ಜನಾಂಗೀಯ ಸಂಘರ್ಷ ಭುಗಿಲೆದ್ದ ಬಳಿಕ ಮೊದಲ ಬಾರಿಗೆ ಶನಿವಾರ (ಸೆ.13) ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿದ್ದು, ಇಂಫಾಲ್ ಮತ್ತು ಚುರಚಂದಪುರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇದಕ್ಕೂ ಮೊದಲು, ಸಂಘರ್ಷದ ಪರಿಣಾಮ ಆಂತರಿಕವಾಗಿ ಸ್ಥಳಾಂತರಗೊಂಡ ಮೈತೇಯಿ ಮತ್ತು ಕುಕಿ-ಝೋ ಬುಡಕಟ್ಟು ಸಮುದಾಯಗಳ ಜನರನ್ನು (ಐಡಿಪಿಗಳು) ಪ್ರಧಾನಿ ಭೇಟಿಯಾಗಿದ್ದಾರೆ. ಈ ವೇಳೆ ಅವರು ನಡೆಸಿರುವ ಚರ್ಚೆಯ ಕುರಿತು ಎರಡೂ ಸಮುದಾಯಗಳ ಜನರನ್ನು ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಿರಾಶ್ರಿತರಿಗೆ ಪ್ರಧಾನಿ ಜೊತೆ ಇಂತಿಷ್ಟೇ ಮಾತನಾಡಬೇಕು ಮತ್ತು ನಿರ್ದಿಷ್ಟ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಬೇಕು ಎಂಬ ಒಂದು ಮಿತಿಯನ್ನು ನಿಗದಿಪಡಿಸಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಚುರಚಂದಪುರದ ಕೆಲವು ಸ್ಥಳೀಯರು, ಕೇಂದ್ರಾಡಳಿತ ಪ್ರದೇಶ ರಚನೆಯ ಮೂಲಕ ‘ಪ್ರತ್ಯೇಕ ಆಡಳಿತ’ದ ನಮ್ಮ ಬೇಡಿಕೆಯನ್ನು ಮುಂದಿಡಲು ಸಾಧ್ಯವಾಗಿಲ್ಲ” ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
“ಪ್ರತ್ಯೇಕ ಆಡಳಿತದ ಬಗ್ಗೆ ಪ್ರಧಾನಿಯೊಂದಿಗೆ ಏನನ್ನೂ ಕೇಳಬಾರದು ಎಂದು ನಮಗೆ ಸೂಚಿಸಲಾಗಿತ್ತು. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಇತ್ಯಾದಿ ವಿಷಯಗಳ ಬಗ್ಗೆ ಮಾತ್ರ ಮಾತನಾಡಲು ಅನುಮತಿ ನೀಡಲಾಗಿತ್ತು” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಚುರಚಂದಪುರದ ನಿವಾಸಿಯೊಬ್ಬರು ಹೇಳಿದ್ದಾಗಿ ವರದಿ ವಿವರಿಸಿದೆ.
ಪ್ರಧಾನಿ ಮೋದಿ ಹಿಂದಿಯಲ್ಲಿ ಮಾತನಾಡಿದ ಬಗ್ಗೆಯೂ ಸ್ಥಳೀಯರ ಒಂದು ಗುಂಪು ಅಸಮಾಧಾನ ವ್ಯಕ್ತಪಡಿಸಿದೆ.
“ಅವರು ಮಿಜೋರಾಂನಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದರು. ಆದರೆ, ಚುರಚಂದಪುರದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಈ ಬಗ್ಗೆ ನಮಗೆ ಅಸಮಾಧಾನವಿದೆ. ಅವರು ನಮ್ಮ ಸಮಸ್ಯೆಗಳನ್ನು ಪರಿಹರಿಸಿಲ್ಲ. ಅಭಿವೃದ್ಧಿ ಪ್ಯಾಕೇಜ್ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದು ಹೆಸರು ಬಹಿರಂಗಪಡಿಸಲು ಬಯಸದ ಮತ್ತೊಬ್ಬರು ಸ್ಥಳೀಯರು ಹೇಳಿದ್ದಾರೆ.
ಇದು ಒಬ್ಬ ವ್ಯಕ್ತಿಯ ಭಾವನೆಯಲ್ಲ, ಬದಲಾಗಿ ಸಾರ್ವಜನಿಕ ಭಾವನೆ ಎಂದು ಆ ಸ್ಥಳೀಯ ತಿಳಿಸಿದ್ದಾರೆ.
“ಸಂಘರ್ಷವನ್ನು ಪರಿಹರಿಸುವ ಯಾವುದೇ ಯೋಜನೆಗಳ ಬಗ್ಗೆ ಪ್ರಧಾನಿ ಮಾತನಾಡಿಲ್ಲ. ಸರ್ಕಾರಕ್ಕೆ ಯೋಜನೆಗಳಿದ್ದರೆ, ಅವರೇ ಏನಾದರೂ ಹೇಳಬೇಕೆಂದು ನಾವೆಲ್ಲರೂ ಬಯಸುತ್ತಿದ್ದೆವು. ಅಲ್ಲದೆ, ಭಾಷಣವೂ ಸಂಕ್ಷಿಪ್ತವಾಗಿತ್ತು. ಆದರೆ, ಪ್ರತಿಕೂಲ ಹವಾಮಾನದ ಹೊರತಾಗಿಯೂ ಅವರು ಬಂದಿದ್ದಕ್ಕೆ ನಮಗೆ ಸಂತೋಷವಾಗಿದೆ” ಎಂದು ಮತ್ತೊಬ್ಬರು ಸ್ಥಳೀಯ ಮುಂಗ್ ಹಂಘಲ್ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.
ಇಂಫಾಲದಲ್ಲಿ ಪ್ರಧಾನಿ ಮೋದಿ ಜನರನ್ನು ಉದ್ದೇಶಿಸಿ ಮಾತನಾಡುವ ಮೊದಲು ನಿರಾಶ್ರಿತರನ್ನು ಭೇಟಿಯಾದಾಗ, ಅವರಲ್ಲಿ ಕೆಲವರು ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿಯ ಮಾತುಗಳಿಂದ ಸ್ಥಳೀಯರು ತೃಪ್ತರಾಗಿಲ್ಲ ಎಂದು ವರದಿ ಹೇಳಿದೆ.
ಚುರಚಂದಪುರದಂತೆಯೇ, ಇಂಫಾಲದ ಜನರೂ ಕೂಡ ಪ್ರಧಾನಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆಂದು ನಿರೀಕ್ಷಿಸಿದ್ದರು. “ಪ್ರಧಾನಿಯ ಭಾಷಣ ಚೆನ್ನಾಗಿತ್ತು, ಆದರೆ ನನಗೆ ಖಚಿತವಿಲ್ಲ. ಪರಿಹಾರದ ಹಾದಿ ನಮಗೆ ತಿಳಿದಿಲ್ಲ” ಎಂದು ಇಂಫಾಲದ ಸ್ಥಳೀಯ ಸೂರಜ್‌ಕುಮಾರ್ ಸಿಂಗ್ ಹೇಳಿದ್ದಾರೆ.
“ಪ್ರಧಾನಿ ಭೇಟಿಯಿಂದ ಕೆಲವು ಅಭಿವೃದ್ಧಿ ಯೋಜನೆಗಳು ಘೋಷಣೆಯಾಗಿವೆ. ಆದರೆ, ಪರಿಹಾರ ಶಿಬಿರಗಳಲ್ಲಿ ಇನ್ನೂ ನರಳುತ್ತಿರುವ ಸ್ಥಳಾಂತರಗೊಂಡ ಮೈತೇಯಿ ಕುಟುಂಬಗಳಿಗೆ ಅದು ದೊಡ್ಡ ಭರವಸೆ ನೀಡಿಲ್ಲ. ಪುನರ್ವಸತಿ ಬಗ್ಗೆ ಸ್ಪಷ್ಟತೆಯನ್ನು ನಾವು ನಿರೀಕ್ಷಿಸಿದ್ದೆವು. ಜನರು ಯಾವಾಗ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ, ಅವರ ಸುರಕ್ಷತೆಯನ್ನು ಹೇಗೆ ಖಚಿತಪಡಿಸಿಕೊಳ್ಳಲಾಗುತ್ತದೆ ಮತ್ತು ಯಾವ ಪುನರ್ವಸತಿ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ?”ಎಂದು ಇಂಫಾಲದ ನಿವಾಸಿ ಲೀಶಾಂಗ್ಥೆಮ್ ಪ್ರಿಯೊ ಪ್ರಶ್ನಿಸಿದ್ದಾರೆ.
Courtesy :newindianexpress.com
ಮೋದಿ ಮಣಿಪುರ ಭೇಟಿ ದೊಡ್ಡ ವಿಷಯವೇನಲ್ಲ, ‘ಮತಗಳ್ಳತನ’ ಈಗ ದೇಶದ ಮುಂದಿರುವ ಪ್ರಮುಖ ಚರ್ಚೆ: ರಾಹುಲ್ ಗಾಂಧಿ


