ಪ್ರತಿಪಕ್ಷಗಳ ವಿರೋಧದ ನಡುವೆಯೂ ಜಮ್ಮು ಕಾಶ್ಮೀರ ಸರ್ಕಾರ ನಿಷೇಧಿತ ಜಮಾತೆ ಇಸ್ಲಾಮಿಗೆ ಸಂಬಂಧಿಸಿದ 215 ಶಾಲೆಗಳನ್ನು ತನ್ನ ವಶಕ್ಕೆ ಪಡೆದಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಕಾಶ್ಮೀರ ಕಣಿವೆಯ 10 ಜಿಲ್ಲೆಗಳ ಶಾಲೆಗಳ ಕಾರ್ಯನಿರ್ವಹಣೆಯನ್ನು ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಸರ್ಕಾರಿ ಶಾಲೆಗಳ ಪ್ರಾಂಶುಪಾಲರನ್ನು ಒಳಗೊಂಡ ವಿಶೇಷ ತಂಡ ವಹಿಸಿಕೊಂಡಿವೆ ಎಂದು ವರದಿ ಹೇಳಿದೆ.
ಜಮಾತೆ ಇಸ್ಲಾಮಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಯಾದ ಫಲಾಹ್-ಎ-ಆಮ್ ಟ್ರಸ್ಟ್ ನಡೆಸುತ್ತಿದ್ದ ಶಾಲೆಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಸರ್ಕಾರ ಶುಕ್ರವಾರ ಘೋಷಿಸಿತ್ತು.
ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದೆ ಎಂಬ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಜಮಾತೆ ಇಸ್ಲಾಮಿ ಜಮ್ಮು ಕಾಶ್ಮೀರವನ್ನು 2019ರಲ್ಲಿ ನಿಷೇಧಿಸಲಾಗಿದೆ. (ಜಮಾತೆ ಇಸ್ಲಾಮಿ ಹಿಂದ್ ಭಾರತದಲ್ಲಿ ನಿಷೇಧಿಸಲ್ಪಟ್ಟಿಲ್ಲ ಎರಡೂ ಸಂಘಟನೆಗಳಿಗೆ ವ್ಯತ್ಯಾಸಗಳಿವೆ)
215 ಶಾಲೆಗಳ ವ್ಯವಸ್ಥಾಪಕ ಸಮಿತಿಯ ಸಿಂಧುತ್ವವು ಮುಕ್ತಾಯಗೊಂಡಿದ್ದು, ಆ ಸಂಸ್ಥೆಗಳ ವಿರುದ್ಧ ಗುಪ್ತಚರ ಸಂಸ್ಥೆಗಳು ಪ್ರತಿಕೂಲ ವರದಿ ನೀಡಿವೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ ಎಂದು ದಿ ಹಿಂದೂ ವರದಿ ವಿವರಿಸಿದೆ.
“ಈ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡುವ ಸಲುವಾಗಿ 215 ಶಾಲೆಗಳ ವ್ಯವಸ್ಥಾಪಕ ಸಮಿತಿಯನ್ನು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪ ಆಯುಕ್ತರು ವಹಿಸಿಕೊಳ್ಳಬೇಕೆಂದು ಈ ಮೂಲಕ ಆದೇಶಿಸಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶವನ್ನು ದಿ ಹಿಂದೂ ವರದಿ ಉಲ್ಲೇಖಿಸಿದೆ ತಿಳಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಅಥವಾ ಜಿಲ್ಲಾಧಿಕಾರಿಗಳು ಹೊಸ ವ್ಯವಸ್ಥಾಪಕ ಸಮಿತಿಯನ್ನು ಪ್ರಸ್ತಾಪಿಸುತ್ತಾರೆ ಎಂದು ಆದೇಶದಲ್ಲಿ ಸೇರಿಸಲಾಗಿದೆ.
ಆದರೆ, ಜಮ್ಮು ಕಾಶ್ಮೀರದ ಶಿಕ್ಷಣ ಸಚಿವೆ ಸಕೀನಾ ಇಟ್ಟೂ ಅವರು, ಈ ಶಾಲೆಗಳನ್ನು ಜಿಲ್ಲಾಧಿಕಾರಿಗಳಲ್ಲ, ಸರ್ಕಾರಿ ಶಾಲೆಗಳ ಪ್ರಾಂಶುಪಾಲರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳ ಟೀಕೆಗಳ ನಡುವೆ ಶಾಲೆಗಳ ಸ್ವಾಧೀನ “ತಾತ್ಕಾಲಿಕ” ಎಂದು ಇಟ್ಟೂ ತಿಳಿಸಿದ್ದಾರೆ.
“ಸರ್ಕಾರ ಸ್ವಾಧೀನಪಡಿಸಿಕೊಂಡ ಶಾಲೆಗಳ ಸಿಬ್ಬಂದಿ ಮುಂದುವರಿಯುತ್ತಾರೆ. ಸಿಐಡಿ ಪರಿಶೀಲನೆಯ ನಂತರ ಹೊಸ ನಿರ್ವಹಣಾ ಸಮಿತಿಗಳನ್ನು ರಚಿಸಲಾಗುವುದು. ಮೂರು ತಿಂಗಳ ನಂತರ ಪ್ರಕ್ರಿಯೆಯನ್ನು ಪರಿಶೀಲಿಸಲಾಗುವುದು” ಎಂದು ಸಚಿವೆ ಇಟ್ಟೂ ಹೇಳಿದ್ಧಾರೆ.
ಶಾಲೆಗಳ ಸ್ವಾಧೀನದ ಬಗ್ಗೆ ಪ್ರತಿಕ್ರಿಯಿಸಿದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, “ಕಾಶ್ಮೀರಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಕಳೆದ ವರ್ಷ ನ್ಯಾಷನಲ್ ಕಾನ್ಫರೆನ್ಸ್‌ಗೆ ಮತ ಹಾಕಿದ್ದರು. ಆದರೆ, ನ್ಯಾಷನಲ್ ಕಾನ್ಫರೆನ್ಸ್ ಕೇಂದ್ರಾಡಳಿತ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಶಾಲೆಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ಅವರು ಆರೋಪಿಸಿದ್ದಾರೆ.
ಎಸ್‌ಐಆರ್ ‘ಸಾಂಸ್ಥಿಕ ಮತಗಳ್ಳತನ’, ಚುನಾವಣಾ ಆಯೋಗ ಬಿಜೆಪಿ ಜೊತೆ ಕೈ ಜೋಡಿಸಿದೆ: ರಾಹುಲ್ ಗಾಂಧಿ


