ಮುಖ್ಯಮಂತ್ರಿಯ ಪೋರ್ಟಲ್‌ನಲ್ಲಿ ದೂರು ದಾಖಲಾಗಿರುವ ಹಿನ್ನೆಲೆ, ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಪೊಲೀಸರು ಮುಸ್ಲಿಂ ಮದುವೆ ಬ್ಯಾಂಡ್‌ಗಳ ನಿರ್ವಾಹಕರು ತಮ್ಮ ಬ್ಯಾಂಡ್‌ಗಳಿಗೆ ಹಿಂದೂ ದೇವರುಗಳ ಹೆಸರಿಡದಂತೆ ಆದೇಶಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಗುರುವಾರ ವರದಿ ಮಾಡಿದೆ.
ಜಿಲ್ಲೆಯಲ್ಲಿ ಸುಮಾರು 15 ರಿಂದ 20 ಮುಸ್ಲಿಂ ಬ್ಯಾಂಡ್ ನಿರ್ವಾಹಕರು ಹಿಂದೂ ದೇವತೆಗಳ ಹೆಸರನ್ನು ಬಳಸಿಕೊಂಡು ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶಬಿ ಶರ್ಮಾ ಎಂಬ ವಕೀಲ ಜುಲೈ 9 ರಂದು ದೂರು ದಾಖಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಮುಸ್ಲಿಮರು ತಮ್ಮ ಬ್ಯಾಂಡ್‌ಗಳಿಗೆ ಹಿಂದೂ ದೇವರುಗಳ ಹೆಸರಿಡುದರಿಂದ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ದೂರುದಾರ ಹೇಳಿಕೊಂಡಿದ್ದಾರೆ.
ಮಂಗಳವಾರ ಜಿಲ್ಲೆಯ ಹಲವಾರು ಬ್ಯಾಂಡ್ ಆಪರೇಟರ್‌ಗಳನ್ನು ಕರೆಸಿ, ಹಿಂದೂ ದೇವರುಗಳ ಹೆಸರುಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ. ಅವರೆಲ್ಲರೂ ಹೆಸರುಗಳನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ ಎಂದು ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಕುಮಾರ್ ರಣವಿಜಯ್ ಸಿಂಗ್ ತಿಳಿಸಿದ್ದಾಗಿ ಅಮರ್ ಉಜಾಲಾ ವರದಿ ಮಾಡಿದೆ.
ಮೊರಾದಾಬಾದ್‌ನಲ್ಲಿ ಮದುವೆ ಬ್ಯಾಂಡ್ ಉದ್ಯಮದಲ್ಲಿ ಹೆಚ್ಚಾಗಿ ಮುಸ್ಲಿಮರ ಪ್ರಾಬಲ್ಯವಿದೆ. ಆದರೆ, ಅವರು ತಮ್ಮ ಬ್ಯಾಂಡ್‌ಗಳು ದೇವರು ಮತ್ತು ದೇವತೆಗಳ ಸೇರಿದಂತೆ ಹಲವು ಹಿಂದೂ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರುದಾರ ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದು ಗುರುತನ್ನು ವಿರೂಪಗೊಳಿಸುವ ಪ್ರಯತ್ನ ಎಂದು ದೂರುದಾರ ಆರೋಪಿಸಿದ್ದು, ಸಿಎಂ ಸ್ವತಃ ಇಂತಹ ಪದ್ಧತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ಒತ್ತಾಯಿಸಿದ್ದಾರೆ. ತಮ್ಮ ದೂರಿನ ಆಧಾರದ ಮೇಲೆ ಪೊಲೀಸರು ತೆಗೆದುಕೊಂಡ ಕ್ರಮವು ತಾರತಮ್ಯವಲ್ಲ, ಬದಲಾಗಿ ಕಾನೂನು ಕ್ರಮ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ತೀರ್ಥಯಾತ್ರೆ ಮಾರ್ಗದಲ್ಲಿರುವ ಅಂಗಡಿ, ಹೋಟೆಲ್‌ಗಳ ಮಾಲೀಕರು ತಮ್ಮ ಹೆಸರುಗಳನ್ನು ಪ್ರದರ್ಶಿಸುವಂತೆ ವಿವಾದಾತ್ಮಕ ಆದೇಶದ ನೀಡಿದ ಬಳಿಕ, ಇದೀಗ ಬ್ಯಾಂಡ್‌ಗಳಿಗೆ ಹಿಂದೂ ಹೆಸರಿಡದಂತೆ ಪೊಲೀಸರು ಸೂಚಿಸಿದ್ದಾರೆ.
ಕನ್ವರ್ ಯಾತ್ರೆ ಮಾರ್ಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ವೇಳೆ ಉತ್ತರಾಖಂಡ ಸರ್ಕಾರದ ಪರ ವಕೀಲರು ನಿಜವಾದ ಸಮಸ್ಯೆ ಎಂದರೆ ‘ಶಿವ ಡಾಬಾ, ಪಾರ್ವತಿ ಧಾಬಾ’ ಎಂಬ ಹೆಸರುಗಳನ್ನು ಮುಸ್ಲಿಮರು ತಮ್ಮ ಡಾಬಾಗಳಿಗೆ ಇಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.
ಜುಲೈ 22ರಂದು, ಎರಡೂ ರಾಜ್ಯ ಸರ್ಕಾರಗಳು ಹೊರಡಿಸಿದ ನಿರ್ದೇಶನಗಳ ಕಾನೂನುಬದ್ಧತೆಯನ್ನು ಪರಿಶೀಲಿಸಲು ನ್ಯಾಯಾಲಯ ನಿರಾಕರಿಸಿತ್ತು.
2024ರಲ್ಲಿ ಉತ್ತರ ಪ್ರದೇಶ ಸರ್ಕಾರ ಇದೇ ರೀತಿಯ ಆದೇಶಗಳನ್ನು ಹೊರಡಿಸಿತ್ತು. ಆ ಸಮಯದಲ್ಲಿ ರಾಜ್ಯದ ಮುಜಫರ್‌ನಗರದ ಪೊಲೀಸರು ಕನ್ವರ್ ಯಾತ್ರೆ ಮಾರ್ಗದಲ್ಲಿ ಭಕ್ತರ ಗೊಂದಲ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಸುಪ್ರೀಂ ಕೋರ್ಟ್ ಜುಲೈ 2024ರಲ್ಲಿ ನೀಡಿದ ಮಧ್ಯಂತರ ಆದೇಶದಲ್ಲಿ, ಅಂಗಡಿ, ಹೋಟೆಲ್ ಮಾಲೀಕರು ತಮ್ಮ ಗುರುತನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವುದನ್ನು ನಿಷೇಧಿಸಿತ್ತು.


