ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ದಸರಾ ವಸ್ತು ಪ್ರದರ್ಶನ ಮೈದಾನದ ಬಳಿಯ ಇಂದಿರಾನಗರದಲ್ಲಿ (ಇಟ್ಟಿಗೆಗೂಡು) ಗುರುವಾರ (ಅ.9) ಮುಂಜಾನೆ 10 ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ.
ದಸರಾ ಸಮಯದಲ್ಲಿ ಬಲೂನು ಮತ್ತು ಗೊಂಬೆಗಳನ್ನು ಮಾರಾಟ ಮಾಡಲು ಮೈಸೂರಿಗೆ ಬಂದಿದ್ದ ಕಲಬುರಗಿ ಮೂಲದ ದಂಪತಿಯ ನಾಲ್ವರು ಮಕ್ಕಳಲ್ಲಿ ಮೃತ ಬಾಲಕಿ ಒಬ್ಬಳು ಎಂದು ವರದಿಗಳು ಹೇಳಿವೆ.
ಇಟ್ಟಿಗೆಗೂಡಿನ ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ದಸರಾದ ವ್ಯಾಪಾರಕ್ಕಾಗಿ ಬಂದ ವ್ಯಾಪಾರಿಗಳು ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು ಸಿದ್ಧತೆಯಲ್ಲಿದ್ದರು.
ಬುಧವಾರದ ವ್ಯಾಪಾರದ ನಂತರ ಸಾವಿಗೀಡಾದ ಬಾಲಕಿ ಪೋಷಕರೊಂದಿಗೆ ಮಲಗಿದ್ದಳು. ಮುಂಜಾನೆ 4 ಗಂಟೆ ಸುಮಾರಿಗೆ ಮಳೆಯಿಂದಾಗಿ ಪೋಷಕರು ಎಚ್ಚರವಾದಾಗ ಬಾಲಕಿ ಕಾಣೆಯಾಗಿದ್ದಳು. ಹುಡುಕಾಡಿದಾಗ ಅವರು ತಂಗಿದ್ದ ತಾತ್ಕಾಲಿಕ ಶೆಡ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
ಡಿಸಿಪಿ ಆರ್. ಎನ್ ಬಿಂದುಮಣಿ ಮತ್ತು ನಜರ್‌ಬಾದ್ ಪೊಲೀಸರು ಎಫ್‌ಎಸ್‌ಎಲ್ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರಿಗೆ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ ಎಂದು ಹೇಳಲಾಗ್ತಿದೆ.
ಬಾಲಕಿ ಸಾವಿಗೆ ಕಾರಣ ಏನೂ ಎಂಬುವುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರಿಕ್ಷೇಗಾಗಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮಂಗಳವಾರ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಗಿಲ್ಕಿ (45) ಕೊಲೆಯಾದ ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಎಕೆ-ಎಡಿ ಗೊಂದಲ ನಿವಾರಣೆ ಮುಂದಾದ ಸರ್ಕಾರ; ಜಾತಿ ಪ್ರಮಾಣ ಪತ್ರದಲ್ಲಿ ‘ಪ್ರವರ್ಗ’ ಉಲ್ಲೇಖಿಸುವಂತೆ ಆದೇಶ


