ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025 ರವರೆಗೆ ರಾಜ್ಯಾದ್ಯಂತ ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ.12) ಘೋಷಿಸಿದ್ದಾರೆ.
ಈ ಸಮೀಕ್ಷೆಯು ರಾಜ್ಯದ ಸುಮಾರು 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಮತ್ತು ರಾಜಕೀಯ ಸ್ಥಿತಿಗತಿಗಳನ್ನು ವೈಜ್ಞಾನಿಕವಾಗಿ ಅರಿಯುವ ಉದ್ದೇಶವನ್ನು ಹೊಂದಿದೆ.
ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕಳೆದ 10 ವರ್ಷಗಳ ಹಿಂದೆ ಕಾಂತರಾಜ್ ಆಯೋಗವು ವರದಿಯನ್ನು ಸಲ್ಲಿಸಿದ ನಂತರ, ಕಾಲಮಿತಿಗೆ ಅನುಗುಣವಾಗಿ ನೂತನ ಸಮೀಕ್ಷೆಯ ಅಗತ್ಯವನ್ನು ಸರ್ಕಾರ ಮನಗಂಡಿದೆ ಎಂದು ತಿಳಿಸಿದರು. ಈ ಸಮೀಕ್ಷೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಮಧುಸೂಧನ್ ನಾಯ್ಕ್ ಅವರು ವಹಿಸಲಿದ್ದಾರೆ. ಡಿಸೆಂಬರ್ ಒಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿದೆ.
ಸಮೀಕ್ಷೆಯ ಉದ್ದೇಶ ಮತ್ತು ಮಹತ್ವ
ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಹೇಳುತ್ತದೆ. ಆದರೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಸಮಾಜದಲ್ಲಿನ ಅಸಮಾನತೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು 1950ರಲ್ಲಿ ಸಂವಿಧಾನ ಜಾರಿಯಾದಾಗ, ಅಸಮಾನತೆಯನ್ನು ಹೋಗಲಾಡಿಸದಿದ್ದರೆ ಪ್ರಜಾಪ್ರಭುತ್ವ ಉಳಿಯುವುದು ಕಷ್ಟ ಎಂದು ಹೇಳಿದ್ದರು. ಈ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿಖರವಾದ ದತ್ತಾಂಶಗಳು ಅನಿವಾರ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಸರ್ಕಾರದ ‘ಗ್ಯಾರಂಟಿ’ ಮತ್ತು ಹಿಂದೆ ಜಾರಿಗೊಳಿಸಿದ್ದ ‘ಭಾಗ್ಯ’ ಯೋಜನೆಗಳ ಮೂಲಕ ಅಸಮಾನತೆಯನ್ನು ತಗ್ಗಿಸಲು ಪ್ರಯತ್ನಿಸಲಾಗಿದೆ. ಆದರೆ, ಹಿಂದುಳಿದ ಸಮುದಾಯಗಳ ಬಡತನ, ನಿರುದ್ಯೋಗ ಮತ್ತು ಅನಕ್ಷರತೆ ಹೋಗಲಾಡಿಸಲು ಇನ್ನೂ ವಿಶೇಷ ಪ್ರಯತ್ನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಸಮೀಕ್ಷೆಯು ರಾಜ್ಯದ ಪ್ರತಿಯೊಂದು ಕುಟುಂಬದ (ಸುಮಾರು 2 ಕೋಟಿ ಕುಟುಂಬಗಳು) ಕುರಿತು ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಿದೆ.
ಸಮೀಕ್ಷೆಯ ವಿಧಾನ ಮತ್ತು ತಾಂತ್ರಿಕತೆ
ನೂತನ ಸಮೀಕ್ಷೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೋಷರಹಿತವಾಗಿ ನಡೆಯಲಿದೆ. ಪ್ರತಿ ಮನೆಯ ವಿದ್ಯುತ್ ಮೀಟರ್ ಆಧರಿಸಿ, ಮನೆಗಳಿಗೆ ವಿಶೇಷ ಗುರುತಿನ ಸಂಖ್ಯೆಯನ್ನು (UHID) ನೀಡಲಾಗುತ್ತದೆ. ಇದು ಜಿಯೋ ಟ್ಯಾಗಿಂಗ್ ಮೂಲಕ ಪ್ರತಿ ಮನೆಯ ನಿಖರ ವಿಳಾಸ ಮತ್ತು ಸ್ಥಾನವನ್ನು ಗುರುತಿಸಲು ಸಹಾಯ ಮಾಡುತ್ತದೆ. ಈಗಾಗಲೇ ಸುಮಾರು 1.55 ಲಕ್ಷ ಮನೆಗಳಿಗೆ ಈ ಗುರುತಿನ ಸಂಖ್ಯೆಯನ್ನು ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದ ಮನೆಗಳನ್ನು ಸಹ ಸಮೀಕ್ಷೆಗೆ ಒಳಪಡಿಸಲಾಗುತ್ತದೆ.
ಈ ಸಮೀಕ್ಷಾ ಕಾರ್ಯದಲ್ಲಿ 1.75 ಲಕ್ಷ ಸರ್ಕಾರಿ ಶಾಲಾ ಶಿಕ್ಷಕರು ಭಾಗಿಯಾಗಲಿದ್ದಾರೆ. ಇವರಿಗೆ ಗೌರವ ಸಂಭಾವನೆಯಾಗಿ ರೂ. 20,000 ವರೆಗೆ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಒಟ್ಟು ರೂ. 325 ಕೋಟಿ ವೆಚ್ಚವಾಗಲಿದೆ. ಸದ್ಯಕ್ಕೆ, ಸಮೀಕ್ಷೆಗಾಗಿ ತಾತ್ಕಾಲಿಕವಾಗಿ ರೂ. 420 ಕೋಟಿ ಮೀಸಲಿಡಲಾಗಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು.
ಪ್ರಶ್ನಾವಳಿ ಮತ್ತು ಸಾರ್ವಜನಿಕರ ಸಹಭಾಗಿತ್ವ
ಸಮೀಕ್ಷೆಯಲ್ಲಿ ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳು ವ್ಯಕ್ತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳು, ಉದ್ಯೋಗ, ನಿವಾಸ ಮತ್ತು ಇತರ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುತ್ತವೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜನರನ್ನು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮತ್ತು ಸರಿಯಾದ ಮಾಹಿತಿಯನ್ನು ಒದಗಿಸುವಂತೆ ಮನವಿ ಮಾಡಿದರು. ತಪ್ಪು ಮಾಹಿತಿ ನೀಡಿದರೆ ಸಮೀಕ್ಷೆಯ ಫಲಿತಾಂಶಗಳು ವೈಜ್ಞಾನಿಕವಾಗಿರುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸಮೀಕ್ಷೆ ಆರಂಭವಾಗುವ ಮುನ್ನವೇ, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ 60 ಪ್ರಶ್ನೆಗಳ ನಮೂನೆಯನ್ನು ತಲುಪಿಸಿ, ಸಮೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ನಂತರ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆ. ಪ್ರತಿ ಶಿಕ್ಷಕರಿಗೆ 120 ರಿಂದ 150 ಮನೆಗಳ ಜವಾಬ್ದಾರಿಯನ್ನು ನೀಡಲಾಗಿದೆ.
ಸಹಾಯವಾಣಿ ಮತ್ತು ಆನ್‌ಲೈನ್ ಅವಕಾಶ
ಸಮೀಕ್ಷೆಗೆ ಸಂಬಂಧಿಸಿದ ಯಾವುದೇ ಗೊಂದಲ, ದೂರು ಅಥವಾ ಮಾಹಿತಿ ಪಡೆಯಲು ಸಾರ್ವಜನಿಕರು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಬಹುದು. ಜೊತೆಗೆ, ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡುವ ಕಾರ್ಯವನ್ನೂ ಈ ಸಮೀಕ್ಷೆ ವೇಳೆ ಮಾಡಲಾಗುತ್ತದೆ.
ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇರುವ ಪ್ರಕರಣಗಳನ್ನು ಆಯೋಗದ ತಜ್ಞರ ತಂಡವು ವಿಶ್ಲೇಷಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾಗಿದ್ದ ತಾಂತ್ರಿಕ ಮತ್ತು ಕಾರ್ಯತಂತ್ರದ ಸಮಸ್ಯೆಗಳನ್ನು ನಿವಾರಿಸಿಕೊಂಡು, ಸಮರ್ಪಕವಾಗಿ ಈ ಸಮೀಕ್ಷೆಯನ್ನು ನಡೆಸುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ. ಈ ಸಮೀಕ್ಷೆಯು ರಾಜ್ಯದ ಸಾಮಾಜಿಕ ನೀತಿಗಳನ್ನು ರೂಪಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ನೇಪಾಳ: ಯಾವ ಮಾರ್ಗ ಆರಿಸಿಕೊಳ್ಳಬೇಕು ಎಂಬ ಜಂಜಾಟ: ರಾಜತಂತ್ರವೋ, ಪ್ರಜಾತಂತ್ರವೋ….


