ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ, ಮಂಗಳವಾರ (ಸೆ.30) ಭಾರತೀಯ ಚುನಾವಣಾ ಆಯೋಗ (ಇಸಿಐ) ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ವರ್ಷದ ಜೂನ್ 24ರ ವೇಳೆಗೆ 7.89 ಕೋಟಿ ಇದ್ದ ಬಿಹಾರದ ಒಟ್ಟು ಮತದಾರ ಸಂಖ್ಯೆ, ಎಸ್‌ಐಆರ್ ಬಳಿಕ 7.42 ಕೋಟಿಗೆ ಇಳಿದಿದೆ. ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯ ಪ್ರಕಾರ 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಎಸ್‌ಐಆರ್ ಬಳಿಕ ಆಗಸ್ಟ್ 1, 2025ರಂದು ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ 7.24 ಕೋಟಿ ಮತದಾರರಿದ್ದರು. ಇವರಲ್ಲಿ 3.66 ಲಕ್ಷ ಅನರ್ಹ ಮತದಾರರನ್ನು ಕೈಬಿಡಲಾಗಿದೆ. ಮತ್ತು 21.53 ಲಕ್ಷ ಅರ್ಹ ಮತದಾರರನ್ನು ಫಾರ್ಮ್ 6 ಬಳಸಿ ಸೇರಿಸಲಾಗಿದೆ. ಇದರಿಂದಾಗಿ ಅಂತಿಮ ಮತದಾರರ ಸಂಖ್ಯೆ 7.42 ಕೋಟಿ ಆಗಿದೆ.
ಎಸ್‌ಐಆರ್ ಪ್ರಕ್ರಿಯೆ ಸಂಕೀರ್ಣವಾಗಿತ್ತು. ಇದಕ್ಕಾಗಿ ಇದರಲ್ಲಿ ಭಾಗಿಯಾಗಿದ್ದ ಎಲ್ಲಾ ಪಕ್ಷಗಳು, ಮತದಾರರು ಮತ್ತು ಇತರ ಪ್ರಮುಖ ಪಾಲುದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಈ ನಡುವೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗದ ವಿರುದ್ದ ಮೌಖಿಕ ದಾಳಿ ಮತ್ತು ಟೀಕೆಗಳು ಕೇಳಿ ಬಂದಿವೆ.
4.6 ಲಕ್ಷ ಹೊಸ ಮತದಾರರು ಹೇಗೆ ಸೇರ್ಪಡೆಯಾದರು? ಯೋಗೇಂದ್ರ ಯಾದವ್ ಪ್ರಶ್ನೆ
ಅಂತಿಮ ಪಟ್ಟಿಗೆ 4.6 ಲಕ್ಷ ಹೊಸ ಮತದಾರರನ್ನು ಹೇಗೆ ಸೇರಿಸಲಾಗಿದೆ ಎಂದು ಯೋಗೇಂದ್ರ ಯಾದವ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.
“ಚುನಾವಣಾ ಆಯೋಗದ ಪ್ರಕಾರ, ಸೆಪ್ಟೆಂಬರ್ 1ರವರೆಗೆ ಸ್ವೀಕರಿಸಿದ ಹೊಸ ಫಾರ್ಮ್ -6 ಸಂಖ್ಯೆ 16.93 ಲಕ್ಷ. ನಂತರ ಅರ್ಜಿ ಸಲ್ಲಿಸಲು ಅವಕಾಶ ಇರಲಿಲ್ಲ. ಹೀಗಿರುವಾಗ ಚುನಾವಣಾ ಆಯೋಗ ಒಟ್ಟು 21.53 ಲಕ್ಷ ಮತದಾರರನ್ನು ಸೇರ್ಪಡೆಗೊಳಿಸಿರುವುದು ಹೇಗೆ? ಸೆಪ್ಟೆಂಬರ್ 1ರ ನಂತರ ಅಂತಿಮ ಪಟ್ಟಿಗೆ ಕನಿಷ್ಠ 4.6 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದು ಹೇಗೆ? ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಯೋಗೇಂದ್ರ ಯಾದವ್ ಕೇಳಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಬಡವರು, ದಲಿತರ ಹೆಸರು ಸೇರಿಸಿಲ್ಲ- ಪ್ರತಿಪಕ್ಷಗಳ ಆರೋಪ
ಕಾಂಗ್ರೆಸ್ ಪಕ್ಷವು ಅಂತಿಮ ಮತದಾರರ ಪಟ್ಟಿಯನ್ನು ತೀವ್ರವಾಗಿ ಟೀಕಿಸಿದೆ. ಎಸ್‌ಐಆರ್ ಅನ್ಯಾಯ ಮತ್ತು ಪಾರದರ್ಶಕತೆ ಕೊರತೆಯಿಂದ ಕೂಡಿದೆ ಎಂದಿದೆ.
ಎಸ್‌ಐಆಎರ್ ಪ್ರಕ್ರಿಯೆಯು ಆರಂಭದಿಂದಲೂ ದೋಷಪೂರಿತವಾಗಿದೆ. ಆದರೂ ಚುನಾವಣಾ ಆಯೋಗ ಎಸ್‌ಐಆರ್ ಯಶಸ್ವಿಯಾಗಿದೆ ಎಂದು ಘೋಷಿಸಿದೆ. 68 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಮತ್ತು ಕೇವಲ 21.53 ಲಕ್ಷ ಹೆಸರುಗಳನ್ನು ಮಾತ್ರ ಸೇರಿಸಲಾಗಿದೆ. ಜನರ ಮತದಾನದ ಹಕ್ಕನ್ನು ರಕ್ಷಿಸಲು ನಮ್ಮ ಪಕ್ಷವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಹೇಳಿದ್ದಾರೆ.
ನಮ್ಮ ಶತ ಪ್ರಯತ್ನಗಳ ಹೊರತಾಗಿಯೂ ಬಡವರು, ದಲಿತರು, ಅತ್ಯಂತ ಹಿಂದುಳಿದವರು ಮತ್ತು ಹಿಂದುಳಿದ ವರ್ಗಗಳ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 10,000 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಕಂಡುಕೊಂಡಿದ್ದೇವೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಕ್ತಾರ ಶಕ್ತಿ ಸಿಂಗ್ ಯಾದವ್ ತಿಳಿಸಿದ್ದಾರೆ.
ಮತಗಳ್ಳತನ ಆರೋಪಗಳಿಗೆ ಸೂಕ್ತ ಉತ್ತರ- ಎನ್‌ಡಿಎ
ಬಿಜೆಪಿ ವಕ್ತಾರ ಪ್ರಭಾಕರ್ ಮಿಶ್ರಾ ಅವರು ವಿರೋಧ ಪಕ್ಷದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. “ಅಂತಿಮ ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಇದು ಮತಗಳ್ಳತನದ ಆರೋಪ ಮಾಡಿದ ವಿರೋಧ ಪಕ್ಷಗಳಿಗೆ ಸೂಕ್ತ ಉತ್ತರವಾಗಿದೆ” ಎಂದು ಹೇಳಿದ್ದಾರೆ.
ಜೆಡಿಯು ಮುಖ್ಯ ವಕ್ತಾರ ಮತ್ತು ಎಂಎಲ್‌ಸಿ ನೀರಜ್ ಕುಮಾರ್ ಮಾತನಾಡಿ, 21.53 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಅದರಲ್ಲಿ ಹೆಚ್ಚಿನವು ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಮತ್ತು ದಲಿತ ಸಮುದಾಯಗಳಿಗೆ ಸೇರಿದವಾಗಿವೆ. ಬಿಹಾರದಲ್ಲಿ ಕಾಂಗ್ರೆಸ್-ಆರ್‌ಜೆಡಿಯ ‘ಮತ ಕಳ್ಳತನ’ ಆರೋಪಗಳಿಗೆ ಚುನಾವಣಾ ಆಯೋಗದ ಅಂತಿಮ ಪಟ್ಟಿಯು ಸರಿಯಾದ ಪ್ರತಿಕ್ರಿಯೆ ನೀಡಿದೆ ಎಂದಿದ್ದಾರೆ.
ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’


