ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕೋಮು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ದಾಖಲಿಸಲಾದ ಪ್ರಕರಣದಲ್ಲಿ ಪತ್ರಕರ್ತ ಅಭಿಸಾರ್ ಶರ್ಮಾ ಅವರಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಗುವಾಹಟಿ ಹೈಕೋರ್ಟ್‌ಗೆ ಹೋಗುವಂತೆ ನಿರ್ದೇಶನ ನೀಡಿದೆ.
ಆಗಸ್ಟ್ 21ರಂದು ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆಯಡಿ ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯಗಳು, ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತ ಹೇಳಿಕೆಗಳನ್ನು ನೀಡಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ಅಲೋಕ್ ಬರುವಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಎಬಿವಿಪಿ ಅಸ್ಸಾಂನ ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾಗಿದೆ.
ಶರ್ಮಾ ಅವರು ಕೇಂದ್ರ ಮತ್ತು ಅಸ್ಸಾಂ ಸರ್ಕಾರವನ್ನು ಅಪಹಾಸ್ಯ ಮಾಡಿ ಅವಹೇಳನ ಮಾಡಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಅಪಾಯ ಎದುರಾಗಿದೆ ಎಂದು ದೂರುದಾರ ಅಲೋಕ್ ಬರುವಾ ಆರೋಪಿಸಿದ್ದಾರೆ. ಶರ್ಮಾ ಅವರು ‘ರಾಮರಾಜ್ಯದ ತತ್ವವನ್ನು ಅಪಹಾಸ್ಯ ಮಾಡಿದ್ದಾರೆ’ ಮತ್ತು ಅಸ್ಸಾಂನ ಮುಖ್ಯಮಂತ್ರಿ ವಿರುದ್ಧ ಕೋಮು ರಾಜಕೀಯದ ಆರೋಪ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಶರ್ಮಾ ಈ ಪ್ರಕರಣವನ್ನು ‘ಸಂಪೂರ್ಣವಾಗಿ ಆಧಾರರಹಿತ’ ಎಂದಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, “ಭಿನ್ನಾಭಿಪ್ರಾಯಗಳನ್ನು ಅಡಗಿಸಲು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಈ ಪ್ರಕರಣದಲ್ಲಿ ಬಿಎನ್‌ಎಸ್ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನಾನು ಮಾಡಿರುವ ಆರೋಪಗಳನ್ನು ಅಸ್ಸಾಂ ಸಿಎಂ ಮಾಡಿರುವ ಭಾಷಣಗಳ ವಿಡಿಯೋ ತುಣುಕುಗಳು ಇತರ ಆಧಾರಗಳು ಪುಷ್ಠೀಕರಿಸುತ್ತವೆ” ಎಂದು ಶರ್ಮಾ ಹೇಳಿದ್ದಾರೆ.
ಬಿಎನ್‌ಎಸ್ ಸೆಕ್ಷನ್ 152ರ ಅಡಿ ಪ್ರಕರಣ ದಾಖಲಿಸಿರುವುದನ್ನು ಶರ್ಮಾ ಪ್ರಶ್ನಿಸಿದ್ದು, ಇದು ಐಪಿಸಿಯಲ್ಲಿ ರದ್ದಾದ ‘ದೇಶದ್ರೋಹ ಕಾನೂನಿನ’ ಹೊಸ ರೂಪ ಎಂದಿದ್ದಾರೆ.
ಮೇ 2022ರಲ್ಲಿ, ಸುಪ್ರೀಂ ಕೋರ್ಟ್ ಐಪಿಸಿ ಸೆಕ್ಷನ್ 124ಎ (ಬಿಎನ್‌ಎಸ್ ಸೆಕ್ಷನ್ 152) ಅಡಿಯಲ್ಲಿ ‘ದೇಶದ್ರೋಹ ಪ್ರಕರಣಗಳ ವಿಚಾರಣೆಗಳು ಮತ್ತು ಕ್ರಿಮಿನಲ್ ಮೊಕದ್ದಮೆ’ಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.
ಜುಲೈ 2024ರಲ್ಲಿ ಕ್ರಿಮಿನಲ್ ಕಾನೂನು ಐಪಿಸಿಯಿಂದ ಬಿಎನ್‌ಎಸ್ ಎಂದು ಬದಲಾದಾಗ, ಸೆಕ್ಷನ್ 152ರ ರೂಪದಲ್ಲಿ ಸೆಕ್ಷನ್ 124ಎ ಅನ್ನು ಮತ್ತೆ ಪರಿಚಯಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಈಗಾಗಲೇ ವಾದ ಮಂಡನೆಯಾಗಿದೆ.
ನ್ಯಾಯಮೂರ್ತಿ ಮುರಳೀಧರ್ ಅವರನ್ನು ವರ್ಗಾಯಿಸಲು ‘ಕೊಲಿಜಿಯಂ ಮೇಲೆ ಸರ್ಕಾರ ಒತ್ತಡ’ ಹೇರಿತ್ತು: ನ್ಯಾ. ಲೋಕೂರ್ ಆರೋಪ


