ಮಾದಕವಸ್ತು ಮಾರಾಟಗಾರರ ಗುಂಪಿನೊಂದಿಗೆ ಶಾಮೀಲಾಗಿರುವ ಆರೋಪದ ಮೇಲೆ ಇನ್‌ಸ್ಪೆಕ್ಟರ್ ಸೇರಿದಂತೆ ಬೆಂಗಳೂರಿನ ಹನ್ನೊಂದು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಚಾಮರಾಜಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ ಮಂಜಣ್ಣ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಮೇಶ್ ಮತ್ತು ಶಿವರಾಜ್, ಕಾನ್‌ಸ್ಟೆಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ ಮತ್ತು ಆನಂದ್, ಜೆಜೆ ನಗರ ಪೊಲೀಸ್ ಸಿಬ್ಬಂದಿಯಾದ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಕುಮಾರ್, ಹೆಡ್ ಕಾನ್‌ಸ್ಟೆಬಲ್ ಆನಂದ್, ಕಾನ್‌ಸ್ಟೆಬಲ್ ಬಸವನಗೌಡ ಮತ್ತು ಕಾನ್‌ಸ್ಟೆಬಲ್ ಮಹೇಶ್ ಕುಮಾರ್ ಅಮಾನತುಗೊಂಡವರು.
ಆಗಸ್ಟ್ 22ರಂದು ಆರ್.ಆರ್ ನಗರ ಪೊಲೀಸರು ಸಲ್ಮಾನ್, ನಯಾಝುಲ್ಲಗ್ ಖಾನ್, ನಯಾಝ್ ಖಾನ್ ಮತ್ತು ತಾಹೆರ್ ಪಟೇಲ್ ಸೇರಿದಂತೆ ಆರು ಮಂದಿ ಮಾದಕವಸ್ತು ಮಾರಾಟಗಾರರನ್ನು ಬಂಧಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಪ್ರಿಸ್ಕ್ರಿಪ್ಷನ್ ಮೂಲಕ ನೀಡಲಾಗುವ ಟೈಡಾಲ್ ಮಾತ್ರೆಗಳನ್ನು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ಮಾದಕ ದ್ರವ್ಯವಾಗಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಸುಮಾರು 1,000 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
“ನಮಗೆ ಆಶ್ಚರ್ಯವಾಗುವಂತೆ, ಸಲ್ಮಾನ್ ಮಾದಕ ವಸ್ತು ಮಾರಾಟಕ್ಕೆ ಪೊಲೀಸರ ಬೆಂಬಲವಿದೆ ಎಂದು ಹೇಳಿಕೊಂಡಿದ್ದ. ಆರಂಭದಲ್ಲಿ ಆತ ನಮ್ಮನ್ನು ದಾರಿ ತಪ್ಪಿಸಲು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆಂದು ನಾವು ಭಾವಿಸಿದ್ದೆವು. ಆದಾಗ್ಯೂ, ಸಲ್ಮಾನ್ ಮತ್ತು ಆತನ ಸಹಚರರ ಮೊಬೈಲ್ ಫೋನ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರು ಚಾಮರಾಜಪೇಟೆ ಮತ್ತು ಜೆಜೆ ನಗರದ ಪೊಲೀಸ್ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆಂದು ತಿಳಿದುಬಂದಿದೆ. ಪೊಲೀಸರಿಗೆ ಕಾರ್ಯನಿರ್ವಹಿಸಲು ಅವರ ಅಧಿಕಾರ ವ್ಯಾಪ್ತಿ ಇರುವಂತೆ, ಸಲ್ಮಾನ್ ಮತ್ತು ಅವನ ಗ್ಯಾಂಗ್ ಚಾಮರಾಜಪೇಟೆ ಮತ್ತು ಜೆಜೆ ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಆರೋಪಿ ಪೊಲೀಸರಿಗೆ ಮಾದಕವಸ್ತು ಮಾರಾಟಗಾರರ ಚಲನವಲನಗಳು, ಮಾದಕ ದ್ರವ್ಯಗಳನ್ನು ಮಾರಾಟ ಮಾಡುವ ಸ್ಥಳಗಳು ಇತ್ಯಾದಿ ತಿಳಿದಿತ್ತು” ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್. ಗಿರೀಶ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಂಧಿತ ಮಾದಕವಸ್ತು ವ್ಯಾಪಾರಿಗಳು ಸುಗಮವಾಗಿ ತಮ್ಮ ಕೆಲಸ ಮಾಡಲು ಪ್ರತಿ ತಿಂಗಳು 2 ಲಕ್ಷ ರೂ.ಗಳವರೆಗೆ ಹಣವನ್ನು ಪೊಲೀಸರಿಗೆ ಪಾವತಿಸುತ್ತಿದ್ದರು. ಕೆಲ ಪೊಲೀಸ್ ಸಿಬ್ಬಂದಿ ವ್ಯಾಪಾರಿಗಳೊಂದಿಗೆ ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ಕೆಂಗೇರಿ ಗೇಟ್‌ನ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಭರತ್ ರೆಡ್ಡಿ ಅವರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಸ್. ಗಿರೀಶ್ ಅವರಿಗೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ನಂತರ ತನಿಖೆಯನ್ನು ವಿಜಯನಗರ ಎಸಿಪಿ ಚಂದನ್ ಅವರಿಗೆ ಹಸ್ತಾಂತರಿಸಲಾಗಿದೆ. ವಿಚಾರಣೆಯಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು ಮಾದಕವಸ್ತು ಕಳ್ಳಸಾಗಣೆದಾರರನ್ನು ರಕ್ಷಿಸುವಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಇನ್‌ಸ್ಪೆಕ್ಟರ್ ಮಂಜಣ್ಣ ಅವರನ್ನು ಅಮಾನತುಗೊಳಿಸಿದರೆ, ಇತರ ಸಿಬ್ಬಂದಿಯನ್ನು ಡಿಸಿಪಿ ಗಿರೀಶ್ ಅಮಾನತುಗೊಳಿಸಿದ್ದಾರೆ.
ಮಾದಕ ವಸ್ತುಗಳ ಜಾಲಗಳನ್ನು ಹತ್ತಿಕ್ಕುವ ಬಗ್ಗೆ ಧ್ವನಿ ಎತ್ತುತ್ತಿದ್ದ ನಗರ ಪೊಲೀಸರಿಗೆ ಈ ಪ್ರಕರಣ ಮುಜುಗರ ತಂದಿದೆ. ನಿಷೇಧಿತ ಮಾತ್ರೆಗಳು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಬರದ ಕಾರಣ, ಅಂತಹ ಪ್ರಕರಣಗಳ ವಿಚಾರಣೆ ಇನ್ನೂ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ, ವೈದ್ಯಕೀಯ ವ್ಯವಸ್ಥೆಗಳ ದುರ್ಬಳಕೆಗೆ ಸಂಬಂಧಪಟ್ಟ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 278ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಕರ್ನಾಟಕ ಸರ್ಕಾರ ರಾಜ್ಯವನ್ನು ಮಾದಕವಸ್ತು ಮುಕ್ತಗೊಳಿಸಲು ಪ್ರತಿಜ್ಞೆ ಮಾಡುತ್ತಿರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯೇ ಮಾದಕವಸ್ತು ಜಾಲದ ಜೊತೆ ಶಾಮೀಲಾಗಿ ಅಮಾನತುಗೊಂಡಿರುವುದು ವಿಪರ್ಯಾಸ.
ಹಾಸನ ಅಪಘಾತ: ಘಟನೆಗೆ ಕೋಮು ಬಣ್ಣ ಬಳಿಯುವವರ ಮೇಲೆ ಕಾನೂನು ಕ್ರಮ; ಸಚಿವ ಕೃಷ್ಣ ಬೈರೇಗೌಡ


