ಅಕ್ಟೋಬರ್ 5ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ತಾಯಿ ಕಮಲಾತೈ ಗವಾಯಿ ಬುಧವಾರ (ಅ.1) ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಕಮಲಾತೈ ಅವರನ್ನು ಆರ್‌ಎಸ್‌ಎಸ್ ಆಹ್ವಾನಿಸಿತ್ತು. ಆದರೆ, ಸುದ್ದಿ ಸೃಷ್ಟಿಸಿದ ವಿವಾದ ಮತ್ತು ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದಿಂದ ದೂರ ಇರಲು ಅವರು ನಿರ್ಧರಿಸಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
ಹೆಚ್ಚಿನ ವರದಿಗಳು, ಕಮಲಾತೈ ಅವರು ಆರೋಗ್ಯದ ಕಾರಣಗಳನ್ನು ಮುಂದಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ ಎಂದಿವೆ.
ಕಮಲಾತೈ ಅವರಿಗೆ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ ಎಂಬ ಸಂಗತಿ ಬಹಿರಂಗಗೊಳ್ಳುತ್ತಿದ್ದಂತೆಯೇ, ಅವರು ಮತ್ತು ಅವರ ಪತಿ, ಬಿಹಾರದ ಮಾಜಿ ರಾಜ್ಯಪಾಲ ದಾದಾಸಾಹೇಬ್ ಗವಾಯಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದು ವಿವಾದದ ಸ್ವರೂಪವನ್ನೂ ಪಡೆದುಕೊಂಡಿತ್ತು.
“ಒಂದು ವೇಳೆ ನಾನೇನಾದರೂ ಆರ್‌ಎಸ್‌ಎಸ್ ವೇದಿಕೆಯಲ್ಲಿದ್ದಿದ್ದರೆ, ನಾನು ಅಂಬೇಡ್ಕರ್ ಸಿದ್ಧಾಂತವನ್ನು ಮುಂದಿಡುತ್ತಿದ್ದೆ” ಎಂದು ಕಮಲಾತೈ ಅವರು ಬಹಿರಂಗ ಪತ್ರದಲ್ಲಿ ಹೇಳಿರುವುದಾಗಿ ವರದಿಯಾಗಿದೆ.
“ಕೆಲವರು ನನ್ನನ್ನು ಅಕ್ಟೋಬರ್ 5ರಂದು ಆಯೋಜನೆಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಜನರು ನನ್ನ ಹಾಗೂ ನನ್ನ ಪತಿ ದಾದಾಸಾಹೇಬ್ ಗವಾಯಿ ವಿರುದ್ಧ ಆರೋಪಗಳನ್ನು ಮಾಡಿದರು. ಆದರೆ, ನಾವು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ಬದುಕುತ್ತಿದ್ದೇವೆ. ದಾದಾಸಾಹೇಬ್ ಗವಾಯಿ ತಮ್ಮ ಇಡೀ ಜೀವನವನ್ನು ಅಂಬೇಡ್ಕರ್ ವಾದದ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ವಿಭಿನ್ನ ಸಿದ್ಧಾಂತದ ವೇದಿಕೆಯ ಮೇಲೆ ನಮ್ಮ ಸಿದ್ಧಾಂತವನ್ನು ಹಂಚಿಕೊಳ್ಳುವುದು ಮುಖ್ಯವಾಗಿದ್ದರೂ, ಅದಕ್ಕೆ ಧೈರ್ಯದ ಅಗತ್ಯವಿದೆ” ಎಂದು ಕಮಲಾತೈ ಗವಾಯಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“ನನ್ನ ಪತಿ ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ತಮ್ಮ ವಿರೋಧಿ ಸಿದ್ಧಾಂತದ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ದಮನಿತ ವರ್ಗಗಳ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದರು” ಎಂದೂ ಅವರು ತಿಳಿಸಿದ್ದಾರೆ.
“ನನ್ನ ಪತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ, ಅವರು ಹಿಂದುತ್ವವನ್ನು ಒಪ್ಪಿಕೊಂಡಿರಲಿಲ್ಲ. ನಾನೇನಾದರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೇದಿಕೆಯನ್ನು ಹಂಚಿಕೊಂಡಿದ್ದರೆ, ನಾನು ಅಂಬೇಡ್ಕರ್ ವಾದವನ್ನು ಮುಂದಿಡುತ್ತಿದ್ದೆ” ಎಂದಿದ್ದಾರೆ.
“ಆದರೆ, ಕೇವಲ ಒಂದು ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ನನ್ನ ಮೇಲೆ ಆರೋಪಗಳು ಹಾಗೂ ಕಳಂಕ ಹಚ್ಚುವ ಪ್ರಯತ್ನಗಳು ನಡೆದಿದ್ದರಿಂದ ನನಗೆ ತುಂಬಾ ಬೇಸರವಾಗಿದೆ. ಹೀಗಾಗಿ ನಾನು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ” ಎಂದು ಕಮಲಾತೈ ಗವಾಯಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನಾಯಕ ಹಾಗೂ ಸಿಜಿಐ ಗವಾಯಿ ಅವರ ಸಹೋದರ ಡಾ. ರಾಜೇಂದ್ರ ಗವಾಯಿ, “ಸಂಘದ ಕಾರ್ಯಕ್ರಮ ಅಮರಾವತಿಯಲ್ಲಿ ನಡೆಯುತ್ತಿದ್ದು, ಆಯಿ ಸಾಹೇಬ್ (ತಾಯಿ) ಭಾಗವಹಿಸಲು ಆಹ್ವಾನವನ್ನು ಸ್ವೀಕರಿಸಿದ್ದಾರೆ. ಈ ಹಿಂದೆ, ನಾಗ್ಪುರದಲ್ಲಿ ನಡೆದ ಸಂಘದ ವಿಜಯದಶಮಿ ಕಾರ್ಯಕ್ರಮಗಳಲ್ಲಿಯೂ ಕೂಡ, ರಾಜ್ಯಸಭೆಯ ಮಾಜಿ ಉಪಾಧ್ಯಕ್ಷ ಮತ್ತು ನ್ಯಾಯವಾದಿ ಬಿ.ಡಿ. ಖೋಬ್ರಗಡೆ ಮತ್ತು ದಾದಾಸಾಹೇಬ್ ಗವಾಯಿ ಅವರಂತಹ ನಾಯಕರು ಭಾಗವಹಿಸಿದ್ದರು ಎಂಬುದನ್ನು ಗಮನಾರ್ಹ. ಆದ್ದರಿಂದ, ನಮ್ಮ ತಾಯಿ ಕೂಡ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಗವಾಯಿ ಕುಟುಂಬವು ಯಾವಾಗಲೂ ರಾಜಕೀಯ ಗಡಿಗಳನ್ನು ಮೀರಿದ ಸಂಬಂಧಗಳನ್ನು, ಪಕ್ಷಗಳ ರೇಖೆಗಳನ್ನು ಮೀರಿದ ಸಂಬಂಧಗಳನ್ನು ಉಳಿಸಿಕೊಂಡಿದೆ” ಎಂದು ಹೇಳಿದ್ದರು.
ಇದಕ್ಕೂ ಮೊದಲು ಆರ್‌ಎಸ್‌ಎಸ್ ಸಂವಹನ ವಿಭಾಗದ ವಿಶ್ವ ಸಂವಾದ ಕೇಂದ್ರದ ಅಧಿಕಾರಿಗಳು, “ಆಹ್ವಾನ ನೀಡುವ ಮೊದಲು ಕಮಲಾತೈ ಅವರ ಒಪ್ಪಿಗೆಯನ್ನು ಪಡೆದಿದ್ದೇವೆ ಮತ್ತು ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಹೇಗೆ ಕಾಣಿಸಿಕೊಳ್ಳಬೇಕೆಂದು ಕೂಡ ಕೇಳಿದ್ದೇವೆ” ಎಂದು ಹೇಳಿದ್ದರು ಎಂಬುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


