ಲಡಾಖ್ ಹಿಂಸಾಚಾರದ ಸಂದರ್ಭದಲ್ಲಿ ನಾಲ್ವರ ಹತ್ಯೆ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೆ ಜೈಲಿನಲ್ಲಿರಲು ಸಿದ್ಧ ಎಂದು ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ರಾಜಸ್ಥಾನದ ಜೋಧ್‌ಪುರ ಕೇಂದ್ರ ಕಾರಾಗೃಹದಿಂದ ಸಂದೇಶ ಕಳುಹಿಸಿದ್ದಾರೆ.
ಶನಿವಾರ ಜೈಲಿನಲ್ಲಿ ತನ್ನನ್ನು ಭೇಟಿಯಾದ ವಕೀಲ ಮುಸ್ತಫಾ ಹಾಜಿ ಮತ್ತು ಹಿರಿಯ ಸೋದರ ಕಾ ತ್ಸೆತಾನ್ ದೋರ್ಜೆ ಲೇ ಮೂಲಕ ವಾಂಗ್ಚುಕ್ ಈ ಸಂದೇಶ ರವಾನಿಸಿದ್ದಾರೆ.
ವಾಂಗ್ಚುಕ್ ಅವರನ್ನು ಎನ್‌ಎಸ್‌ಎ ಅಡಿ ಬಂಧಿಸಿರುವುದನ್ನು ಪ್ರಶ್ನಿಸಿ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
“ನಮ್ಮ ನಾಲ್ವರು ಜನರ ಹತ್ಯೆಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು. ಅದು ನಡೆಯದ ಹೊರತು, ನಾನು ಜೈಲಿನಲ್ಲಿಯೇ ಇರಲು ಸಿದ್ಧನಿದ್ದೇನೆ. ಲಡಾಖ್ ಅನ್ನು ಸಂವಿಧಾನ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು ಮತ್ತು ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ನಮ್ಮ ನಿಜವಾದ ಸಾಂವಿಧಾನಿಕ ಬೇಡಿಕೆ ವಿಷಯದಲ್ಲಿ ನಾನು, ಅಪೆಕ್ಸ್ ಬಾಡಿ, ಕೆಡಿಎ ಲಡಾಖ್ ಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಲಡಾಖ್‌ನ ಹಿತದೃಷ್ಟಿಯಿಂದ ಅಪೆಕ್ಸ್ ಬಾಡಿ ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ” ಎಂದು ಸೋನಮ್ ವಾಂಗ್ಚುಕ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಮಾತುಕತೆಯಿಂದ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಎರಡೂ ಹಿಂದೆ ಸರಿದಿದ್ದು, ಬಂಧಿತ ಹೋರಾಟಗಾರರನ್ನು ಬಿಡುಗಡೆ ಮಾಡಿ ನ್ಯಾಯಾಂಗ ವಿಚಾರಣೆ ನಡೆಸುವವರೆಗೆ ನಾವು ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿವೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಗಳಲ್ಲಿ ನಾಲ್ವರು ಸಾವನ್ನಪ್ಪಿ, 90 ಜನರು ಗಾಯಗೊಂಡ ಎರಡು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 26ರಂದು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ.
ತನ್ನ ಬಗ್ಗೆ ಜನರ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ವಾಂಗ್ಚುಕ್, ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿರುವ ಅವರು, ಗಾಯಾಳುಗಳು ಅಥವಾ ಬಂಧಿತರಿಗಾಗಿ ತಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಶಾಂತಿ ಮತ್ತು ಏಕತೆಯನ್ನು ಕಾಯ್ದುಕೊಳ್ಳುವಂತೆ ಹಾಗೂ ಗಾಂಧಿವಾದಿ ರೀತಿಯಲ್ಲಿ ಶಾಂತಿಯುತವಾಗಿ,ಅಹಿಂಸಾತ್ಮಕವಾಗಿ ಹೋರಾಟವನ್ನು ಮುಂದುವರಿಸುವಂತೆ ಅವರು ಜನತೆಯನ್ನು ಕೋರಿಕೊಂಡಿದ್ದಾರೆ.
ಕಾಸರಗೋಡು ಶಾಲೆಯಲ್ಲಿ ಪ್ಯಾಲೆಸ್ತೀನ್ ಪರ ಮೂಕಾಭಿನಯಕ್ಕೆ ತಡೆ: ತನಿಖೆಗೆ ಆದೇಶಿಸಿದ ಸರ್ಕಾರ


