ಸ್ಥಳೀಯರ ಗುಂಪೊಂದು ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿಯನ್ನು ಕ್ರೂರವಾಗಿ ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಐದು ಜನರನ್ನು ಬಂಧಿಸಿದ್ದಾರೆ.
ಘಟನೆಯ ವೀಡಿಯೊ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಹರಿಓಮ್ ಎಂದು ಗುರುತಿಸಲಾದ ಬಲಿಪಶುವನ್ನುಗುಂಪೊಂದು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ಥಳಿಸುತ್ತಿರುವುದು ಸೆರೆಯಾಗಿದೆ. ಮಾನಸಿಕ ಅಸ್ವಸ್ಥನೆಂದು ನಂಬಲಾದ ಆ ವ್ಯಕ್ತಿ ‘ರಾಹುಲ್ ಗಾಂಧಿ’ ಸೇರಿದಂತೆ ಕೆಲವು ಪದಗಳನ್ನು ಗೊಣಗುತ್ತಿರುವುದು ಮಸುಕಾಗಿ ಕೇಳಿಸುತ್ತದೆ.
ಮೃತ ವ್ಯಕ್ತಿ ದಂಡೇಪುರ ಜಮುನಾಪುರದಲ್ಲಿರುವ ಅವರ ಅತ್ತೆಯ ಮನೆಗೆ ಹೋಗುತ್ತಿದ್ದಾಗ, ಜನರ ಗುಂಪೊಂದು ಅವರನ್ನು ಸುತ್ತುವರೆದು ಅವರನ್ನು ಡ್ರೋನ್ ಕಳ್ಳ ಎಂದು ಶಂಕಿಸಿ ಹೊಡೆಯಲು ಪ್ರಾರಂಭಿಸಿತು.
ಘಟನೆಯ ಕುರಿತು ಮಾತನಾಡಿದ ರಾಯ್ ಬರೇಲಿ ಎಎಸ್‌ಪಿ ಸಂಜೀವ್ ಕುಮಾರ್ ಸಿನ್ಹಾ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿದ್ದಾರೆ, ಇತರ ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.
“ಉಂಚಹಾರ್ ಪೊಲೀಸ್ ಠಾಣೆ ಪ್ರದೇಶದಲ್ಲಿ, ಕಳ್ಳನೆಂದು ತಪ್ಪಾಗಿ ಭಾವಿಸಿ ಕೆಲವು ಜನರು ವ್ಯಕ್ತಿಯನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಪ್ರಕರಣ ದಾಖಲಿಸಲಾಗಿದ್ದು, ಐದು ಜನರನ್ನು ಜೈಲಿಗೆ ಕಳುಹಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಗುರುತಿಸಿ ಬಂಧಿಸಲಾಗುವುದು ಮತ್ತು ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಸಿನ್ಹಾ ಹೇಳಿದರು.
ಗುಜರಾತ್| ದಲಿತ ಯುವತಿಯನ್ನು ಗರ್ಬಾ ಕಾರ್ಯಕ್ರಮದಿಂದ ಹೊರಗೆ ಕಳಿಸಿ ಅವಮಾನ; ದೂರು ದಾಖಲು


