‘ಐ ಲವ್ ಮುಹಮ್ಮದ್’ ಪೋಸ್ಟರ್‌ಗಳ ಮೇಲಿನ ‘ಆಡಳಿತಾತ್ಮಕ ಕ್ರಮ’ವನ್ನು ವಿರೋಧಿಸಿ ಶುಕ್ರವಾರದ (ಸೆ.26) ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿತ್ತು.
ಇಸ್ಲಾಮಿಯಾ ಮೈದಾನದ ಬಳಿ ಧಾರ್ಮಿಕ ಘೋಷಣೆಗಳನ್ನು ಒಳಗೊಂಡ ಬ್ಯಾನರ್‌ಗಳು ಮತ್ತು ಫಲಕಗಳನ್ನು ಹಿಡಿದ 1,000ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಅವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲವಾರು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದರು. ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರತಿಭಟನಾಕಾರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಮತ್ತು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕನಿಷ್ಠ 10 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಆರೋಪಿಸಿದೆ.
ಘಟನೆ ಸಂಬಂಧ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (ಐಎಂಸಿ) ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ ಸೇರಿದಂತೆ ಐವತ್ತು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಮತ್ತು ನಗರದ ಮೂರರಿಂದ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಘಟನೆಯ ಬಳಿಕ ಬರೇಲಿಯಲ್ಲಿ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ವದಂತಿಗಳನ್ನು ನಂಬಬೇಡಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ 4ರಂದು ಆಯೋಜಿಸಲಾಗಿದ್ದ ವಾರ್ಷಿಕ ಬರಾವಾಫತ್ ಮೆರವಣಿಗೆ ವೇಳೆ ‘ಐ ಲವ್ ಮುಹಮ್ಮದ್’ ಎಂಬ ಫಲಕವನ್ನು ಹಾಕಿದ್ದಕ್ಕಾಗಿ ಯುವಕರ ಮೇಲೆ ಕಾನ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಇದರ ವಿರುದ್ದ ಪ್ರತಿಭಟಿಸಿ ಪ್ರಧಾನಿಗೆ ಮನವಿ ಪತ್ರ ನೀಡಲು ಶುಕ್ರವಾರ ಬರೇಲಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸುವಂತೆ ತೌಕೀರ್ ರಝಾ ಖಾನ್ ಕರೆ ನೀಡಿದ್ದರು. ಅದರಂತೆ, ಶುಕ್ರವಾರದ ಜುಮಾ ಪ್ರಾರ್ಥನೆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಎಸ್‌ಎಸ್‌ಪಿ ಅನುರಾಗ್ ಆರ್ಯ ಹೇಳಿದ್ದಾರೆ.
ಬರೇಲಿ ವಲಯದ ಡಿಐಜಿ ಅಜಯ್ ಕುಮಾರ್ ಸಹಾನಿ ಮಾತನಾಡಿ, ಪೊಲೀಸರ ಮೇಲೆ ದಾಳಿಗೆ ಪ್ರಚೋದನೆ ನೀಡಿದವರ ವಿಡಿಯೋಗಳು ಮತ್ತು ಕರೆ ದಾಖಲೆಗಳು ಲಭ್ಯವಾಗಿದೆ. ತಪ್ಪಿತಸ್ಥರನ್ನು ಗುರುತಿಸಿ ಬಂಧಿಸಲು ನಮ್ಮ ತಂಡಗಳು ಕಾರ್ಯ ಪ್ರವೃತ್ತವಾಗಿವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲೂ, ‘ಐ ಲವ್ ಮುಹಮ್ಮದ್’ ಬ್ಯಾನರ್ ಅಡಿಯಲ್ಲಿ ಅನಧಿಕೃತ ಧಾರ್ಮಿಕ ಮೆರವಣಿಗೆಯನ್ನು ಹಮ್ಮಿಕೊಂಡ ಆರೋಪ ಕೇಳಿ ಬಂದಿದೆ. ಮೊಹಮ್ಮದಾಬಾದ್ ಪಟ್ಟಣದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಹೆಚ್ಚಾಗಿ ಮಕ್ಕಳು ಪಾಲ್ಗೊಂಡಿದ್ದರು. ಪೊಲೀಸರು ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಅವರು ಚದುರಿಹೋದರು. ಆದರೂ, ನಾಲ್ಕರಿಂದ ಐದು ಜನರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಕಾನ್ಪುರದಲ್ಲಿ ಎಫ್‌ಐಆರ್ ದಾಖಲಾದ ನಂತರ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಸೆಪ್ಟೆಂಬರ್ 23 ರಂದು ಕಾನ್ಪುರ ಬ್ಯಾನರ್ ವಿವಾದವನ್ನು ವಿರೋಧಿಸಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ಬೀಡ್‌ನಲ್ಲಿ ಪೊಲೀಸರು 35 ವರ್ಷದ ಧರ್ಮಗುರುವಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗುಜರಾತ್ ಮತ್ತು ಬಿಹಾರದಲ್ಲೂ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿವೆ.
ತಮಿಳುನಾಡು| ದಲಿತ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ; ರಸ್ತೆ ಪ್ರವೇಶಿಸದಂತೆ ತಡೆದ ಪ್ರಬಲಜಾತಿ ವೃದ್ದೆ


