ನೇಪಾಳದಲ್ಲಿ ಯುವ ಜನರ ಹಿಂಸಾತ್ಮಕ ಹೋರಾಟದ ಪರಿಣಾಮ ಕೆ.ಪಿ ಶರ್ಮಾ ಓಲಿ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ, ಸುಶೀಲಾ ಕರ್ಕಿ ಶುಕ್ರವಾರ (ಸೆ.12) ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸರ್ಕಾರವನ್ನು ಮುನ್ನಡೆಸಲಿದ್ದಾರೆ.
ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ರಾಷ್ಟ್ರಪತಿ ಕಚೇರಿಯಾದ ಶೀತಲ್ ನಿವಾಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕರ್ಕಿ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದಾರೆ.
ಆರು ತಿಂಗಳೊಳಗೆ ಚುನಾವಣೆ ನಡೆಸಿ ಹೊಸ ಸರ್ಕಾರ ರಚನೆ ಮಾಡುವ ಜವಾಬ್ದಾರಿ ಈಗ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಹೆಗಲಿಗೆ ಬಿದ್ದಿದೆ.
ಭಾರತದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಹಳೆಯ ವಿದ್ಯಾರ್ಥಿಯಾಗಿರುವ ಕರ್ಕಿ, ಅಧ್ಯಕ್ಷ ಪೌಡೆಲ್, ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಮತ್ತು ‘ಜೆನ್ ಝೀ’ ಎಂದು ಕರೆಯಲ್ಪಡುವ ಯುವ ಪ್ರತಿಭಟನಾಕಾರರ ಪ್ರತಿನಿಧಿಗಳ ಸಮಾಲೋಚನೆಯ ನಂತರ ಅಂತಿಮವಾಗಿ ಆಯ್ಕೆಯಾದ ಮೊದಲು ನಾಲ್ವರು ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು.
ನೇಪಾಳ ವಿದ್ಯುತ್ ಪ್ರಾಧಿಕಾರದ ಮಾಜಿ ಮುಖ್ಯಸ್ಥ ಕುಲ್ಮನ್ ಘಿಸಿಂಗ್, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಮತ್ತು ಧರಣ್ ಮೇಯರ್ ಹರ್ಕಾ ಸಂಪಂಗ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದ ಇತರ ನಾಯಕರು.
ನೇಪಾಳದಲ್ಲಿ ಆರಂಭದಲ್ಲಿ, ಸರ್ಕಾರದ ಸಾಮಾಜಿಕ ಮಾಧ್ಯಮ ನಿಷೇಧ ಆದೇಶದ ವಿರುದ್ದ ಭುಗಿಲೆದ್ದ ಯುವಜನರ ಪ್ರತಿಭಟನೆ ಬಳಿಕ ಹಿಂಸಾತ್ಮಕ ರೂಪ ಪಡೆದಿತ್ತು. ‘ಜೆನ್ ಝೀ’ ಯುವಜನರು, ವಿದ್ಯಾರ್ಥಿಗಳು ಸಂಸತ್ ಭವನ, ಪ್ರಧಾನಿ ಮತ್ತು ಸಚಿವರ ಮನೆಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದ್ದರು.
ಕೆಲ ಸಚಿವರನ್ನು ಪ್ರತಿಭಟನಾಕಾರರು ಅಟ್ಟಾಡಿಸಿ ಥಳಿಸಿದ್ದರು. ಈ ನಡುವೆ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟ ಪ್ರಧಾನಿ ಕೆ.ಪಿ ಶರ್ಮಾ ಓಲಿ, ದೇಶ ಬಿಟ್ಟು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.
ಯುವಜನರ ಪ್ರತಿಭಟನೆ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ದ ಪ್ರಾರಂಭಗೊಂಡರೂ, ಬಳಿಕ ಅದು ಪಡೆದುಕೊಂಡ ಸ್ವರೂಪ ರಾಜಕಾರಣಿಗಳ ಮಿತಿ ಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸೇರಿದಂತೆ ಜನ ವಿರೋಧಿ ನಡೆಗಳ ವಿರುದ್ದ ಆಕ್ರೋಶದ ಕಟ್ಟೆ ಒಡೆದಿರುವುದಾಗಿ ಎಂದು ವರದಿಗಳು ಹೇಳಿವೆ.
ನಾಲ್ಕೈದು ದಿನಗಳ ಹಿಂಸಾತ್ಮಕ ಪ್ರತಿಭಟನೆಯಿಂದ ನೇಪಾಳದಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಸುಮಾರು 20ರಷ್ಟು ಜನರು ಸಾವಿಗೀಡಾಗಿದ್ದಾರೆ. ದೇಶವನ್ನು ಹೊಸದಾಗಿ ಕಟ್ಟುವ ಜವಾಬ್ದಾರಿ ಮಧ್ಯಂತರ ಸರ್ಕಾರ ಮೇಲಿದೆ.
ಪ್ರಸ್ತುತ ಪ್ರತಿಭಟನೆಗಳು ಕಡಿಮೆಯಾಗಿವೆ. ಪರಿಸ್ಥಿತಿಯ ಸೇನೆಯ ನಿಯಂತ್ರಣಕ್ಕೆ ಬಂದಿದೆ.
ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಯಾರು?
ಜುಲೈ 2016ರಲ್ಲಿ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮೂಲಕ ಸುಶೀಲಾ ಕರ್ಕಿ ಅವರು ಇತಿಹಾಸ ನಿರ್ಮಿಸಿದ್ದರು. ಆದಾಗ್ಯೂ, ಜನಪ್ರತಿನಿಧಿಗಳು ಪಕ್ಷಪಾತದ ತೀರ್ಪುಗಳನ್ನು ನೀಡಿದ್ದಾರೆ ಮತ್ತು ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿ ಪದಚ್ಯುತಿ ನಿರ್ಣಯ ಮಂಡಿಸಿದ ನಂತರ ಅವರ ಅಧಿಕಾರಾವಧಿಯು ಒಂದು ವರ್ಷದೊಳಗೆ ಕೊನೆಗೊಂಡಿತ್ತು.
ನೇಪಾಳ ಸುಪ್ರೀಂ ಕೋರ್ಟ್ ಪೊಲೀಸ್ ಮುಖ್ಯಸ್ಥರ ನೇಮಕಾತಿಗಳ ಕುರಿತ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ನಂತರ ಕರ್ಕಿ ಅವರನ್ನು ನ್ಯಾಯಮೂರ್ತಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಹಿರಿತನವನ್ನು ಅನ್ಯಾಯವಾಗಿ ನಿರ್ಲಕ್ಷಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ತನಿಖೆ ಬಾಕಿ ಇರುವಾಗಲೇ ಕರ್ಕಿ ಅವರನ್ನು ಅಮಾನತುಗೊಳಿಸಲಾಗಿದ್ದರೂ, ಜೂನ್ 2017ರಲ್ಲಿ ಅವರ ನಿವೃತ್ತಿಗೆ ಮೊದಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ಸಾಧ್ಯವಾಗದೆ ಪದಚ್ಯುತಿ ನಿರ್ಣಯ ವಿಫಲಗೊಂಡಿತ್ತು.
ಜೂನ್ 7,1952 ರಂದು ಬಿರಾಟ್‌ನಗರದಲ್ಲಿ ಜನಿಸಿದ ಸುಶೀಲಾ ಕರ್ಕಿ, 1975 ರಲ್ಲಿ ಬಿಎಚ್‌ಯುನಲ್ಲಿ ರಾಜಕೀಯ ವಿಜ್ಞಾನವನ್ನು ಮತ್ತು 1978ರಲ್ಲಿ ತ್ರಿಭುವನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. ಮುಖ್ಯ ನ್ಯಾಯಾಧೀಶರಾಗುವ ಮೊದಲು, ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶೆ, ಹಿರಿಯ ವಕೀಲೆ ಮತ್ತು ಕಾನೂನು ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದರು. ಲಿಂಗ ಸಮಾನತೆಯ ಕುರಿತು ಲೇಖಕಿಯೂ ಆಗಿದ್ದ ಸುಶೀಲಾ ಕರ್ಕಿ, ಮಾನವ ಹಕ್ಕುಗಳು ಮತ್ತು ಮಹಿಳಾ ನ್ಯಾಯಾಂಗ ಸಂಸ್ಥೆಗಳಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು.
ನೇಪಾಳದಲ್ಲಿ ಜೈಲು ಘರ್ಷಣೆ: 15,000ಕ್ಕೂ ಹೆಚ್ಚು ಕೈದಿಗಳ ಪರಾರಿ, ಮೂವರು ಸಾವು


