ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಾಂಸ್ಥಿಕ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಕೈ ಜೋಡಿಸಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಎಸ್‌ಐಆರ್ ಮತ್ತು ಮತಗಳ್ಳತನದ ವಿರುದ್ದ ಬಿಹಾರದಲ್ಲಿ ಹಮ್ಮಿಕೊಂಡಿರುವ ‘ವೋಟರ್ ಅಧಿಕಾರ್’ ಯಾತ್ರೆಯಲ್ಲಿ ಭಾನುವಾರ ಅವರು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ಹೇಗೆ ಸೇರ್ಪಡೆ ಮಾಡಲಾಗಿದೆ ಎಂಬ ನಮ್ಮ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರ ನೀಡಿಲ್ಲ. ಹಾಗಾಗಿ, ಅದರ ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮುಂಬರುವ ಬಿಹಾರ ಚುನಾವಣೆಗಾಗಿ ಇಂಡಿಯಾ ಒಕ್ಕೂಟವು ‘ಸೈದ್ಧಾಂತಿಕ ಮತ್ತು ರಾಜಕೀಯವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಚುನಾವಣೆಯ ಫಲಿತಾಂಶ ನಮಗೆ ಫಲಪ್ರದವಾಗಲಿದೆ. ನಾವೆಲ್ಲ ಸಾಮಾನ್ಯ ಪ್ರಣಾಳಿಕೆಯೊಂದಿಗೆ ಮತದಾರರ ಮುಂದೆ ಹೋಗುತ್ತೇವೆ” ಎಂದಿದ್ದಾರೆ.
ಮತಗಳ್ಳತನಕ್ಕೆ ಸಂಬಂಧಿಸಿದ ತನ್ನ ಆರೋಪಕ್ಕೆ ಚುನಾವಣಾ ಆಯೋಗ ಪ್ರಮಾಣಪತ್ರ ಕೇಳಿದೆ ಎಂದ ರಾಹುಲ್ ಗಾಂಧಿ, ಅನುರಾಗ್ ಠಾಕೂರ್ ಅಂತಹದ್ದೇ ಆರೋಪ ಮಾಡಿದರೂ ಅವರಿಂದ ಪ್ರಮಾಣಪತ್ರ ಕೇಳಿಲ್ಲ ಎಂದಿದ್ದಾರೆ.
“ನಾನು ಮಹದೇವಪುರದ ಮತಗಳ್ಳತನದ ಕುರಿತು ಪತ್ರಿಕಾಗೋಷ್ಠಿ ಮಾಡುತ್ತಿದ್ದೆ. ಐದು ನಿಮಿಷಗಳಲ್ಲಿ, ರಾಹುಲ್ ಗಾಂಧಿ ಪ್ರಮಾಣಪತ್ರ ನೀಡಬೇಕು. ಅವರು ಪ್ರಮಾಣಪತ್ರ ಸಲ್ಲಿಸದಿದ್ದರೆ ಆರೋಪಗಳನ್ನು ಸ್ವೀಕರಿಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಕೆಲ ದಿನಗಳ ನಂತರ, ಅನುರಾಗ್ ಠಾಕೂರ್ ಅದೇ ರೀತಿಯ ಆರೋಪಗಳನ್ನು ಮಾಡಿದರು. ಆದರೆ, ಅವರಿಂದ ಯಾವುದೇ ಪ್ರಮಾಣಪತ್ರ ಕೇಳಿಲ್ಲ. ನಾನು ನಕಲಿ ಮತದಾರರ ಬಗ್ಗೆ ಮಾತನಾಡಿದ್ದೆ, ಅವರು ಕೂಡ ಅದನ್ನೇ ಮಾಡಿದ್ದರು. ಐದು ನಿಮಿಷಗಳಲ್ಲಿ ನನ್ನಿಂದ ಪ್ರಮಾಣಪತ್ರ ಕೇಳಲಾಯಿತು. ಆದರೆ, ಇಂದಿನವರೆಗೆ ಅನುರಾಗ್ ಠಾಕೂರ್ ಅವರಿಂದ ಕೇಳಿಲ್ಲ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ (ಎಂಎಲ್) ನ ದೀಪಂಕರ್ ಭಟ್ಟಾಚಾರ್ಯ ಮತ್ತು ವಿಐಪಿಯ ಮುಖೇಶ್ ಸೈನಿ ಇದ್ದರು.
LIVE: Joint Press Conference | Araria, Bihar https://t.co/vWMF3a65Nc
— Rahul Gandhi (@RahulGandhi) August 24, 2025
ಇದಕ್ಕೂ ಮೊದಲು ಅರಾರಿಯಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ ಮೋದಿ ಸರ್ಕಾರ, ಈಗ ಚುನಾವಣಾ ಆಯೋಗದ ಸಹಾಯದಿಂದ ಎಸ್‌ಐಆರ್ ಮೂಲಕ ಬಡವರ ಮತಗಳನ್ನು ಕದಿಯಲು ಬಯಸುತ್ತಿದೆ. ಇದಕ್ಕೆ ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದಾರೆ.
“ಚುನಾವಣಾ ಆಯೋಗ ತಟಸ್ಥವಾಗಿಲ್ಲ, ಅವರು ಮತಗಳನ್ನು ಕದಿಯುತ್ತಿದ್ದಾರೆ. ಎಸ್‌ಐಆರ್ ಎಂಬುವುದು ಮತಗಳನ್ನು ಕದಿಯಲು ಚುನಾವಣಾ ಆಯೋಗ ಮಾಡಿರುವ ಸಾಂಸ್ಥಿಕ ಪ್ರಯತ್ನವಾಗಿದೆ. ಪ್ರತಿಪಕ್ಷಗಳು ಮತದಾರರನ್ನು ಕೈಬಿಟ್ಟ ಬಗ್ಗೆ ದೂರು ನೀಡುತ್ತಿವೆ. ಆದರೆ, ಬಿಜೆಪಿ ಯಾವುದೇ ದೂರು ನೀಡುತ್ತಿಲ್ಲ. ಅದೇಕೆ ಹೀಗೆ? ಏಕೆಂದರೆ, ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಮತ್ತು ಬಿಜೆಪಿ ನಡುವೆ ಒಪ್ಪಂದ ಇದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಸರಿಯಾದ’ ಮತದಾರರ ಪಟ್ಟಿಯನ್ನು ಒದಗಿಸುವುದು ಚುನಾವಣಾ ಆಯೋಗದ ಕೆಲಸ. ಆದರೆ, ಅವರು ಮಹಾರಾಷ್ಟ್ರ, ಹರಿಯಾಣ ಮತ್ತು ಕರ್ನಾಟಕದಲ್ಲಿ ಆ ಕೆಲಸ ಮಾಡಿಲ್ಲ” ಎಂದು ಒತ್ತಿ ಹೇಳಿದ ರಾಹುಲ್ ಗಾಂಧಿ, “ಚುನಾವಣಾ ಆಯೋಗ ತನ್ನ ನಡವಳಿಕೆಯನ್ನು ಬದಲಾಯಿಸಿರುವುದನ್ನು ಸಾಬೀತುಪಡಿಸುವುದು ನಮ್ಮ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ‘ಗೋದಿ ಆಯೋಗ’ವಾಗಿ ಮಾರ್ಪಟ್ಟಿದೆ. ಚುನಾವಣಾ ಸಂಸ್ಥೆಯ ವಿಶ್ವಾಸಾರ್ಹತೆ ತಳಮಟ್ಟಕ್ಕೆ ಕುಸಿದಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ. ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅಕ್ರಮ ಮತದಾರರನ್ನು ಪತ್ತೆ ಮಾಡಲು ಎಸ್‌ಐಆರ್ ಮಾಡಲಾಗುತ್ತದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ ಆದರೆ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಚುನಾವಣಾ ಆಯೋಗವು ಹಾಗೆ ಉಲ್ಲೇಖಿಸಿಲ್ಲ” ಎಂದಿದ್ದಾರೆ.
“ತನ್ನ ವರ್ಚಸ್ಸು ನಷ್ಟಕ್ಕೆ ಚುನಾವಣಾ ಆಯೋಗವನ್ನೇ ದೂಷಿಸಬೇಕು” ಎಂದು ಭಟ್ಟಾಚಾರ್ಯ ಹೇಳಿದ್ದು, “ಇದು ಚುನಾವಣಾ ಆಯೋಗವಲ್ಲ, ಬದಲಾಗಿ ಭಾರತದ ಚುನಾವಣಾ ಲೋಪ” (It is not the Election Commission, but the Election Omission of India) ಎಂದು ಕರೆದಿದ್ದಾರೆ.


