ಸೆಪ್ಟೆಂಬರ್ 9ರಂದು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪ್ರಾಂತ್ಯದ ಓಲ್ಡ್‌ಬರಿ ಟೇಮ್ ರಸ್ತೆ ಬಳಿ ‘ಜನಾಂಗೀಯ ಪ್ರೇರಿತ ದಾಳಿ’ಯಲ್ಲಿ ಸಿಖ್ ಯುವತಿ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
20 ವರ್ಷದ ಯುವತಿ ಮೇಲೆ ಇಬ್ಬರು ಬಿಳಿಯ ಪುರುಷರು ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, “ನೀನು ಇಲ್ಲಿಗೆ ಸೇರಿದವಲಲ್ಲ, ಹೊರಟು ಹೋಗು” ಎಂಬುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಘಟನೆ ಖಂಡಿಸಿ ಸಿಖ್ ಸಮುದಾಯದ ಜನರು ಪ್ರತಿಭಟನೆ ನಡೆಸಿದ ನಂತರ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದುಷ್ಕೃತ್ಯ ಖಂಡಿಸಿ ಹಲವಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ, ಸಾಮಾಜಿಕ ಮಾಧ್ಯಮಗಳಲ್ಲಿ ನೂರಾರು ಜನರು ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಪರವಾಗಿ ದಕ್ಷಿಣ ಏಷ್ಯಾದ 40 ಕಪ್ಪುವರ್ಣ, ವಲಸಿಗ, ನಿರಾಶ್ರಿತರ ಮತ್ತು ಜನಾಂಗೀಯ ವಿರೋಧಿ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿವೆ.
ತಮ್ಮ ಹೇಳಿಕೆಯಲ್ಲಿ ಸಂಘಟನೆಗಳು, ಭಯಾನಕ ಲೈಂಗಿಕ ಮತ್ತು ಜನಾಂಗೀಯ ದೌರ್ಜನ್ಯವನ್ನು ಹೇಳಿಕೊಳ್ಳಲು ಮುಂದೆ ಬಂದ ಸಂತ್ರಸ್ತೆಯ ಧೈರ್ಯವನ್ನು ಶ್ಲಾಘಿಸಿವೆ. “ನಾವು ಸಂತ್ರಸ್ತೆಯ ಜೊತೆ ಬಲವಾದ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ ಮತ್ತು ಬೇಷರತ್ತಾಗಿ ಆಕೆಯ ಬೆಂಬಲಕ್ಕೆ ನಿಲ್ಲುತ್ತೇವೆ” ಎಂದು ಹೇಳಿವೆ.
ಸಿಖ್ ವುಮೆನ್ ಏಡ್, ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್, ಮಿಲಿಯನ್ ವುಮೆನ್ ರೈಸ್ ಮೂವ್‌ಮೆಂಟ್, ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಯುಕೆ, ಬರ್ಮಿಂಗ್‌ಹ್ಯಾಮ್ ಬ್ಲ್ಯಾಕ್ ಸಿಸ್ಟರ್ಸ್, ಇಂಡಿಯನ್ ವರ್ಕರ್ಸ್ ಅಸೋಸಿಯೇಷನ್ (ಜಿಬಿ), ವುಮೆನ್ ಅಸಿಲಮ್ ಸೀಕರ್ಸ್, ರೆಫ್ಯೂಜೀಸ್ ಅಂಡ್ ಮೈಗ್ರಂಟ್ಸ್ (ವಾರ್ಮ್), ಯುಕೆ ಇಂಡಿಯನ್ ಮುಸ್ಲಿಂ ಕೌನ್ಸಿಲ್ (ಯುಕೆ-ಐಎಂಸಿ), ಕ್ಯಾಸ್ಟ್‌ವಾಚ್ ಯುಕೆ, ಇಂಡಿಯಾ ಲೇಬರ್ ಸಾಲಿಡಾರಿಟಿ (ಐಎಲ್ಎಸ್), ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಯುಕೆ, ಮುಸ್ಲಿಂ ಸೋಶಿಯಲ್ ಜಸ್ಟೀಸ್ ಇನಿಶಿಯೇಟಿವ್ ಮತ್ತು ಸ್ಟ್ರೈವ್ ಯುಕೆ ಸೇರಿದಂತೆ ಇತರ ಸಂಘಟನೆಗಳು ಸಂತ್ರಸ್ತೆಯ ಪರ ಹೇಳಿಕೆಗೆ ಸಹಿ ಹಾಕಿವೆ ಎಂದು ವರದಿಗಳು ಹೇಳಿವೆ.
ಸಂತ್ರಸ್ತ ಯುವತಿ ಸಿಖ್ ಫೆಡರೇಶನ್ (ಯುಕೆ) ಮೂಲಕ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಸ್ಥಳೀಯ ಸಮುದಾಯ ತನಗೆ ತೋರಿಸಿದ ಪ್ರೀತಿಗೆ ನಿಜವಾಗಿಯೂ ವಿನಮ್ರಳಲಾಗಿದ್ದೇನೆ” ಎಂದು ಹೇಳಿರುವುದಾಗಿ ವರದಿಗಳು ವಿವರಿಸಿವೆ.
ಬಿಳಿಯರ ಪ್ರಾಬಲ್ಯವಾದಿ ಅಭಿಯಾನಗಳಿಗೆ ಹೆಸರುವಾಸಿಯಾದ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ಸಾವಿರಾರು ಬಲಪಂಥೀಯರು ಲಂಡನ್‌ನ ಬೀದಿಗಳಲ್ಲಿ ಇಸ್ಲಾಮೋಫೋಬಿಕ್, ವಲಸಿಗ ವಿರೋಧಿ ಮತ್ತು ಜನಾಂಗೀಯ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದ ಅದೇ ದಿನ ಓಲ್ಡ್‌ಬರಿ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಪರ ಹೇಳಿಕೆಗೆ ಸಹಿ ಹಾಕಿದವರು, ಬಲಪಂಥೀಯ ಅಭಿಯಾನಗಳು ಜನಾಂಗೀಯ ಅಲ್ಪಸಂಖ್ಯಾತರು, ವಲಸಿಗರು ಮತ್ತು ನಿರಾಶ್ರಿತರ ವಿರುದ್ದ ದೌರ್ಜನ್ಯವನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿವೆ. ಈ ವಾತಾವರಣವು ಜನಾಂಗೀಯ ಪ್ರೇರಿತ ಅತ್ಯಾಚಾರ ಸೇರಿದಂತೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿವೆ.
ಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ


