ಬಿಜೆಪಿ ಅಸ್ಸಾಂ ರಾಜ್ಯದ ಘಟಕದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಎಐ ಆಧಾರಿತ ‘ಇಸ್ಲಾಮೋಫೋಬಿಕ್’ ವಿಡಿಯೋವನ್ನು ತೆಗೆದು ಹಾಕಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಅಸ್ಸಾಂ ಬಿಜೆಪಿ, ಅಸ್ಸಾಂ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮಂಗಳವಾರ (ಅ.7) ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರ ಅಡ್ವೊಕೇಟ್ ಲಝೀಫ್ ಅಹ್ಮದ್ ಪರ ವಕೀಲ ನಿಝಾಮ್ ಪಾಷಾ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ನೋಟಿಸ್ ಜಾರಿ ಮಾಡಿದೆ.
“ಮುಂಬರುವ ಚುನಾವಣೆಯ ಭಾಗವಾಗಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರಕ್ಕೆ ಬರದಿದ್ದರೆ, ಒಂದು ನಿರ್ದಿಷ್ಟ ಸಮುದಾಯವು ಅಧಿಕಾರ ವಹಿಸಿಕೊಳ್ಳುತ್ತದೆ ಎಂದು ಅದರಲ್ಲಿ ತೋರಿಸಲಾಗಿದೆ. ಟೋಪಿ ಮತ್ತು ಗಡ್ಡ ಬಿಟ್ಟ ಜನರನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಹಾಗಾಗಿ, ವಿಡಿಯೋ ಪೋಸ್ಟ್ ಮಾಡಿದವರ ವಿರುದ್ದ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಬೇಕು. ಎಫ್‌ಐಆರ್ ದಾಖಲಿಸದಿದ್ದರೆ, ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು” ಎಂದು ಅರ್ಜಿದಾರರ ಪರ ವಕೀಲ ಮನವಿ ಮಾಡಿದ್ದರು.
ಮನವಿ ಆಲಿಸಿದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ನಿಗದಿಪಡಿಸಿದೆ.
ಬಿಜೆಪಿ ಅಸ್ಸಾಂ ಘಟಕ ಸೆಪ್ಟೆಂಬರ್ 15ರಂದು ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯದಿದ್ದರೆ ಅಸ್ಸಾಂ ಅನ್ನು ಮುಸ್ಲಿಮರು ವಶಪಡಿಸಿಕೊಳ್ಳುತ್ತಾರೆ ಎಂಬ ‘ಸುಳ್ಳು ನಿರೂಪಣೆ’ಯನ್ನು ಇದರಲ್ಲಿ ಮಾಡಲಾಗಿದೆ. ಟೀ ಎಸ್ಟೇಟ್‌ಗಳು, ಗುವಾಹಟಿ ವಿಮಾನ ನಿಲ್ದಾಣ, ಗುವಾಹಟಿ ಅಕೋಲಾಡ್, ಅಸ್ಸಾಂ ರಂಗರ್, ಗುವಾಹಟಿ ಕ್ರೀಡಾಂಗಣ, ರಂಗ್ ಘರ್, ಗುವಾಹಟಿ ಪಟ್ಟಣವನ್ನು ಮುಸ್ಲಿಂ ಜನರು (ಸ್ಕಲ್‌ಟೋಪಿ ಮತ್ತು ಬುರ್ಖಾ ಧರಿಸಿದವರು) ವಶಪಡಿಸಿಕೊಂಡಂತೆ ವಿಡಿಯೋ ತೋರಿಸುತ್ತದೆ. ಅಸ್ಸಾಂಗೆ ಮುಸ್ಲಿಮರಾಗಿ ಅಕ್ರಮ ವಲಸಿಗರು ಬರುವುದನ್ನು ವಿಡಿಯೋ ತೋರಿಸುತ್ತದೆ. ಮುಸ್ಲಿಮರು ಸರ್ಕಾರಿ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಪರಿಣಾಮ ಅಂತಿಮವಾಗಿ, ರಾಜ್ಯದಲ್ಲಿ ಶೇಕಡ 90ರಷ್ಟು ಮುಸ್ಲಿಂ ಜನಸಂಖ್ಯೆ ಇದೆ ಎಂದು ವಿಡಿಯೋ ತೋರಿಸುತ್ತದೆ” ಎಂದು ಅರ್ಜಿದಾರರು ಹೇಳಿದ್ದಾರೆ.
ಅರ್ಜಿದಾರರು, ಬಿಜೆಪಿ ಅಸ್ಸಾಂ ಘಟಕ ಭಾರತೀಯ ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿರಬೇಕು. ಆದರೆ, ಅವರ ಅಧಿಕೃತ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾದ ಒಂದು ಎಐ-ನಿರ್ಮಿತ ವಿಡಿಯೋ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು, ಅವರನ್ನು ಕೆಟ್ಟದ್ದಾಗಿ ಚಿತ್ರಿಸಿದೆ ಮತ್ತು ರಾಕ್ಷಸಸೀಕರಿಸಿದೆ ಎಂದು ಆರೋಪಿಸಿದ್ದಾರೆ. ಒಂದು ರಾಜ್ಯಕ್ಕೆ ಸಂಭವಿಸಬಹುದಾದ ಅತ್ಯಂತ ಕೆಟ್ಟ ಭವಿಷ್ಯವೆಂದರೆ ಮುಸ್ಲಿಮರು ಆ ರಾಜ್ಯವನ್ನು ತಮ್ಮ ಆಡಳಿತಕ್ಕೆ ತೆಗೆದುಕೊಳ್ಳುವುದು. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ರಾಜ್ಯವನ್ನು ಈ ಗತಿಯಿಂದ ರಕ್ಷಿಸಬಹುದು ಎಂಬ ಭರವಸೆಯ ಮೂಲಕ ಜನರ ಬೆಂಬಲವನ್ನು ಕೋರಲಾಗಿದೆ” ಅರ್ಜಿಯಲ್ಲಿ ತಿಳಿಸಲಾಗಿದೆ.
ಅಶಾಂತಿ ಮತ್ತು ದ್ವೇಷವನ್ನು ತಡೆಗಟ್ಟುವ ಸಲುವಾಗಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಲು ವಿಡಿಯೋವನ್ನು ತೆಗೆದು ಹಾಕಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಕೋರಿದ್ದಾರೆ.
‘ಇಸ್ಲಾಮೋಫೋಬಿಕ್’ ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ: ವ್ಯಾಪಕ ವಿರೋಧ, ದೂರು ದಾಖಲಿಸಲು ಮುಂದಾದ ಪ್ರತಿಪಕ್ಷಗಳು


