋರಾಟ ಮುಂದುವರೆದಿದೆ.
ಪ್ರತಿಭಟನೆಗೆ ಹೋರಾಟ ಸಮಿತಿಯಿಂದ ಯಾವುದೇ ಆಹ್ವಾನ ಇರದಿದ್ದರೂ ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ ಮತ್ತು ಅರವಿಂದ್ ಬೆಲ್ಲದ್ ಅವರು ಆಗಮಿಸಿದರು. ಬಿಜೆಪಿ ನಾಯಕರ ಈ ನಡೆಯಿಂದ ಕೆಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇನ್ನು ಇದೇ ವೇಳೆ, ಶಾಸಕ ಅರವಿಂದ್ ಬೆಲ್ಲದ್ ಅವರು ಸಭೆಯನ್ನುದ್ದೇಶಿ ಮಾತನಾಡಿದರು. ಅವರ ಮಾತು ಮುಗಿಯುತ್ತಿದ್ದಂತೆಯೇ ಹೋರಾಟಗಾರರು ಬಿಜೆಪಿ ನಾಯಕರನ್ನು ವೇದಿಕೆಯಿಂದ ಕೆಳಗಿಳಿಸಿದರು.

ಈ ವೇಳೆ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ ಹೋರಾಟಗಾರರು, “ಒಳಮೀಸಲಾತಿ ವಿಚಾರವಾಗಿ ನೀವು ಸದನದಲ್ಲಿ ಏನೆಲ್ಲಾ ಮಾತನಾಡುತ್ತಿದ್ದೀರಾ ಎಂಬುದನ್ನು ನಾವು ಗಮನಿಸುತ್ತೇವೆ. ಸದನದಲ್ಲಿ ತಾವೆಲ್ಲರೂ ಒಕ್ಕೋರಲಿನಿಂದ ಮಾತನಾಡಿ, ಅಲೆಮಾರಿಗಳ ಪ್ರತ್ಯೇಕ ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮನವೊಲಿಸಬೇಕು. ಒಂದು ವೇಳೆ ಈ ಬಗ್ಗೆ ಸದಸನದಲ್ಲಿ ಮಾತನಾಡಲು ತಮಗೆ ಅವಕಾಶ ಸಿಗದೇ ಇದ್ದರೆ, ತಾವುಗಳು ಬೇರೆ ವಿಚಾರದಲ್ಲಿ ಸದನ ಬಹಿಷ್ಕರಿಸಿದಂತೆ, ಈವಿಚಾರದಲ್ಲಿ ಬಾಯ್ಕಾಟ್ ಮಾಡಬೇಕು” ಎಂದು ಆಗ್ರಹಿಸಿದರು.
ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ; ಫ್ರೀಡಂ ಪಾರ್ಕಿನಲ್ಲಿ ತೀವ್ರಗೊಂಡ ಪ್ರತಿಭಟನೆ


