ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಗಳವಾರ (ಸೆಪ್ಟೆಂಬರ್ 16) ಎರಡು ಮಾಧ್ಯಮ ಸಂಸ್ಥೆಗಳು ಮತ್ತು ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅದಾನಿ ಸಮೂಹವನ್ನು ಉಲ್ಲೇಖಿಸುವ ಒಟ್ಟು 138 ವಿಡಿಯೋಗಳು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.
ಅದಾನಿ ಎಂಟರ್‌ಪ್ರೈಸಸ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾಯುವ್ಯ ದೆಹಲಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 6ರಂದು ಹೊರಡಿಸಿದ ಏಕಪಕ್ಷೀಯ ಆದೇಶವನ್ನು ಆಧರಿಸಿ ಈ ನಿರ್ದೇಶನ ನೀಡಲಾಗಿದೆ ಎಂದು ಮಂಗಳವಾರ ಬರೆದ ಪತ್ರದಲ್ಲಿ ಸಚಿವಾಲಯ ತಿಳಿಸಿರುವುದಾಗಿ ದಿ ವೈರ್ ವರದಿ ಮಾಡಿದೆ.
ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್ ಬಗ್ಗೆ ಮಾನನಷ್ಟಕರ ವಿಷಯಗಳನ್ನು ಪ್ರಕಟಿಸದಂತೆ ಪತ್ರಕರ್ತರಾದ ಪರಂಜೋಯ್ ಗುಹಾ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತು ವೆಬ್‌ಸೈಟ್‌ಗಳಾದ ಪರಂಜೋಯ್ ಡಾಟ್ ಇನ್, ಅದಾನಿ ವಾಚ್ ಡಾಟ್ ಓಆರ್‌ಜಿ, ಮತ್ತು ಅದಾನಿ ಫೈಲ್ಸ್ ಡಾಟ್ ಕಾಮ್ ಡಾಟ್ ಎಯುಗೆ ಸೆಪ್ಟೆಂಬರ್ 6ರಂದು ನ್ಯಾಯಾಲಯ ನಿರ್ಬಂಧ ವಿಧಿಸಿದೆ ಎಂದು ಲೈವ್‌ಲಾ ವರದಿ ಮಾಡಿತ್ತು.
ದೆಹಲಿಯ ರೋಹಿಣಿ ನ್ಯಾಯಾಲಯದ ವಿಶೇಷ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಅದಾನಿ ಎಂಟರ್‌ಪ್ರೈಸಸ್ ಪರವಾಗಿ ತಡೆಯಾಜ್ಞೆ ಹೊರಡಿಸಿದ್ದು, ಪ್ರತಿವಾದಿಗಳು ತಮ್ಮ ಲೇಖನಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ವಿಷಯವನ್ನು ತೆಗೆದುಹಾಕುವಂತೆ ನಿರ್ದೇಶಿಸಿದ್ದಾರೆ ಎಂದಿತ್ತು.
ಈ ಪ್ರಕರಣದಲ್ಲಿ ನ್ಯಾಯಾಲಯ ಏಕಪಕ್ಷೀಯ ಆದೇಶ ಹೊರಡಿಸಿದೆ. ಒಂದು ಪ್ರಕರಣದಲ್ಲಿ ಪ್ರತಿವಾದಿಗಳ ವಾದವನ್ನು ಆಲಿಸದೆ ಹೊರಡಿಸುವ ಆದೇಶವನ್ನು ಏಕಪಕ್ಷೀಯ ಆದೇಶ ಎನ್ನಲಾಗುತ್ತದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಪತ್ರಕರ್ತರು ಮತ್ತು ಹೋರಾಟಗಾರರ ವಾದಗಳನ್ನು ಆಲಿಸಿಲ್ಲ.
ಗಮನಾರ್ಹವಾಗಿ, ಮಂಗಳವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೋಟಿಸ್ ಪಡೆದವರು ಈ ಪ್ರಕರಣದಲ್ಲಿ ಕಕ್ಷಿದಾರರಲ್ಲ ಎಂದು ವೈರ್ ಹೇಳಿದೆ.
ಅದಾನಿ ಗ್ರೂಪ್ ವಿರುದ್ಧ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಮಾಡಿರುವ ಆರೋಪಗಳನ್ನು ಉಲ್ಲೇಖಿಸುವ ಒಂದೇ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಾಗಿ ದಿ ವೈರ್‌ಗೆ ಮಂಗಳವಾರ ನೋಟಿಸ್ ನೀಡಲಾಗಿದೆ, ಇದು ದಾಖಲೆಯ ವಿಷಯವಾಗಿದೆ ಎಂದು ವರದಿ ತಿಳಿಸಿದೆ.
ಅದಾನಿ ಕುರಿತ ಲೇಖನಗಳು ಮತ್ತು ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ನ್ಯೂಸ್ ಲಾಂಡ್ರಿ, ರವೀಶ್ ಕುಮಾರ್, ಅಜಿತ್ ಅಂಜುಮ್, ಧ್ರುವ್ ರಾಠಿ, ಆಕಾಶ್ ಬ್ಯಾನರ್ಜಿ ಅಕಾ ದೇಶಭಕ್ತ್ ಮತ್ತು ಇತರಿಗೂ ಸಚಿವಾಲಯ ನೋಟಿಸ್ ನೀಡಿದೆ.
ತೆಗೆದು ಹಾಕಲು ಉಲ್ಲೇಖಿಸಿದ ಹಲವಾರು ವಿಡಿಯೋಗಳು ಯಾವುದೇ ಹೊಸ ವರದಿ ಅಥವಾ ಅಭಿಪ್ರಾಯವನ್ನು ಒಳಗೊಂಡಿರಲಿಲ್ಲ. ಉದಾಹರಣೆಗೆ, ಪಟ್ಟಿ ಮಾಡಲಾದ ನ್ಯೂಸ್‌ಲಾಂಡ್ರಿ ವಿಡಿಯೋಗಳಲ್ಲಿ ಒಂದು ಚಂದಾದಾರಿಕೆ ಮನವಿಯಾಗಿದ್ದು ಅದು ಅದಾನಿ ಗುಂಪಿನ ಬಗೆಗಿನ ಲೇಖನದ ಸ್ಕ್ರೀನ್‌ಶಾಟ್ ಅನ್ನು ಮಾತ್ರ ಒಳಗೊಂಡಿದೆ ಎಂದು ವೈರ್ ಹೇಳಿದೆ.
ನ್ಯಾಯಾಲಯದ ಆದೇಶದ ಪ್ರಕಾರ ನಿಗದಿತ ಸಮಯದೊಳಗೆ ಕ್ರಮ ಕೈಗೊಳ್ಳಲು ಮಾಧ್ಯಮ ಸಂಸ್ಥೆಗಳು ವಿಫಲವಾಗಿವೆ ಎಂದು ಸಚಿವಾಲಯದ ಪತ್ರದಲ್ಲಿ ಉಲ್ಲೇಖಿಸಿದೆ.
“ಹಾಗಾಗಿ, ಮೇಲೆ ತಿಳಿಸಲಾದ ಆದೇಶದ ಅನುಸರಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಈ ನೋಟಿಸ್ ತಲುಪಿದ 36 ಗಂಟೆಗಳ ಒಳಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವಾಲಯಕ್ಕೆ ತಿಳಿಸಲು ನಿಮಗೆ ನಿರ್ದೇಶಿಸಲಾಗಿದೆ” ಎಂದು ಹೇಳಲಾಗಿದೆ.
ನೋಟಿಸ್‌ನಲ್ಲಿ ಮೆಟಾ ಪ್ಲಾಟ್‌ಫಾರ್ಮ್ಸ್ ಮತ್ತು ಗೂಗಲ್ ಸಂಸ್ಥೆಯನ್ನೂ ಗುರುತಿಸಲಾಗಿದೆ ಎಂದು ದಿ ವೈರ್ ತಿಳಿಸಿದೆ.
ನ್ಯಾಯಾಧೀಶರು ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸದ ಕಾರಣ ಸೆಪ್ಟೆಂಬರ್ 6ರ ಆದೇಶವನ್ನು ಪ್ರಶ್ನಿಸಲಾಗಿತ್ತು. ಆ ಸಮಯದಲ್ಲಿ, ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು, ಪ್ರಕರಣವು ಏಕಪಕ್ಷೀಯ ಆದೇಶ ನೀಡಲು ಸೂಕ್ತವಾಗಿದೆ ಎಂದು ನಾನು ಪರಿಶೀಲಿಸಿದ್ದೇನೆ. ಆದಾಗ್ಯೂ, ‘ನ್ಯಾಯಯುತ, ಪರಿಶೀಲಿಸಿದ ಮತ್ತು ಸಮರ್ಥನೀಯ ವರದಿ ಮಾಡುವಿಕೆಯಿಂದ ಮತ್ತು ಅಂತಹ ಲೇಖನಗಳು, ಪೋಸ್ಟ್‌ಗಳು ಅಥವಾ ವೆಬ್‌ಪುಟ ಲಿಂಕ್‌ಗಳನ್ನು ಹೋಸ್ಟ್ ಮಾಡುವುದು, ಸಂಗ್ರಹಿಸುವುದು ಅಥವಾ ಪ್ರಸಾರ ಮಾಡುವುದರಿಂದ ಪ್ರತಿವಾದಿಗಳನ್ನು ನಿರ್ಬಂಧಿಸುವ ಸಂಪೂರ್ಣ ಆದೇಶವನ್ನು ತಾನು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸಚಿವಾಲಯದ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಪತ್ರಕರ್ತ ಪರಂಜೋಯ್ ಗುಹಾ ಠಾಕೂರ್ತಾ, ಅದಾನಿ ಸಮೂಹ ತನ್ನ ವಿರುದ್ಧ ಹೂಡಿರುವ ಏಳು ಮಾನನಷ್ಟ ಮೊಕದ್ದಮೆಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ ಎಂದು ದಿ ವೈರ್ ಹೇಳಿದೆ.
“ನನಗೆ ಭಾರತದ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾನು ಬರೆದಿರುವ ಅಥವಾ ಸಹ-ಲೇಖಕನಾಗಿರುವ ಎಲ್ಲಾ ಲೇಖನಗಳು ಮತ್ತು ನಾನು ನೀಡಿರುವ ಎಲ್ಲಾ ಹೇಳಿಕೆಗಳು ಸತ್ಯ, ನಿಖರ ಮಾತ್ರವಲ್ಲದೆ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿವೆ ಎಂಬ ವಿಶ್ವಾಸ ನನಗಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ನನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗಳನ್ನು ನಾನು ತೀವ್ರವಾಗಿ ವಿರೋಧಿಸಲು ಉದ್ದೇಶಿಸಿದ್ದೇನೆ ಮತ್ತು ಸಾಧ್ಯವಾದಷ್ಟು ಬೇಗ ನ್ಯಾಯಾಲಯದ ಮುಂದೆ ನನ್ನ ವಾದಗಳನ್ನು ಮಂಡಿಸುತ್ತೇನೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದೇ ಮನೆಯಲ್ಲಿ 4271 ಮತದಾರರು!..ಮಹದೇವಪುರ ಬಳಿಕ ಮತ್ತೊಂದು ಭಾರೀ ಮತಗಳ್ಳತನ ಆರೋಪ


