Homeಅಂತರಾಷ್ಟ್ರೀಯಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ

ಗಾಝಾ ನಗರದಲ್ಲಿ ಆಕ್ರಮಣ ವಿಸ್ತರಿಸಿದ ಇಸ್ರೇಲ್: ಅಸಹಾಯಕ ನಾಗರಿಕರಿಂದ ಮಹಾ ಪಲಾಯನ

- Advertisement -
- Advertisement -

ಜಾಗತಿಕ ಆಕ್ರೋಶದ ನಡುವೆಯೂ ಮಂಗಳವಾರದಿಂದ (ಸೆ.16) ಇಸ್ರೇಲ್ ತನ್ನ ನೆಲದ ಆಕ್ರಮಣವನ್ನು ( Ground Assault) ಗಾಝಾ ಪಟ್ಟಿಯ ಗಾಝಾ ನಗರದಲ್ಲಿ ವಿಸ್ತರಿಸಿದೆ. ಅಮಾಯಕ ನಾಗರಿಕರು ತಮ್ಮದೆಲ್ಲವನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಮಹಾ ಪಲಾಯನ ಹೊರಟಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಹೇಳಿಕೊಂಡಂತೆ ಗಾಝಾ ನಗರದ ಹೊರವಲಯದಿಂದ ಇಸ್ರೇಲ್ ತನ್ನ ಆಕ್ರಮಣ ಪ್ರಾರಂಭಿಸಿದೆ. ಅಲ್ಲಿ ಇಸ್ರೇಲ್ ಸೇನೆಯು ಕಳೆದ ಕೆಲ ದಿನಗಳಿಂದ ವೈಮಾನಿಕ ದಾಳಿ ಮೂಲಕ ಎತ್ತರದ ಗೋಪುರಗಳ ನಾಶವನ್ನು ಚುರುಕುಗೊಳಿಸಿತ್ತು.

“ಗಾಝಾ ಹೊತ್ತಿ ಉರಿಯುತ್ತಿದೆ” ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) “ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ. ಹಮಾಸ್ ಅನ್ನು ಸೋಲಿಸಿ ಒತ್ತೆಯಾಳುಗಳ ಬಿಡುಗಡೆಗೆ ಶ್ರಮಿಸುತ್ತಿವೆ” ಎಂದಿದ್ದಾರೆ.

ಗಾಝಾ ನಗರದ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಯುದ್ಧದ ‘ನಿರ್ಣಾಯಕ ಹಂತದಲ್ಲಿದೆ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದು, ಈಗ ದಾಳಿ ಶುರು ಮಾಡಿರುವ ಪ್ರದೇಶ ಹಮಾಸ್‌ನ ಕೊನೆಯ ಭದ್ರಕೋಟೆಗಳಲ್ಲಿ ಒಂದೆಂದು ಸರ್ಕಾರ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ಹೊಸದಾಗಿ ಶುರು ಮಾಡಿರುವ ಆಕ್ರಮಣ, ಈಗಾಗಲೇ ಹದೆಗೆಟ್ಟಿರುವ ಗಾಝಾದ ಪರಿಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸಲಿದೆ ಎಂದು ವಿಶ್ವಸಂಸ್ಥೆ ಸೇರಿದಂತೆ ಇನ್ನಿತರ ಮಾನವ ಹಕ್ಕು ಸಂಸ್ಥೆಗಳು ಎಚ್ಚರಿಸಿವೆ.

“ಸಾವಿರಾರು ಜನರನ್ನು ಬಾಂಬ್ ಮತ್ತು ಬಂದೂಕು ತೋರಿಸಿ ಹೆದರಿಸುವ ಮೂಲಕ ಅವರ ಸ್ವಂತ ಊರುಗಳಿಂದ ಓಡಿಸಲಾಗುತ್ತಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಇದು ‘ಭಯಾನಕವಾದುದು’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಮಂಗಳವಾರ ಇಸ್ರೇಲ್ ಸೇನಾ ಅಧಿಕಾರಿಯೊಬ್ಬರು ಅಂದಾಜು 350,000 ಜನರು ಗಾಝಾ ನಗರದಿಂದ ಪಲಾಯನ ಮಾಡಿದ್ದಾರೆ ಎಂದಿದ್ದಾರೆ. ಆದರೆ, ಗಾಝಾದ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ, 350,000 ಜನರು ನಗರದ ಮಧ್ಯಭಾಗ ಮತ್ತು ಪಶ್ಚಿಮಕ್ಕೆ ಸ್ಥಳಾಂತರಗೊಂಡಿದ್ದಾರೆ, 190,000 ಜನರು ಸಂಪೂರ್ಣವಾಗಿ ಗಾಝಾ ನಗರ ತೊರೆದಿದ್ದಾರೆ ಎಂದು ವರದಿಯಾಗಿದೆ.

ಜನರು ಪಲಾಯನ ಮಾಡುತ್ತಿದ್ದಂತೆ, ಇಸ್ರೇಲ್ ಸೇನೆಯು ವೈಮಾನಿಕ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುದ್ಧ ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಸಜ್ಜಿತ ವಾಹನಗಳು ಗಾಝಾ ನಗರದೊಳಗೆ ನುಗ್ಗುತ್ತಿರುವುದನ್ನು ನೋಡಬಹುದು.

ಸಂಪೂರ್ಣ ಗಾಝಾ ನಗರವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ‘ಹಲವಾರು ತಿಂಗಳುಗಳು’ ಬೇಕಾಗುತ್ತದೆ ಎಂದು ಇಸ್ರೇಲಿ ಸೇನೆ ಮಂಗಳವಾರ ಒಪ್ಪಿಕೊಂಡಿದೆ. “ಎಷ್ಟೇ ಸಮಯ ತೆಗೆದುಕೊಂಡರೂ ಪರವಾಗಿಲ್ಲ, ನಾವು ಗಾಝಾದಲ್ಲಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಇಸ್ರೇಲ್ ಸೇನಾ ವಕ್ತಾರ ಎಫೀ ಡೆಫ್ರಿನ್ ಹೇಳಿದ್ದಾರೆ.

“ಗಾಝಾ ಪಟ್ಟಿಯ ಕೆಲವು ಭಾಗಗಳನ್ನು ಅಧಿಕೃತವಾಗಿ ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಸುಮಾರು ಒಂದು ಮಿಲಿಯನ್ ಜನರು (ಈ ಪ್ರದೇಶದ ಜನಸಂಖ್ಯೆಯ ಅರ್ಧದಷ್ಟು) ಗಾಝಾ ನಗರ ಮತ್ತು ಸುತ್ತಮುತ್ತ ವಾಸಿಸುತ್ತಿದ್ದಾರೆ. ಇಸ್ರೇಲ್ ಸ್ಥಳೀಯ ಜನರನ್ನು ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಲು ಪ್ರಯತ್ನಿಸುತ್ತಿದೆ. ಆದರೆ, ಐಡಿಎಫ್ ಹೇಳುವಂತೆ ಇಲ್ಲಿಯವರೆಗೆ ಕೇವಲ 40% ಜನರು ಮಾತ್ರ ಹೊರಟು ಹೋಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿಯಿಲ್ಲ” ಎಂದು ಸುದ್ದಿ ಸಂಸ್ಥೆ ಸಿಎನ್‌ಎನ್‌ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಖಂಡನೆ ಮತ್ತು ತಮ್ಮದೇ ಆದ ಭದ್ರತಾ ಅಧಿಕಾರಿಗಳ ಕಳವಳಗಳ ಹೊರತಾಗಿಯೂ, ಕಾರ್ಯಾಚರಣೆಯನ್ನು ಮುಂದುವರಿಸುವ ನೆತನ್ಯಾಹು ಅವರ ನಿರ್ಧಾರವು, ಜಾಗತಿಕ ಒತ್ತಡವನ್ನು ಧಿಕ್ಕರಿಸಿ ತಮ್ಮ ಷರತ್ತುಗಳ ಮೇಲೆ ಯುದ್ಧವನ್ನು ಮುಂದುವರಿಸುವ ಅವರ ಇಚ್ಛೆಯನ್ನು ಒತ್ತಿಹೇಳುತ್ತದೆ ಎಂದು ವರದಿ ವಿವರಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ನಿಯೋಜಿಸಿದ ಸ್ವತಂತ್ರ ತಜ್ಞರ ತಂಡವು ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿದ್ದು, ಮಂಗಳವಾರ (ಸೆ.16) ಈ ಕುರಿತು ವರದಿ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಸಮುದಾಯವು ನರಮೇಧವನ್ನು ಕೊನೆಗೊಳಿಸಬೇಕು ಮತ್ತು ಅದಕ್ಕೆ ಕಾರಣರಾದವರನ್ನು ಶಿಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಈ “ವಿಕೃತ ಮತ್ತು ಸುಳ್ಳು ವರದಿಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ” ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ. ವಿಶ್ವಸಂಸ್ಥೆ ತಜ್ಞರ ತಂಡವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದೆ.

2023ರಲ್ಲಿ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದ ಬಳಿಕ ಗಾಝಾ ಪಟ್ಟಿಯ ರಫಾ ಮತ್ತು ಖಾನ್ ಯೂನಿಸ್‌ ನಗರಗಳು ಸಂಪೂರ್ಣ ನಾಶವಾಗಿವೆ. ಆದರೆ, ಅತಿದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರವಾದ ಗಾಝಾ ನಗರದ ಮೇಲೆ ದೊಡ್ಡ ಪ್ರಮಾಣದ ಹಾನಿ ಆಗಿರಲಿಲ್ಲ. ಇದೀಗ ಇಸ್ರೇಲ್‌ ಗಾಝಾ ನಗರದಲ್ಲೂಆಕ್ರಮಣ ವಿಸ್ತರಿಸಿರುವ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಅಮಾಯಕ ನಾಗರಿಕರಿಗೆ ದಿಕ್ಕೇ ತೋಚದಂತಾಗಿದೆ ಎಂದು ವರದಿಗಳು ಹೇಳಿವೆ.

ಮಂಗಳವಾರ, ಉತ್ತರ ಗಾಝಾವೊಂದರಲ್ಲೇ ಕನಿಷ್ಠ 93 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆಗೈದಿದೆ. ಗಾಝಾದ ಆರೋಗ್ಯ ಸಚಿವಾಲಯ ಮತ್ತು ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಸಂಪೂರ್ಣ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರು ಮಂಗಳವಾರ ಸಾವನ್ನಪ್ಪಿದ್ದಾರೆ.

ಮಂಗಳವಾರ ರಾತ್ರಿಯಿಡೀ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ತತ್ತರಿಸಿದ ಗಾಝಾ ನಗರ ನಿವಾಸಿಗಳು, ಅಳಿದುಳಿದ ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪಲಾಯನ ಹೊರಟಿದ್ದಾರೆ ಎಂದು ಸಿಎನ್‌ಎನ್‌ ತನ್ನ ವರದಿಯಲ್ಲಿ ವಿವರಿಸಿದೆ.

ಗಾಝಾ ನಗರದ ಶೇಖ್ ರಾದ್ವಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್‌ ದಾಳಿಯಿಂದ ಕೆಲ ಮನೆಗಳು ಭಾಗಶಃ ಇನ್ನು ಕೆಲವು ಸಂಪೂರ್ಣ ನಾಶವಾಗಿವೆ. ಜನರು ತಮ್ಮ ಚೀಲ, ಕಂಬಳಿಗಳನ್ನು ಹೊತ್ತುಕೊಂಡು ಆಶ್ರಯ ಹುಡುಕುತ್ತಾ ಕಟ್ಟಡಗಳ ಅವಶೇಷಗಳ ನಡುವೆ ದಕ್ಷಿಣದತ್ತ ಸಾಗುತ್ತಿರುವ ದೃಶ್ಯಾವಳಿಗಳನ್ನು ಸಿಎನ್ಎನ್ ತೋರಿಸಿದೆ.

ಇಸ್ರೇಲಿ ಡ್ರೋನ್‌ಗಳು ಜನರ ತಲೆಮೇಲೆ ಹಾರಾಡುತ್ತಿವೆ. ಮಂಗಳವಾರ ರಾತ್ರಿಯ ದಾಳಿ ಇದುವರೆಗೆ ಕಂಡ ಅತ್ಯಂತ ಭೀಕರ ದಾಳಿಗಳಲ್ಲಿ ಒಂದು ಎಂದು ಗಾಝಾ ನಗರದ ಸ್ಥಳೀಯರು ಹೇಳಿದ್ದಾರೆ ಎಂದು ಸಿಎನ್‌ಎನ್‌ ವರದಿ ವಿವರಿಸಿದೆ.

ಆಗಸ್ಟ್ ಆರಂಭದಲ್ಲಿ ಇಸ್ರೇಲ್‌ನ ಭದ್ರತಾ ಸಂಪುಟ ಅನುಮೋದಿಸಿದ ಕಾರ್ಯಾಚರಣೆಯ ಯೋಜನೆಯ ಪ್ರಕಾರ, ಇಸ್ರೇಲ್ ಪ್ಯಾಲೆಸ್ತೀನ್ ಜನರನ್ನು ಅಲ್-ಮವಾಸಿ ಪ್ರದೇಶಕ್ಕೆ ಸ್ಥಳಾಂತರಿಸಿದ ನಂತರವೇ ಗಾಝಾ ನಗರದ ಮೇಲಿನ ದಾಳಿ ಪ್ರಾರಂಭವಾಗಬೇಕಿತ್ತು. ಆದರೆ, ಜನರು ಸ್ಥಳಾಂತರಕ್ಕೆ ನಿರಾಕರಿಸಿದ್ದಾರೆ. ಇಸ್ರೇಲ್ ಜರನ್ನು ಸ್ಥಳಾಂತರಿಸದೆ ದಾಳಿ ಶುರು ಮಾಡಿದೆ.

ಅಲ್ಲದೆ, ಅಮೆರಿಕ ಬೆಂಬಲಿತ ವಿವಾದಾತ್ಮಕ ‘ಗಾಝಾ ಹ್ಯುಮಾನಿಟೇರಿಯನ್ ಫೌಂಡೇಶನ್ (ಜಿಎಚ್‌ಎಫ್‌) ನಡೆಸುತ್ತಿರುವ ನೆರವು ಸೌಲಭ್ಯಗಳ ಸಂಖ್ಯೆಯನ್ನು ಇಸ್ರೇಲ್ ಒಟ್ಟು 16 ತಾಣಗಳಿಗೆ ವಿಸ್ತರಿಸಬೇಕಿತ್ತು. ಆದರೆ ಈಗ ಕೇವಲ ಐದು ಸ್ಥಳಗಳಲ್ಲಿ ಮಾತ್ರ ನೆರವು ಕೇಂದ್ರಗಳು ತೆರೆದಿವೆ. ಈ ಮೂಲಕ ಪ್ಯಾಲೆಸ್ತೀನಿಯರು ತೀರಾ ಅಗತ್ಯವಿರುವ ಆಹಾರ ಮತ್ತು ಸಹಾಯವನ್ನು ಪಡೆಯಲು ಗಂಟೆಗಟ್ಟಲೆ ನಡೆಯುವಂತೆ ಮಾಡಿದೆ.

ಮಧ್ಯ ಮತ್ತು ಉತ್ತರ ಗಾಝಾದಾದ್ಯಂತ, ಪ್ಯಾಲೆಸ್ತೀನಿಯರು ತಮ್ಮ ಕೈಲಾದಷ್ಟು ವಸ್ತುಗಳನ್ನು ತುಂಬಿಕೊಂಡು ಸುರಕ್ಷಿತ ಸ್ಥಳಕ್ಕಾಗಿ ಹತಾಶ ಹುಡುಕಾಟದಲ್ಲಿ ಪಲಾಯನ ಮಾಡುತ್ತಿದ್ದಾರೆ. ಇದು ಅನೇಕರಿಗೆ ಮೊದಲ ಸ್ಥಳಾಂತರವಲ್ಲ. ಜನರು ಆಸರೆ ಹುಡುಕಿಕೊಂಡು ದಕ್ಷಿಣಕ್ಕೆ ಹೊರಟ ಹಿನ್ನೆಲೆ ಅಲ್-ರಶೀದ್ ಸ್ಟ್ರೀಟ್ ಕರಾವಳಿ ಹೆದ್ದಾರಿಯು ಮಂಗಳವಾರ ಜನಸಂದಣಿಯಿಂದ ತುಂಬಿತ್ತು ಎಂದು ಸಿಎನ್‌ಎನ್‌ ವರದಿ ಹೇಳಿದೆ.

ಪ್ಯಾಲೆಸ್ತೀನ್ ಪ್ರಾಧಿಕಾರ (ಪಿಎ) ಜಾಗತಿಕ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿದೆ. ಅಮೆರಿಕ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ. “ಇಡೀ ಜಗತ್ತು ಆಕ್ರಮಣದ ವಿಸ್ತರಣೆಯನ್ನು ತಿರಸ್ಕರಿಸಿದೆ. ಇದು ಮಾನವೀಯತೆಯ ವಿರುದ್ಧದ ಯುದ್ಧ ಅಪರಾಧವೆಂದು ಪರಿಗಣಿಸಿದೆ. ಇಸ್ರೇಲ್‌ನ ವಿಸ್ತರಿತ ಆಕ್ರಮಣ ಗಾಝಾ ನಗರ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆ ಮತ್ತು ಅಸ್ಥಿರತೆಗೆ ಕಾರಣವಾಗುತ್ತದೆ” ಎಂದು ಪಿಎ ಅಧ್ಯಕ್ಷರ ವಕ್ತಾರ ನಬಿಲ್ ಅಬು ರುಡೈನೆಹ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಮಾಸ್ ಗಾಝಾ ನಗರದ ಮೇಲಿನ ದಾಳಿಯನ್ನು ‘ಅನಾಗರಿಕ ಝಿಯೋನಿಷ್ಟ್ ಆಕ್ರಮಣ’ ಎಂದು ಕರೆದಿದೆ. ಈ ಮೂಲಕ ಇಸ್ರೇಲ್ “ಎಲ್ಲಾ ರೀತಿಯ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ” ಎಂದಿದೆ.

ಎರಡು ವರ್ಷಗಳ ನಿರಂತರ ಆಕ್ರಮಣದ ಮೂಲಕ ಇಸ್ರೇಲ್ ಕನಿಷ್ಠ 64,964 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ಅಲ್‌-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದ ವಿಶ್ವಸಂಸ್ಥೆಯ ವರದಿ: ಜಾಗತಿಕ ಕ್ರಮಕ್ಕೆ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...