ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಭಾರತದ ವಿರುದ್ಧ ಹೊಸ ವಾಗ್ದಾಳಿ ನಡೆಸಿರುವ ಅಮೆರಿಕದ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ, “ಬ್ರಾಹ್ಮಣರು’ ಭಾರತೀಯ ಜನರ ವೆಚ್ಚದಲ್ಲಿ ಲಾಭ ಗಳಿಸುತ್ತಿದ್ದಾರೆ. ಅದನ್ನು ‘ನಿಲ್ಲಿಸಬೇಕಾಗಿದೆ’ ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
‘ಮೋದಿ ಒಬ್ಬರು ಮಹಾನ್ ನಾಯಕ’ ಎಂದು ಟ್ರಂಪ್ ಆಡಳಿತದ ವ್ಯಾಪಾರ ಮತ್ತು ಉತ್ಪಾದನೆಯ ಹಿರಿಯ ಸಲಹೆಗಾರ ನವರೊ ಭಾನುವಾರ (ಆ.29) ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ, ಭಾರತೀಯ ನಾಯಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಹೇಗೆ ಸಹಕರಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ”
“ನಾನು ಸರಳವಾಗಿ ಹೇಳುವುದೇನೆಂದರೆ, ಭಾರತೀಯರೇ ದಯವಿಟ್ಟು ಇಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ಅರ್ಥಮಾಡಿಕೊಳ್ಳಿ. ನೀವು ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಣರು ಲಾಭ ಗಳಿಸುವಂತೆ ಮಾಡುತ್ತಿದ್ದೀರಿ. ನಾವು ಅದನ್ನು ನಿಲ್ಲಿಸಬೇಕು” ಎಂದು ನವರೊ ಹೇಳಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ಸುಂಕ ನೀತಿಗಳಿಂದಾಗಿ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧ ಹದೆಗೆಟ್ಟ ನಂತರ, ನವರೊ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರತ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.
ಉಕ್ರೇನ್ ಜೊತೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಭಾರತದ ಪ್ರಧಾನಿ ನರೇಂದ್ರ ‘ಮೋದಿಯ ಯುದ್ಧ’ ಎಂದು ಆಗಸ್ಟ್ 28ರಂದು ನವರೊ ಹೇಳಿದ್ದರು. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ಮೇಲಿನ ದಾಳಿಗೆ ಭಾರತ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದ್ದರು.
ಟ್ರಂಪ್ ಆಡಳಿತ ಭಾರತದ ಮೇಲೆ ಶೇ.25 ರಷ್ಟು ಪ್ರತಿ ಸುಂಕ ಮತ್ತು ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ವಿಧಿಸಿದೆ.
ಭಾರತವು ತನ್ನ ಮೇಲೆ ವಿಧಿಸಲಾದ ಸುಂಕಗಳನ್ನು ‘ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ’ ಎಂದು ಕರೆದಿದೆ.
ಚೀನಾ ರಷ್ಯಾದಿಂದ ತೈಲು ಖರೀದಿಸುತ್ತಿರುದು ಮತ್ತು ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿರುವುದನ್ನು ಉಲ್ಲೇಖಿಸಿ, “ಪುಟಿನ್ ಅವರನ್ನು ಉಸಿರುಗಟ್ಟಿಸಲು’ ಇವಿಷ್ಟು ಸಾಕಾ? ಎಂಬ ಪ್ರಶ್ನೆಗೆ ಉತ್ತರಿಸಿದ ನವರೊ, ‘ಪ್ರಸ್ತುತ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಲಾಗಿದೆ. ಚೀನಾ ಮೇಲೆ ಅದಕ್ಕಿಂತ ಕೊಂಚ ಹೆಚ್ಚೇ ವಿಧಿಸಿದ್ದೇವೆ. ನಮಗೆ ಸಮಸ್ಯೆ ಆಗದಂತೆ ಇನ್ನೂ ಎಷ್ಟು ಹೆಚ್ಚು ಮಾಡಲು ನೀವು ಬಯಸುತ್ತೀರಿ? ಎಂದು ಕೇಳಿದ್ದಾರೆ.
ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರಲಿಲ್ಲ ಅಥವಾ ಖರೀದಿ ಪ್ರಮಾಣ ಬಹಳ ಕಡಿಮೆ ಇತ್ತು.
ಈಗ ಏನಾಯಿತು? ರಷ್ಯಾದ ತೈಲ ಸಂಸ್ಕರಣಾಗಾರಗಳು ಭಾರತದ ದೊಡ್ಡ ತೈಲ ಕಂಪನಿಗಳ ಜೊತೆಗೆ ಕೈ ಜೋಡಿಸಿದವು. ಪುಟಿನ್ ಅವರು ಮೋದಿಯವರಿಗೆ ಕಚ್ಚಾ ತೈಲದ ಮೇಲೆ ರಿಯಾಯಿತಿ ನೀಡುತ್ತಾರೆ. ಭಾರತವು ಆ ಕಚ್ಚಾ ತೈಲವನ್ನು ಸಂಸ್ಕರಿಸಿ, ಯುರೋಪ್, ಆಫ್ರಿಕಾ ಮತ್ತು ಏಷಿಯಾಕ್ಕೆ ಹೆಚ್ಚಿನ ಬೆಲೆಗೆ (ಪ್ರೀಮಿಯಂನಲ್ಲಿ) ರವಾನಿಸುತ್ತದೆ. ಇದರಿಂದ ಅವರು ಭಾರೀ ಪ್ರಮಾಣದ ಲಾಭ ಗಳಿಸುತ್ತಾರೆ ಎಂದು ನವರೊ ಟೀಕಿಸಿದ್ದಾರೆ.


