2018ರ ಬಿಟ್‌ಕಾಯಿನ್ ಸುಲಿಗೆ ಪ್ರಕರಣದಲ್ಲಿ ಗುಜರಾತ್‌ನ ಬಿಜೆಪಿ ಮಾಜಿ ಶಾಸಕ ನಳಿನ್ ಕೊಟಾಡಿಯಾ, ಅಮ್ರೇಲಿ ಜಿಲ್ಲೆಯ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಪಟೇಲ್ ಮತ್ತು ಇತರ 12 ಜನರಿಗೆ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ಶುಕ್ರವಾರ (ಆ.29) ಜೀವಾವಧಿ ಶಿಕ್ಷೆ ವಿಧಿಸಿದೆ.
ಸೂರತ್ ಮೂಲದ ಬಿಲ್ಡರ್ ಶೈಲೇಶ್ ಭಟ್ ಮತ್ತು ಅವರ ಪಾಲುದಾರರನ್ನು ಗಾಂಧಿನಗರದಿಂದ ಅಪಹರಿಸಿ ರೂ.32 ಕೋಟಿ ಮೌಲ್ಯದ 200 ಬಿಟ್‌ಕಾಯಿನ್‌ಗಳನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಾದವ್ ಅವರು ಕೊಟಾಡಿಯಾ, ಪಟೇಲ್ ಮತ್ತು ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಕೊಟಾಡಿಯಾ ಅವರು 2012 ಮತ್ತು 2017 ರ ನಡುವೆ ಅಮ್ರೇಲಿಯ ಧಾರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.
“ಈ ಪ್ರಕರಣದಲ್ಲಿ ಆರೋಪ ಹೊರಿಸಲಾದ ಒಟ್ಟು 15 ಜನರಲ್ಲಿ ಕೊಟಾಡಿಯಾ ಸೇರಿದಂತೆ 14 ಜನರನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಇನ್ನೊಬ್ಬರು ಬಿಪಿನ್ ಪಟೇಲ್ ಎಂಬ ವ್ಯಕ್ತಿಯನ್ನು ಬಿಡುಗಡೆ ಮಾಡಿದೆ. ಆರೋಪಿಗಳು 200 ಬಿಟ್‌ಕಾಯಿನ್‌ಗಳನ್ನು ಸುಲಿಗೆ ಮಾಡಿದ ಪಿತೂರಿಯ ಭಾಗವಾಗಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಅವರಲ್ಲಿ ಅಮ್ರೇಲಿ ಪೊಲೀಸ್ ಪಡೆಯ ಒಂಬತ್ತು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ” ಎಂದು ಈ ಕಾನ್‌ಸ್ಟೆಬಲ್‌ಗಳನ್ನು ಪ್ರತಿನಿಧಿಸಿದ್ದ ವಕೀಲ ಪರೇಶ್ ವಘೇಲಾ ಹೇಳಿದ್ದಾರೆ.
ಒಂದು ವಾರದೊಳಗೆ ಒಂಬತ್ತು ಪೊಲೀಸರು ಹೈಕೋರ್ಟ್‌ನಲ್ಲಿ ತೀರ್ಪನ್ನು ಪ್ರಶ್ನಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 9, 2018ರಂದು ಅಮ್ರೇಲಿಯ ಪೊಲೀಸರು ಗಾಂಧಿನಗರದಿಂದ ನನ್ನನ್ನು ಮತ್ತು ನನ್ನ ವ್ಯವಹಾರ ಪಾಲುದಾರ ಕಿರಿತ್ ಪಲಾಡಿಯಾ ಅವರನ್ನು ಅಪಹರಿಸಿ, ನಮ್ಮ ಬಳಿಯಿದ್ದ ಬಿಟ್‌ಕಾಯಿನ್‌ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಬಿಲ್ಡರ್ ಭಟ್ ಆರೋಪಿಸಿದ್ದರು.
ಭಟ್ ಅವರು ಗೃಹ ಇಲಾಖೆಗೆ ಸಲ್ಲಿಸಿದ ಅರ್ಜಿಯಲ್ಲಿ, ಮಾಜಿ ಶಾಸಕ ಕೊಟಾಡಿಯಾ ಮತ್ತು ಅಂದಿನ ಅಮ್ರೇಲಿ ಎಸ್‌ಪಿ ಪಟೇಲ್ ಅವರು ತನ್ನ ಮತ್ತು ಪಾಲುದಾರ ಪಲಾಡಿಯಾ ಅವರಿಂದ ಬಿಟ್‌ಕಾಯಿನ್‌ಗಳನ್ನು ಸುಲಿಗೆ ಮಾಡಿದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದರು.
ಗೃಹ ಇಲಾಖೆಯ ಸೂಚನೆಯ ಮೇರೆಗೆ, ರಾಜ್ಯ ಸಿಐಡಿ-ಅಪರಾಧ ವಿಭಾಗವು ಕೊಟಾಡಿಯಾ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪಹರಣ, ಸುಲಿಗೆ ಮತ್ತು ಕ್ರಿಮಿನಲ್ ಪಿತೂರಿಗಾಗಿ ಎಫ್‌ಐಆರ್ ದಾಖಲಿಸಿತ್ತು.
ಹಲವು ತಿಂಗಳುಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದ ಕೊಟಾಡಿಯಾ ಅವರನ್ನು ಅಂತಿಮವಾಗಿ ಸೆಪ್ಟೆಂಬರ್ 2018ರಲ್ಲಿ ಉತ್ತರ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಪೊಲೀಸರು ಬಂಧಿಸಿದ್ದರು. ನಂತರ ನ್ಯಾಯಾಲಯ ಜಾಮೀನು ನೀಡಿತ್ತು. ಪಟೇಲ್ ಮತ್ತು ಅವರ ಅಧೀನ ಅಧಿಕಾರಿಗಳು ಸೇರಿದಂತೆ ಇತರ ಆರೋಪಿಗಳಿಗೂ ಬಂಧನದ ನಂತರ ಜಾಮೀನು ನೀಡಲಾಗಿತ್ತು.
ಹೈದರಾಬಾದ್: ‘ಡಿಜಿಟಲ್ ಅರೆಸ್ಟ್’ ಮೂಲಕ ರೂ.72 ಲಕ್ಷ ಕಳೆದುಕೊಂಡ 82 ವರ್ಷದ ವೃದ್ಧ


