ಭಾರತದ ಹೊಸ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಸಿ.ಪಿ ರಾಧಾಕೃಷ್ಣನ್ ಅವರಿಗೆ ಬುಧವಾರ (ಸೆ.10) ಅಭಿನಂದನೆ ಹೇಳಿರುವ ಕಾಂಗ್ರೆಸ್, ‘ನ್ಯಾಯಯುತತೆ ಮತ್ತು ನಿಷ್ಪಕ್ಷಪಾತದ ಮೌಲ್ಯ’ಗಳನ್ನು ಎತ್ತಿಹಿಡಿಯುವಂತೆ ಮನವಿ ಮಾಡಿದೆ.
ಭಾರತದ ಮೊದಲ ಉಪರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1952ರಲ್ಲಿ ರಾಜ್ಯಸಭೆಯಲ್ಲಿ ಆಡಿದ ಮಾತುಗಳನ್ನು ಇದೇ ವೇಳೆ ಕಾಂಗ್ರೆಸ್ ನೆನಪಿಸಿದೆ.
“ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ, ಅಂದರೆ ಈ ಸದನದ ಪ್ರತಿಯೊಂದು ಪಕ್ಷಕ್ಕೂ ಸೇರಿದವನು. ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯುವುದು, ಪ್ರತಿಯೊಂದು ಪಕ್ಷದ ಬಗ್ಗೆ ನ್ಯಾಯ ಹಾಗೂ ನಿಷ್ಪಕ್ಷಪಾತದಿಂದ ವರ್ತಿಸುವುದು ಮತ್ತು ಯಾರನ್ನು ದ್ವೇಷಿಸದೆ ಎಲ್ಲರನ್ನೂ ಸದ್ಭಾವನೆಯೊಂದಿಗೆ ಕಾಣುವುದು ನನ್ನ ಕರ್ತವ್ಯ” ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದ್ದರು.
“ಪ್ರತಿಪಕ್ಷ ಗುಂಪುಗಳು ಸರ್ಕಾರದ ನೀತಿಗಳನ್ನು ನ್ಯಾಯಯುತವಾಗಿ, ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಟೀಕಿಸಲು ಅವಕಾಶ ನೀಡದಿದ್ದರೆ ಪ್ರಜಾಪ್ರಭುತ್ವವು ದಬ್ಬಾಳಿಕೆಗೆ ಒಳಗಾಗುವ ಸಾಧ್ಯತೆಯಿದೆ” ಎಂದು ಡಾ. ರಾಧಾಕೃಷ್ಣನ್ ಅವರು ಮೇ 16, 1952 ರಂದು ರಾಜ್ಯಸಭೆಯ ಆರಂಭಿಕ ದಿನದಂದು ತಿಳಿಸಿದ್ದರು.
“ಡಾ. ರಾಧಾಕೃಷ್ಣನ್ ಅವರು ತಾವು ಬೋಧಿಸಿದ್ದನ್ನೇ ಅಕ್ಷರಶಃ ಮತ್ತು ಆತ್ಮದಲ್ಲಿ ಆಚರಣೆಗೆ ತಂದರು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
While extending its best wishes to Shri C. P. Radhakrishnan, the newly-elected Vice President of India who will also be the Chairman of the Rajya Sabha, the Indian National Congress recalls the wise words of Dr. Sarvepalli Radhakrishnan, the very first Vice President and Chairman…
— Jairam Ramesh (@Jairam_Ramesh) September 10, 2025
ಮಂಗಳವಾರ (ಸೆ.9) ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಅವರು 452 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಅಭ್ಯರ್ಥಿ ನ್ಯಾಯಮೂರ್ತಿ (ನಿವೃತ್ತ) ಬಿ. ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಪಡೆದಿದ್ದಾರೆ.
ಸಂಖ್ಯಾಬಲದ ಹೊರತಾಗಿಯೂ, ಫಲಿತಾಂಶವು ಬಿಜೆಪಿಯ ‘ನೈತಿಕ ಮತ್ತು ರಾಜಕೀಯ ಸೋಲು’ ಎಂದು ಕಾಂಗ್ರೆಸ್ ಬಣ್ಣಿಸಿದೆ.
ವಿರೋಧ ಪಕ್ಷಗಳ ಒಗ್ಗಟ್ಟು ಮತ್ತು ಕಾರ್ಯಕ್ಷಮತೆಯನ್ನು ಕಾಂಗ್ರೆಸ್ ಶ್ಲಾಘಿಸಿದ್ದು, ಸುದರ್ಶನ್ ರೆಡ್ಡಿ ಅವರು ಶೇಕಡ 40ರಷ್ಟು ಮತಗಳನ್ನು ಗಳಿಸಿದ್ದಾರೆ ಎಂದು ಎತ್ತಿ ತೋರಿಸಿದೆ. 2022ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಶೇಕಡ 26ರಷ್ಟು ಮತಗಳನ್ನು ಪಡೆದಿದ್ದರು. ಅದಕ್ಕೆ ಹೋಲಿಸಿದೆ ಈ ಬಾರಿ ಗಮನಾರ್ಹ ಸುಧಾರಣೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಬಿಹಾರ ಎಸ್‌ಐಆರ್: ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪರಿಗಣಿಸಲು ಚು. ಆಯೋಗ ನಿರ್ದೇಶನ


