ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ‘ಜಿರಳೆ ಜನತಾ ಪಕ್ಷ’ (ಸಿಜೆಪಿ) ಸೋಮವಾರ ಗಂಭೀರ ಆರೋಪ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಪ್ರತಿಭಟನೆಯ ಸಮಯದಲ್ಲಿ ಆಂಗ್ಮೋ ಅವರ ಮೇಲೆ ಪೊಲೀಸ್ ಸಿಬ್ಬಂದಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಹಾಗೂ ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಕೂದಲು ಎಳೆದು ಹಲ್ಲೆ: ಕನಿಷ್ಠ 40-50 ಜನರ ತಲೆಗೆ ಗಾಯ!
ಪೊಲೀಸರ ಬಲಪ್ರಯೋಗವನ್ನು ತೀವ್ರವಾಗಿ ಖಂಡಿಸಿರುವ ಸೌರವ್ ದಾಸ್, “ಗೀತಾಂಜಲಿ ಜಿ ಅವರ ಕೂದಲನ್ನು ದೆಹಲಿ ಪೊಲೀಸರು ಎಳೆದಿದ್ದಾರೆ ಮತ್ತು ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಬಂದಿದೆ. ಅಷ್ಟೇ ಅಲ್ಲದೆ, ಇತರ 40 ರಿಂದ 50 ಪ್ರತಿಭಟನಾಕಾರರ ತಲೆಗಳು ಒಡೆದು ಗಾಯಗೊಂಡಿವೆ! ದೆಹಲಿ ಪೊಲೀಸರು ಅಲ್ಲಿ ನಿಜಕ್ಕೂ ಏನು ಮಾಡುತ್ತಿದ್ದಾರೆ!?” ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ಮೇಲೆ ತೀವ್ರ ದಾಳಿ ನಡೆಸುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ದೆಹಲಿ ಪೊಲೀಸರ ಈ ವಿಕೃತ ನಡವಳಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೆರವಣಿಗೆಯ ಸಂದರ್ಭದಲ್ಲಿ ಸಂಸತ್ತಿನ ಕಡೆಗೆ ಮುನ್ನುಗ್ಗುತ್ತಿದ್ದ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದಾಸ್ ತಿಳಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ‘X’ ಪೋಸ್ಟ್‌ನಲ್ಲಿ ದಾಸ್, “ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ! ಬೀದಿಗಳಲ್ಲಿ ಹಕ್ಕೊತ್ತಾಯಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವಂತೆ ನಾವು ದೇಶದ ಎಲ್ಲಾ ಸಂಸದರಲ್ಲಿ ಮನವಿ ಮಾಡುತ್ತೇವೆ. ಪೊಲೀಸರು ಪ್ರತಿಭಟನಾಕಾರರನ್ನು ಅತ್ಯಂತ ಕ್ರೂರವಾಗಿ ಕೆಡವಿ ಹೊಡೆಯುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜೆ.ಪಿ. ನಡ್ಡಾ ಭೇಟಿ ಮತ್ತು ಮನವಿ ಸಲ್ಲಿಕೆ
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಜ್ಞಾಪಕ ಪತ್ರವನ್ನು (ಮೆಮೊರಾಂಡಂ) ಸಲ್ಲಿಸಲು ಸಿಜೆಪಿ ವಕ್ತಾರ ಸೌರವ್ ದಾಸ್ ಮತ್ತು ಚಳವಳಿಯ ಪ್ರಮುಖ ನಾಯಕ ಅಶುತೋಷ್ ರಾಂಕಾ ಅವರು ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆಗಳು ಮತ್ತು ಆರೋಪಗಳು ಹೊರಬಿದ್ದಿವೆ.
ಈ ಭೇಟಿಯ ವಿವರಗಳನ್ನು ಹಂಚಿಕೊಂಡ ದಾಸ್, ನಡ್ಡಾ ಅವರನ್ನು ಭೇಟಿಯಾಗಲು ತಮಗೆ ಸುಲಭವಾಗಿ ಅವಕಾಶ ಸಿಗಲಿಲ್ಲ, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ಹೇಳಿದ್ದಾರೆ. “ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾದ ನಂತರ, ಅಶುತೋಷ್ ರಾಂಕಾ ಮತ್ತು ನಾನು ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಸುಮಾರು 10 ನಿಮಿಷಗಳ ಕಾಲ ಭೇಟಿಯಾದೆವು. ನಮ್ಮ ಸಮಗ್ರ ಬೇಡಿಕೆಗಳನ್ನು ಒಳಗೊಂಡ ಲಿಖಿತ ಪತ್ರವನ್ನು ನಾವು ಅವರಿಗೆ ಸಲ್ಲಿಸಿದಾಗ, ಅವರು ಈ ವಿಷಯದ ಕುರಿತು ಪಕ್ಷ ಮತ್ತು ಸರ್ಕಾರದ ಆಂತರಿಕ ಮಟ್ಟದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು. ನಾವು ಆ ಪ್ರಕ್ರಿಯೆಯಲ್ಲಿದ್ದಾಗಲೇ, ಹೊರಗಡೆ ಪ್ರತಿಭಟನಾಕಾರರ ಸಾಮೂಹಿಕ ಬಂಧನ ಮತ್ತು ಹಲ್ಲೆಯ ಸುದ್ದಿಗಳು ಬರಲು ಪ್ರಾರಂಭಿಸಿದವು” ಎಂದು ದಾಸ್ ವಿವರಿಸಿದ್ದಾರೆ.
ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹಾಗೂ ವಿದ್ಯಾರ್ಥಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಈ ‘ಸಂಸದ್ ಚಲೋ’ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಜಂತರ್ ಮಂತರ್ ಕಡೆಯಿಂದ ಕೇಂದ್ರ ಸರ್ಕಾರದ ಕಚೇರಿಗಳತ್ತ ಸಾಗುತ್ತಿದ್ದ ಅನೇಕ ಮಹಿಳೆಯರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತೀವ್ರವಾಗಿ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಮುಂದಕ್ಕೆ ಹೋಗದಂತೆ ತಡೆಯಲು ದೆಹಲಿ ಪೊಲೀಸರು ಆ ಪ್ರದೇಶದಲ್ಲಿ ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಇಡೀ ಪ್ರದೇಶವನ್ನು ಕಟ್ಟುನಿಟ್ಟಿನ ವಶಕ್ಕೆ ಪಡೆದಿದ್ದರು.
ಆದಾಗ್ಯೂ, ಪ್ರತಿಭಟನಾಕಾರರ ಬಂಧನಗಳು ಮತ್ತು ಗಾಯಗೊಂಡವರ ಕುರಿತು ಅಧಿಕೃತ ಸಾಂಖ್ಯಿಕ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. ಇನ್ನು ಪ್ರತಿಭಟನಾಕಾರರ ಆರೋಪಕ್ಕೆ ನೇರ ಪ್ರತಿಕ್ರಿಯೆ ನೀಡದಿದ್ದರೂ, ದೆಹಲಿ ಪೊಲೀಸರು ತಮ್ಮ ಅಧಿಕೃತ ‘X’ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, “ಅಂತಹ ಯಾವುದೇ ಹಲ್ಲೆಯ ಘಟನೆಗಳು ನಡೆದಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪೊಲೀಸರು ಅತ್ಯಂತ ವೃತ್ತಿಪರ ಹಾಗೂ ಕಾನೂನುಬದ್ಧವಾಗಿಯೇ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಕೃತ್ಯ ನಡೆದ ಸಾಕ್ಷ್ಯಗಳು ವಿಡಿಯೋ ರೂಪದಲ್ಲಿ ಹರಿದಾಡುತ್ತಿದ್ದರೂ ಪೊಲೀಸರು ಆರೋಪವನ್ನು ನಿರಾಕರಿಸುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.


