ರೂಪಾಯಿ 68 ಕೋಟಿ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ಆರೋಪದ ಮೇಲೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಸಮೂಹ ಕಂಪನಿ ರಿಲಯನ್ಸ್ ಪವರ್‌ನ ಸಿಎಫ್‌ಒ ಅಶೋಕ್ ಪಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ವರದಿಯಾಗಿದೆ.
ವಿಚಾರಣೆಯ ಬಳಿಕ ಶುಕ್ರವಾರ ರಾತ್ರಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ಅಶೋಕ್ ಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಶೋಕ್ ಪಾಲ್ ಅವರನ್ನು ಶನಿವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಮತ್ತು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೋರಲಾಗುವುದು ಎಂದು ಇಡಿ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಈ ಪ್ರಕರಣವು ರಿಲಯನ್ಸ್ ಪವರ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಎನ್‌ಯು ಬೆಸ್ ಲಿಮಿಟೆಡ್ ಪರವಾಗಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಇಸಿಐ) ಗೆ ಸಲ್ಲಿಸಲಾದ 68.2 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಗೆ ಸಂಬಂಧಿಸಿದೆ, ಅದು ‘ನಕಲಿ’ ಎಂದು ಕಂಡುಬಂದಿದೆ.
ಈ ಕಂಪನಿಯನ್ನು ಹಿಂದೆ ಮಹಾರಾಷ್ಟ್ರ ಎನರ್ಜಿ ಜನರೇಷನ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ವ್ಯಾಪಾರ ಗುಂಪುಗಳಿಗೆ ‘ನಕಲಿ’ ಬ್ಯಾಂಕ್ ಗ್ಯಾರಂಟಿಗಳನ್ನು ಒದಗಿಸುವ ದಂಧೆಯನ್ನು ನಡೆಸುತ್ತಿದ್ದ ಆರೋಪಿ ಕಂಪನಿಯನ್ನು ಒಡಿಶಾ ಮೂಲದ ಬಿಸ್ವಾಲ್ ಟ್ರೇಡ್‌ಲಿಂಕ್ ಎಂದು ಇಡಿ ಗುರುತಿಸಿದೆ.
ತನಿಖೆಯ ಭಾಗವಾಗಿ, ಇಡಿ ಆಗಸ್ಟ್‌ನಲ್ಲಿ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಶೋಧ ನಡೆಸಿ, ಅದರ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್ ಅವರನ್ನು ಬಂಧಿಸಿತ್ತು.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW)ನವೆಂಬರ್ 2024ರಲ್ಲಿ ದಾಖಲಿಸಿದ ಎಫ್‌ಐಆರ್‌ನಿಂದ ಈ ಹಣ ಅಕ್ರಮ ವರ್ಗಾವಣೆ ಪ್ರಕರಣ ಹುಟ್ಟಿಕೊಂಡಿದೆ.
ಕಂಪನಿಯು ಶೇಕಡ 8ರಷ್ಟು ಕಮಿಷನ್ ಮೇಲೆ ‘ನಕಲಿ’ ಬ್ಯಾಂಕ್ ಗ್ಯಾರಂಟಿಗಳನ್ನು ನೀಡುವಲ್ಲಿ ನಿರತವಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ರಿಲಯನ್ಸ್ ಪವರ್ ‘ವಂಚನೆ ಮತ್ತು ಪಿತೂರಿಯ ಬಲಿಪಶು ಎಂದು ರಿಲಯನ್ಸ್ ಗ್ರೂಪ್ ಆಗ ಹೇಳಿತ್ತು. ನವೆಂಬರ್ 7, 2024ರಂದು ಷೇರು ವಿನಿಮಯ ಕೇಂದ್ರಕ್ಕೆ ಸರಿಯಾದ ಬಹಿರಂಗಪಡಿಸುವಿಕೆಯನ್ನು ಮಾಡಿತ್ತು.
ಅಕ್ಟೋಬರ್ 2024ರಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗಲ್ಲಿ ಥರ್ಡ್ ಪಾರ್ಟಿ (ಆರೋಪಿ ಕಂಪನಿ) ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆ ನಂತರ ನಡೆಯಲಿದೆ ಎಂದು ರಿಲಯನ್ಸ್ ಗ್ರೂಪ್ ವಕ್ತಾರರು ತಿಳಿಸಿದ್ದರು.
ಇಡಿ ಮೂಲಗಳ ಪ್ರಕಾರ, ಭುವನೇಶ್ವರ ಮೂಲದ ಕಂಪನಿಯೊಂದು s-bi.co.in ಎಂಬ ಇಮೇಲ್ ಡೊಮೇನ್ ಬಳಸಿತ್ತು, ಇದು sbi.co.in ಗೆ ಸಮಾನವಾಗಿದೆ. ಇದರಿಂದಾಗಿ, ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಸಂವಹನ ನಡೆಸಲಾಗುತ್ತಿದೆ ಎಂಬ ಒಂದು ನಂಬಿಕೆಯ ಮುಖಭಾವ ಸೃಷ್ಟಿಸಲಾಗಿತ್ತು.
ಎಸ್‌ಇಸಿಐಗೆ ‘ನಕಲಿ’ ಸಂವಹನವನ್ನು ಕಳುಹಿಸಲು ನಕಲಿ ಡೊಮೇನ್ ಅನ್ನು ಬಳಸಲಾಗಿದೆ ಎಂದು ಹೇಳಲಾಗ್ತಿದೆ.
ಇಡಿಯ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಕಂಪನಿಯು ಕಮಿಷನ್‌ಗಾಗಿ ‘ನಕಲಿ’ ಬಿಲ್‌ಗಳನ್ನು ಸೃಷ್ಟಿಸಿತ್ತು ಮತ್ತು ಅನೇಕ ‘ಬಹಿರಂಗಪಡಿಸದ ಬ್ಯಾಂಕ್ ಖಾತೆಗಳನ್ನು ಬಳಸಿತ್ತು.
ಈ ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿಗಳ ಸಂದಿಗ್ಧ ವಹಿವಾಟುಗಳು ನಡೆದಿವೆ. ಕಂಪನಿಯು ಕೇವಲ ಕಾಗದದಲ್ಲಿ ಮಾತ್ರ ಇದೆ. ಏಕೆಂದರೆ, ಅದರ ನೋಂದಾಯಿತ ಕಚೇರಿಯು ಬಿಸ್ವಾಲ್‌ನ ಸಂಬಂಧಿಯೊಬ್ಬರ ವಸತಿ ಆಸ್ತಿಯಾಗಿದೆ. ತನಿಖೆಯ ಸಂದರ್ಭದಲ್ಲಿ ಆ ವಿಳಾಸದಲ್ಲಿ ಕಂಪನಿಯ ಯಾವುದೇ ದಾಖಲೆಗಳು ಕಂಡುಬಂದಿಲ್ಲ ಎಂದು ಇಡಿ ಮೂಲಗಳನ್ನು ಉಲ್ಲೇಖಿಸಿ ವರದಿಗಳು ವಿವರಿಸಿವೆ.


