ಗುಜರಾತ್‌ನ ಬೊಟಾಡ್ ಜಿಲ್ಲೆಯಲ್ಲಿ 17 ವರ್ಷದ ಆರ್ಯನ್ ಮಖಿಯಾಲಾ ಎಂಬ ಬಾಲಕನಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಕೊಟ್ಟು, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ವಡ್ಗಾಮ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಸೆಪ್ಟೆಂಬರ್ 15ರ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಥವಾ ಸಿಬಿಐಗೆ ವಹಿಸಬೇಕೆಂದು ಜಿಗ್ನೇಶ್ ಮೇವಾನಿ ಕೋರಿದ್ದಾರೆ.
ಮಾನವ ಹಕ್ಕು ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಈ ಪ್ರಕರಣದಲ್ಲಿ, ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಿಸಲಾಗಿದೆ. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಜಿಗ್ನೇಶ್ ಮೇವಾನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಇದಕ್ಕೂ ಮೊದಲು, ಸಂಚಾಲಕ ಮುಜಾಹಿದ್ ನಫೀಸ್ ನೇತೃತ್ವದ ಅಲ್ಪಸಂಖ್ಯಾತ ಸಮನ್ವಯ ಸಮಿತಿ (ಎಂಸಿಸಿ) ಸೆಪ್ಟೆಂಬರ್ 5ರಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು, ಸಂತ್ರಸ್ತ ಬಾಲಕನಿಗೆ ಪರಿಹಾರ ನೀಡಬೇಕು ಮತ್ತು ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿತ್ತು.
ದೂರು ಮತ್ತು ಸಾಂಸ್ಥಿಕ ಮುಚ್ಚಿಹಾಕುವಿಕೆಯ ಆರೋಪಗಳಿಗೆ ಸಂಬಂಧಿಸಿದಂತೆ ಶನಿವಾರ ಬೋಟಾಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೋಟಾಡ್ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಬೋಟಾಡ್ ಉಪ ಪೊಲೀಸ್ ವರಿಷ್ಠಾಧಿಕಾರಿ ಚಿಂತನ್ ಜೆ. ಟೆರೈಯಾ ಹೇಳಿದ್ದಾರೆ.
“ಬೋಟಾಡ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಪೊಲೀಸರು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ನಾವು ಭಾವಿಸುತ್ತೇವೆ. ಸರ್ಕಾರ ನಡೆಸುವ ತನಿಖೆಯ ಆಧಾರದ ಮೇಲೆ ನಮ್ಮ ಮುಂದಿನ ನಡೆ ಇರುತ್ತದೆ” ಎಂದು ಎಂಸಿಸಿ ಸಂಚಾಲಕ ಮುಜಾಹಿದ್ ನಫೀಸ್ ತಿಳಿಸಿದ್ದಾರೆ.
ಸಿಜೆಐ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಸುಪ್ರೀಂ ಕೋರ್ಟ್ ಪೀಠದ ಮುಂದೆ ವಕೀಲ ರೋಹಿನ್ ಭಟ್ ರಿಟ್ ಅರ್ಜಿಯನ್ನು ಪ್ರಸ್ತಾಪಿಸಿದ್ದಾರೆ. ಸಂತ್ರಸ್ತ ಬಾಲಕನ ಸಹೋದರಿಯ ಪರವಾಗಿ ಸಂವಿಧಾನದ ವಿಧಿ 32ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.
“ಇದು ವಿಧಿ 32ರ ಅಡಿ ಸಲ್ಲಿಸಲಾದ ಅರ್ಜಿಯಾಗಿದೆ. ಅರ್ಜಿದಾರರ ಅಪ್ರಾಪ್ತ ಸಹೋದರನನ್ನು ಪೊಲೀಸರು ಎಳೆದೊಯ್ದು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತನ ಗುದದ್ವಾರಕ್ಕೆ ಕೋಲುಗಳನ್ನು ತುರುಕಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ. ಹಾಗಾಗಿ, ದೆಹಲಿ ಏಮ್ಸ್‌ನಿಂದ ತುರ್ತು ವೈದ್ಯಕೀಯ ಮಂಡಳಿ ರಚನೆಗಾಗಿ ನಾವು ಮನವಿ ಮಾಡುತ್ತೇವೆ” ಎಂದು ಅರ್ಜಿದಾರರ ಪರ ವಕೀಲ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಪ್ರಸ್ತಾಪಿಸುವಾಗ ಹೇಳಿದ್ದಾರೆ.
ವರದಿಗಳ ಪ್ರಕಾರ, ಸಂತ್ರಸ್ತ ಬಾಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಬಂದವರು ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು, ಆತನಿಂದ ಕಾಗದದ ಮೇಲೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾರೆ. ಅಲ್ಲದೆ, ಸೈಕಲ್‌ನಿಂದ ಬಿದ್ದು ಗಾಯಗಳಾಗಿವೆ ಎಂದು ಹೇಳುವ ಕಾಗದಗಳಿಗೆ ಸಹಿ ಹಾಕುವಂತೆ ಬಾಲಕನ ಕುಟುಂಬದ ಮೇಲೆ ಒತ್ತಡ ಹೇರಿದ್ದಾರೆ ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿದೆ.
ವಕೀಲರಾದ ರೋಹಿನ್ ಭಟ್ ಮತ್ತು ಪಣಿಷ್ಠ ಭಟ್ ರಚಿಸಿದ ಮತ್ತು ವಕೀಲ ಪರಸ್ ನಾಥ್ ಸಿಂಗ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಎನ್‌ಎಸ್, ಪೋಕ್ಸೊ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು, ಗುಜರಾತ್‌ನಿಂದ ಹೊರಗೆ ಎಸ್‌ಐಟಿ, ಸಿಬಿಐ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪರ್ಯಾಯ ತಂಡದ ಮೂಲಕ ತನಿಖೆ ನಡೆಸಬೇಕು, ಬೋಟಾಡ್ ಪೊಲೀಸ್ ಠಾಣೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಮತ್ತು ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ಕೋರಲಾಗಿದೆ.
ಬಾಲಕನ ದೇಹದಲ್ಲಿ ಆದ ಆಂತರಿಕ ಮತ್ತು ಬಾಹ್ಯ ಗಾಯಗಳ ಬಗ್ಗೆ ನಿರ್ಣಯಿಸಲು ದೆಹಲಿ ಏಮ್ಸ್‌ನಲ್ಲಿ ವೈದ್ಯಕೀಯ ತಂಡವನ್ನು ರಚಿಸಬೇಕು, ಸಂತ್ರಸ್ತನಿಗೆ ಆರ್ಥಿಕ ನೆರವು, ಆಪ್ತ ಸಮಾಲೋಚನೆ ಒದಗಿಸಬೇಕು. ಆತನ ಕುಟುಂಬಕ್ಕೆ ಪರಿಹಾರ ಕೊಡಬೇಕು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಬೇಕು ಮತ್ತು ಸಂತ್ರಸ್ತನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ರೈತ ವಿರೋಧಿ ಟ್ವೀಟ್: ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಸುಪ್ರೀಂ ಕೋರ್ಟ್ ತರಾಟೆ; ಪ್ರಕರಣ ರದ್ದತಿಗೆ ನಕಾರ


