ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಶಾಂತಿ ಯೋಜನೆಗೆ ಹಮಾಸ್ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದು, ಗಾಝಾ ಪಟ್ಟಿಯ ಆಡಳಿತವನ್ನು ಅರಬ್ ಮತ್ತು ಇಸ್ಲಾಮಿಕ್ ಬೆಂಬಲಿತ ಪ್ಯಾಲೆಸ್ತೀನ್ ತಂತ್ರಜ್ಞರ ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸಲು ಮತ್ತು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಹಮಾಸ್ ಗುಂಪು ಶಾಂತಿ ಯೋಜನೆಯ ಪ್ರಮುಖ ಅಂಶ ಮತ್ತು ಇಸ್ರೇಲ್‌ನ ಪ್ರಮುಖ ಬೇಡಿಕೆಯಾದ ಶಸ್ತ್ರಾಸ್ತ್ರ ತ್ಯಜಿಸುವ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮಧ್ಯವರ್ತಿಗಳ ಮೂಲಕ ತಕ್ಷಣ ಶಾಂತಿ ಮಾತುಕತೆ ನಡೆಸಲು ಸಿದ್ದ ಎಂದು ಹೇಳಿದೆ.
ಗಾಝಾ ಪಟ್ಟಿಯ ಭವಿಷ್ಯ ಮತ್ತು ಪ್ಯಾಲೆಸ್ತೀನ್ ಜನತೆಯ ಕಾನೂನುಬದ್ಧ ಹಕ್ಕುಗಳ ಕುರಿತು ಟ್ರಂಪ್ ಅವರ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾದ ಇತರ ವಿಷಯಗಳು ‘ಏಕೀಕೃತ ರಾಷ್ಟ್ರೀಯ ನಿಲುವು ಮತ್ತು ಸಂಬಂಧಿತ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ನಿರ್ಣಯಗಳಿಗೆ ಸಂಬಂಧಿಸಿವೆ’ ಎಂದು ಹಮಾಸ್ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಉಳಿದ ವಿಷಯಗಳನ್ನು (ಉದಾಹರಣೆಗೆ: ಶಸ್ತ್ರಾಸ್ತ್ರ ತ್ಯಜಿಸುವುದು) ಒಂದು ‘ಸಮಗ್ರ ಪ್ಯಾಲೆಸ್ತೀನ್ ರಾಷ್ಟ್ರೀಯ ಚೌಕಟ್ಟಿನ’ (ಎಲ್ಲಾ ಪ್ಯಾಲೆಸ್ತೀನ್ ಗುಂಪುಗಳನ್ನು ಒಳಗೊಂಡ ಒಂದು ದೊಡ್ಡ ಒಪ್ಪಂದ) ಮೂಲಕ ಚರ್ಚಿಸಲಾಗುವುದು. ಈ ಚೌಕಟ್ಟಿನಲ್ಲಿ ಹಮಾಸ್ ಭಾಗವಹಿಸಲಿದೆ ಮತ್ತು ಜವಾಬ್ದಾರಿಯುತವಾಗಿ ತನ್ನ ಕೊಡುಗೆಯನ್ನು ನೀಡಲಿದೆ ಎಂದು ಹೇಳಿದೆ.
ಗಾಝಾದ ಶಾಂತಿ ವಿಷಯದಲ್ಲಿ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು, ವಿಶೇಷವಾಗಿ ಟ್ರಂಪ್ ಮುಂದಿಟ್ಟಿರುವ ಯೋಜನೆಯನ್ನು ಹಮಾಸ್ ಶ್ಲಾಘಿಸಿದೆ. ಯುದ್ಧವನ್ನು ಕೊನೆಗೊಳಿಸುವುದು, ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡುವುದು, ಗಾಝಾಕ್ಕೆ ಹೆಚ್ಚಿನ ನೆರವು ಒದಗಿಸುವುದು, ಗಾಝಾ ಪಟ್ಟಿ ಆಕ್ರಮಿಸಿಕೊಳ್ಳುವುದನ್ನು ತಿರಸ್ಕರಿಸುವುದು, ಪ್ಯಾಲೆಸ್ತೀನಿಯರನ್ನು ಗಾಝಾದಿಂದ ಬಲವಂತವಾಗಿ ಓಡಿಸುವುದನ್ನು ವಿರೋಧಿಸುವುದು ಸೇರಿದಂತೆ ಟ್ರಂಪ್ ಪ್ರಸ್ತಾಪದಲ್ಲಿ ಕೆಲವು ಮುಖ್ಯ ಅಂಶಗಳಿವೆ ಎಂದು ಹಮಾಸ್ ತಿಳಿಸಿದೆ.
ಹಮಾಸ್ ಪ್ರತಿಕ್ರಿಯೆಬಳಿಕ ವಿಡಿಯೋ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್, “ಇದೊಂದು ‘ಅಭೂತಪೂರ್ವ’ ಬೆಳವಣಿಗೆ. ಆದರೆ, ಎಲ್ಲವನ್ನೂ ಖಚಿತವಾದ ಒಪ್ಪಂದದ ರೂಪದಲ್ಲಿ ಲಿಖಿತವಾಗಿ ದಾಖಲಿಸುವುದು ತುಂಬಾ ಮುಖ್ಯ” ಎಂದಿದ್ದಾರೆ.
ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಟ್ರಂಪ್, “ಗಾಝಾದ ಮೇಲೆ ಬಾಂಬ್ ದಾಳಿ ಮಾಡುವುದನ್ನು ತಕ್ಷಣ ನಿಲ್ಲಿಸಿ ಎಂದು ಇಸ್ರೇಲ್‌ಗೆ ಕರೆ ನೀಡಿದ್ದು, ಹಮಾಸ್ ಶಾಶ್ವತ ಶಾಂತಿಗೆ ಸಿದ್ಧವಾಗಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
ಇಸ್ರೇಲ್ ಗಾಝಾ ಮೇಲಿನ ತನ್ನ ಆಕ್ರಮಣವನ್ನು ಶುಕ್ರವಾರ (ಅ.3) ಮುಂದುವರೆಸಿತ್ತು. ಗಾಝಾ ಪಟ್ಟಿಯಾದ್ಯಂತ ಶುಕ್ರವಾರ ಕನಿಷ್ಠ 72 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ.
ಅಕ್ಟೋಬರ್ 2023ರಿಂದ ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಲ್ಲಿ ಕನಿಷ್ಠ 66,288 ಜನರು ಸಾವನ್ನಪ್ಪಿದ್ದಾರೆ ಮತ್ತು 169,165 ಜನರು ಗಾಯಗೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಎಂದು ನಂಬಲಾಗಿದೆ.
ಅಕ್ಟೋಬರ್ 7,2023 ರಂದು ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಒಟ್ಟು 1,139 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 200 ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಈ ಪೈಕಿ ಹಲವರನ್ನು ಇಸ್ರೇಲ್‌ಗೆ ಹಸ್ತಾಂತರಿಸಲಾಗಿದೆ. ಇನ್ನೂ ಕೆಲವರು ಹಮಾಸ್ ವಶದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗ್ತಿದೆ.
ಭಾರಿ ಭದ್ರತೆಯ ನಡುವೆ ಸಂಭಾಲ್‌ನಲ್ಲಿ ಮಸೀದಿ ಮತ್ತು ಮದುವೆ ಹಾಲ್ ನೆಲಸಮ


