ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿರುವ ವ್ಯಕ್ತಿಗಳಲ್ಲಿ ಒಬ್ಬರಾದ ಕಮಲ್ ಅಹ್ಮದ್ ವಕೀಲ್ ಅಹ್ಮದ್ ಅನ್ಸಾರಿ ಅವರ ಸಮಾಧಿ ಮುಂದೆ ಸಂಬಂಧಿಕರು ಬಾಂಬೆ ಹೈಕೋರ್ಟ್ ಆದೇಶವನ್ನು ಓದಿರುವ ಅಪರೂಪದ ಘಟನೆ ಭಾನುವಾರ (ಆ.31) ನಾಗ್ಪುರದ ಜರಿಪಟ್ಕಾ ಕಬ್ರಸ್ತಾನದಲ್ಲಿ ನಡೆದಿದೆ.
2006ರ ಮುಂಬೈ ರೈಲು ಸ್ಪೋಟ ಪ್ರಕರಣದ ಎಲ್ಲಾ ಆರೋಪಿಗಳನ್ನು 2025ರ ಜುಲೈ 21ರಂದು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಕಮಲ್ ಅಹ್ಮದ್ ವಕೀಲ್ ಅಹ್ಮದ್ ಅನ್ಸಾರಿ ನಾಲ್ಕು ವರ್ಷಗಳ ಮುಂಚೆ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.
2006ರ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಮೋಕಾ) ಸ್ಥಾಪನೆಗೊಂಡಿದ್ದ ವಿಶೇಷ ನ್ಯಾಯಾಲಯವು 12 ಮುಸ್ಲಿಂ ಪುರುಷರನ್ನು ದೋಷಿಗಳೆಂದು 2015ರಲ್ಲಿ ಘೋಷಿಸಿತ್ತು. ಕಮಲ್ ಅಹ್ಮದ್ ಸೇರಿದಂತೆ ಐವರಿಗೆ ಮರಣದಂಡನೆ ಘೋಷಣೆ ಮಾಡಿತ್ತು.
ಆದರೆ, ಜುಲೈ 21, 2025ರಂದು ಪ್ರಕರಣದ ಎಲ್ಲಾ ಅಪರಾಧಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ‘ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಕೋರ್ಟ್ ಹೇಳಿದೆ. ಮೋಕಾ ನ್ಯಾಯಾಲಯದ ಮರಣದಂಡನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವಾಗಲೇ ಕಮಲ್ ಅಹ್ಮದ್ ಜೈಲಿನಲ್ಲಿ ಕೊನೆಯುಸಿರೆಳೆದಿದ್ದರು.
‘ಇನ್ನೋಸೆನ್ಸ್ ನೆಟ್‌ವರ್ಕ್’ನ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ವಾಹಿದ್ ಶೇಖ್ ಮತ್ತು ಜಮಿಯತ್-ಎ-ಉಲಮಾ ನಾಗ್ಪುರದ ಅಧ್ಯಕ್ಷ ಖಾರಿ ಸಬೀರ್ ನೇತೃತ್ವದಲ್ಲಿ, ದೆಹಲಿಯ ಕಮಲ್ ಅಹ್ಮದ್ ಅವರ ಕಿರಿಯ ಸಹೋದರ ಜಮಾಲ್ ಅಹ್ಮದ್ ಅನ್ಸಾರಿ, ಕುಟುಂಬ ಸದಸ್ಯರು, ಹೋರಾಟಗಾರರು ಮತ್ತು ಸಮುದಾಯದ ಮುಖಂಡರ ನಿಯೋಗ ಭಾನುವಾರ ಕಮಲ್ ಅಹ್ಮದ್ ಅವರ ಸಮಾಧಿಗೆ ಭೇಟಿ ನೀಡಿದೆ.
ಸಮಾಧಿಯ ಪಕ್ಕದಲ್ಲಿ ನಿಂತು, ಜುಲೈ 21, 2025ರಂದು ಬಾಂಬೆ ಹೈಕೋರ್ಟ್ ಕಮಲ್ ಅಹ್ಮದ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ ತೀರ್ಪನ್ನು ಗಟ್ಟಿಯಾಗಿ ಓದಿದ್ದಾರೆ. ಈ ಮೂಲಕ ‘ನಾನು ನಿರಪರಾಧಿ’ ಎಂದು ಕಮಲ್ ಅಹ್ಮದ್ ಯಾವಾಗಳೂ ಹೇಳುತ್ತಿದ್ದ ಮಾತನ್ನು ಸಾರ್ವಜನಿಕವಾಗಿ ದೃಢೀಕರಿಸಲಾಗಿದೆ ಎಂದು maktoobmedia.com ವರದಿ ಹೇಳಿದೆ.
ಬಿಹಾರದ ಮಧುಬನಿಯ ಬಡ ದಿನಗೂಲಿ ಕಾರ್ಮಿಕ ಕಮಲ್ ಅಹ್ಮದ್, ಒಂದು ಸಣ್ಣ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು, ತರಕಾರಿಗಳನ್ನು ಮಾರುತ್ತಿದ್ದರು ಮತ್ತು ತಮ್ಮ ಪತ್ನಿ ಮತ್ತು ಐವರು ಮಕ್ಕಳನ್ನು ಸಾಕಲು ಹೆಣಗಾಡುತ್ತಿದ್ದರು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಅವರನ್ನು ಬಂಧಿಸಿ, ‘ಭಯೋತ್ಪಾದಕ’ ಎಂದು ಹಣೆಪಟ್ಟಿ ಕಟ್ಟಿ, ಸ್ಫೋಟ ಪ್ರಕರಣದಲ್ಲಿ ಅವರ ಮೇಲೆ ಆರೋಪ ಹೊರಿಸಿದಾಗ ಅವರ ಜೀವನ ಛಿದ್ರವಾಯಿತು. 16 ವರ್ಷಗಳ ಕಾಲ, ಅವರು ಜೈಲಿನಲ್ಲಿದ್ದರು. ಅವರ ಕುಟುಂಬ ಸುಖಾಸುಮ್ಮನೆ ಕಳಂಕ ಹೊತ್ತುಕೊಂಡಿತ್ತು. ಅವರ ನೋವನ್ನು ಕೇಳುವವರೇ ಇರಲಿಲ್ಲ ಎಂದು maktoobmedia.com ವಿವರಿಸಿದೆ.
2021ರಲ್ಲಿ, ಕೋವಿಡ್-19 ಉತ್ತುಂಗದಲ್ಲಿದ್ದಾಗ, ಕಮಲ್ ಅಹ್ಮದ್ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಕಸ್ಟಡಿಯಲ್ಲಿ ನಿಧನರಾದರು. ಅವರ ಮರಣದ ನಾಲ್ಕು ವರ್ಷಗಳ ನಂತರ ಅವರು ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.
“ಕಮಲ್ ಅಹ್ಮದ್ ಅವರ ಸುಂದರ ಜೀವನವನ್ನು ಕಿತ್ತುಕೊಳ್ಳಲಾಯಿತು. ಅವರ ಮಕ್ಕಳು ತಂದೆ ಇಲ್ಲದೆ ಬೆಳೆದರು. ಅವರ ಪತ್ನಿ ಅಸಹನೀಯ ಕಳಂಕದ ಹೊರೆಯನ್ನು ಹೊತ್ತುಕೊಂಡರು. ಕುಟುಂಬ ಅವಮಾನ ಎದುರಿಸಿತು. ನ್ಯಾಯಾಲಯದ ತೀರ್ಪು ಕಾನೂನು ಕ್ರಮಗಳಿಂದ ಮುಕ್ತಗೊಳಿಸಬಹುದು. ಆದರೆ, ಅವರು ಕಳೆದುಕೊಂಡ ಜೀವನದ ಅಮೂಲ್ಯ ಸಮಯವನ್ನು ಹಿಂದಿರುಗಿಸಲು ಮತ್ತು ಅವರ ಕುಟುಂಬ ಅನುಭವಿಸಿದ ನೋವಿಗೆ ಪರಿಹಾರ ಕೊಡಲು ಸಾಧ್ಯವೇ?” ಎಂದು ಡಾ. ಅಬ್ದುಲ್ ವಾಹಿದ್ ಶೇಖ್ ಪ್ರಶ್ನಿಸಿದ್ದಾರೆ.
ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ, ದಶಕದ ಹಿಂದೆ ವಿಚಾರಣಾ ನ್ಯಾಯಾಲಯವು ಶೇಖ್ ಅವರನ್ನು ಖುಲಾಸೆಗೊಳಿಸಿತ್ತು. ಅಂದಿನಿಂದ, ಜೈಲು ಹಕ್ಕುಗಳ ಕಾರ್ಯಕರ್ತರಾಗಿರುವ ಶೇಖ್, ತಮ್ಮ ಸಂಘಟನೆಯಾದ ‘ಇನ್ನೋಸೆನ್ಸ್ ನೆಟ್‌ವರ್ಕ್ ಆಫ್ ಇಂಡಿಯಾ’ ಮೂಲಕ ಸುಳ್ಳು ಪ್ರಕರಣದಲ್ಲಿ ಸಿಲುಕಿದ ವ್ಯಕ್ತಿಗಳ ಬಿಡುಗಡೆಗಾಗಿ ಕೆಲಸ ಮಾಡುತ್ತಿದೆ.
ಕಮಲ್ ಅಹ್ಮದ್ ಅವರ ಸಮಾಧಿ ಮುಂದೆ ಭಾನುವಾರ ಪ್ರಾರ್ಥನೆ, ಭಾಷಣ ನಡೆಯಿತು. ನಮ್ಮ ವ್ಯವಸ್ಥೆಯು ದುರ್ಬಲ ವರ್ಗದ ಜನರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಸುತ್ತಿದೆ. ಬಡವರನ್ನು ಅಪರಾಧಿಗಳೆಂದು ಪರಿಗಣಿಸುತ್ತಿದೆ. ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಕಾನೂನನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಭಾಗವಹಿಸಿದ್ದವರು ಹೇಳಿದರು ಎಂದು maktoobmedia.com ವರದಿ ಮಾಡಿದೆ.
‘ಶಿಕ್ಷಣ ನಿಧಿ’ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಸಂಸದ ಸಸಿಕಾಂತ್ ಸೆಂಥಿಲ್ ಆಸ್ಪತ್ರೆಗೆ ದಾಖಲು


