ಕೃಷಿ ಕಾಯ್ದೆಗಳನ್ನು ವಿರೋಧಿಸಿ 2021ರಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯೊಬ್ಬರು ಭಾಗವಹಿಸಿದ್ದರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ದ ದಾಖಲಾಗಿರುವ ಮಾನಹಾನಿ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
“ನಿಮ್ಮ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವು ಮಸಾಲೆ ಸೇರಿಸಿದ್ದೀರಿ, ಇದು ಸರಳವಾದ ಮರುಟ್ವೀಟ್ ಆಗಿರಲಿಲ್ಲ” ಎಂದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಇಂತಹ ವಿಚಾರಗಳ ಕುರಿತು ವಿಚಾರಣಾ ನ್ಯಾಯಾಲಯವೇ ತೀರ್ಮಾನ ತೆಗೆದುಕೊಳ್ಳಬೇಕು ತಾನಲ್ಲ” ಎಂದಿದೆ.
ಪಂಜಾಬ್‌ನ ಭಟಿಂಡಾ ಜಿಲ್ಲೆಯ 73 ವರ್ಷದ ಮಹಿಂದರ್ ಕೌರ್ ಅವರು ಕಂಗನಾ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಂಗನಾ ಅವರು, 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ “ಶಾಹೀನ್ ಬಾಗ್ ದಾದಿ ಬಿಲ್ಕಿಸ್” ಎಂದು ತಪ್ಪಾಗಿ ಗುರುತಿಸುವ ಮೂಲಕ ಟ್ವೀಟ್‌ನಲ್ಲಿ ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಪ್ರಭಾವಿ ಅಜ್ಜಿ ಎಂದು ಟೈಮ್ ಮ್ಯಾಗಝಿನ್‌ನಲ್ಲಿ ಪ್ರಸಿದ್ಧರಾಗಿದ್ದವರು ಈಗ 100 ರೂಪಾಯಿಗೆ ಸಿಗುತ್ತಿದ್ದಾರೆ. ಭಾರತದ ಅಂತಾರಾಷ್ಟ್ರೀಯ ಸಾರ್ವಜನಿಕ ರಾಯಭಾರಿಯನ್ನು (ಅಜ್ಜಿ) ಪಾಕಿಸ್ತಾನದ ಪತ್ರಕರ್ತರು ಮುಜುಗರ ಉಂಟುಮಾಡುವ ರೀತಿಯಲ್ಲಿ ಅಪಹರಿಸಿದ್ದಾರೆ. ಅಂತಾರಾಷ್ಟ್ರೀಯವಾಗಿ ನಮ್ಮ ಪರ ಮಾತನಾಡಲು ನಮ್ಮದೇ ಜನರು ಬೇಕು” ಎಂದು ಅವರು ಕಂಗನಾ ಟ್ವೀಟ್ ಮಾಡಿದ್ದರು.
ನ್ಯಾಯಾಲಯಕ್ಕೆ ಹಾಜರಾಗಿದ್ದ ಕಂಗನಾ ಪರ ವಕೀಲ, “ಅವರು (ಕಂಗನಾ) ಇನ್ನೊಬ್ಬರು ವ್ಯಕ್ತಿಯ ಪೋಸ್ಟ್ ಅನ್ನು ಮರುಟ್ವೀಟ್ ಮಾತ್ರ ಮಾಡಿದ್ದಾರೆ. ಮೂಲ ಟ್ವೀಟ್ ಮಾಡಿದ ವ್ಯಕ್ತಿಗೆ ಸಮನ್ಸ್ ನೀಡಲಾಗಿಲ್ಲ” ಎಂದು ವಾದಿಸಿದ್ದಾರೆ.
ಅಲ್ಲದೆ, ಕಂಗನಾ ಮಾತನಾಡಿದ್ದು ಮಹಿಂದರ್ ಕೌರ್ ಅವರ ಬಗ್ಗೆ ಅಲ್ಲ, ಬದಲಿಗೆ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನು ಎಂಬವರ ಬಗ್ಗೆ. ಈ ಕುರಿತು ಕಂಗನಾ ಸ್ಪಷ್ಟೀಕರಣ ನೀಡಿದ್ದು ಅದನ್ನು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಆದರೆ, ಇದರಿಂದ ತೃಪ್ತವಾಗದ ನ್ಯಾಯಾಲಯ ರಣಾವತ್ ಅವರ ಟ್ವೀಟ್‌ಗಳ ಬಗ್ಗೆ ಪ್ರತಿಕ್ರಿಯಿಸಲು ಇಚ್ಛಿಸಲಿಲ್ಲ.
“ಸಾಕ್ಷ್ಯ ಸ್ವೀಕಾರಾರ್ಹವಲ್ಲದ ಕಾರಣ ದೂರನ್ನು (ವಿಚಾರಣಾ ನ್ಯಾಯಾಲಯ) ವಜಾಗೊಳಿಸಬಹುದು. ನಿಮ್ಮ ಟ್ವೀಟ್ ಬಗ್ಗೆ ಹೇಳಿಕೆ ನೀಡುವಂತೆ ನಮ್ಮನ್ನು ಕೇಳಬೇಡಿ. ಇದು ನಿಮ್ಮ ವಿಚಾರಣೆಗೆ ಅಡ್ಡಿಪಡಿಸಬಹುದು. ನೀವು ಅರ್ಜಿ ಹಿಂತೆಗೆದುಕೊಳ್ಳಿ. ಹಿಂತೆಗೆದುಕೊಳ್ಳಲು ಬಯಸುತ್ತೀರಾ? ” ಎಂದು ನ್ಯಾಯಾಲಯ ಕೇಳಿದೆ. ಆ ನಂತರ ಕಂಗನಾ ಪರ ವಕೀಲರು ಅರ್ಜಿ ಹಿಂಪಡೆಯಲು ನಿರ್ಧರಿಸಿದರು. ಹಾಗಾಗಿ, ನ್ಯಾಯಾಲಯ ಕೂಡ ಅರ್ಜಿಯನ್ನು ವಜಾಗೊಳಿಸಿತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಪ್ರಕರಣ ಸಂಬಂಧ ಫೆಬ್ರವರಿ 2022ರಲ್ಲಿ ಭಟಿಂಡಾ ಮ್ಯಾಜಿಸ್ಟ್ರೇಟ್ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಕಂಗನಾ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿತ್ತು.
‘ಸಂಘರ್ಷ ಶಮನಕ್ಕೆ ಯಾವುದೇ ಪರಿಹಾರ ತಿಳಿಸಿಲ್ಲ’: ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ


