ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಝಾ ಕದನ ವಿರಾಮ ಒಪ್ಪಂದ ಹಂತ ಹಂತವಾಗಿ ಜಾರಿಯಾಗುತ್ತಿದ್ದು, ಇಸ್ರೇಲ್ ಗಾಝಾ ಮೇಲೆ ಬಾಂಬ್ ದಾಳಿ ನಿಲ್ಲಿಸಿದ ಬಳಿಕ, ಬಂಧಿತರು ಮತ್ತು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.
ಸೋಮವಾರ (ಅ.13) ಇಸ್ರೇಲ್‌ನ 20 ಒತ್ತೆಯಾಳುಗಳನ್ನು ಹಮಾಸ್ ಹಸ್ತಾಂತರಿಸಲಿದೆ. ಇದಕ್ಕೆ ಬದಲಾಗಿ ಇಸ್ರೇಲ್ 2000 ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಲಿದೆ.
ಹಮಾಸ್ ಈಗಾಗಲೇ 7 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ ಮೂಲಕ ಹಸ್ತಾಂತರಿಸಿದೆ. ಇನ್ನೂ 13 ಜನರ ಹಸ್ತಾಂತರ ಬಾಕಿಯಿದೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಒಪ್ಪಂದಂತೆ ಪ್ಯಾಲೆಸ್ತೀನ್ ಮತ್ತು ಆಕ್ರಮಿತ ಪಶ್ಚಿಮ ದಂಡೆಯ 2000 ಮಂದಿ ಬಂಧಿತರನ್ನು ಇಸ್ರೇಲ್ ಬಿಡುಗಡೆ ಮಾಡಲು ಹಮಾಸ್ ಕಾಯುತ್ತಿದೆ. ಅವರನ್ನು ಬಿಡುಗಡೆ ಮಾಡಿದ ಬಳಿಕ, ಇನ್ನುಳಿದ 13 ಮಂದಿ ಒತ್ತೆಯಾಳುಗಳನ್ನು ಹಸ್ತಾಂತರಿಸಲಿದೆ ಎಂದು ವರದಿ ಹೇಳಿದೆ.
ಗಾಝಾದ ಖಾನ್ ಯೂನಿಸ್‌ನಲ್ಲಿ ಜಮಾಯಿಸಿದ ಹಮಾಸ್ ಗುಂಪು, ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ನಡೆಸುತ್ತಿದೆ. ಅತ್ತ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಒತ್ತೆಯಾಳುಗಳ ಸಂಬಂಧಿಕರು ತಮ್ಮವರಿಗಾಗಿ ಕಾಯುತ್ತಿದ್ದಾರೆ.
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ತಲುಪಿದ್ದು, ಅಲ್ಲಿ ಅವರು ಇಸ್ರೇಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ, ಗಾಝಾ ಕದನ ವಿರಾಮ ಒಪ್ಪಂದದ ಕುರಿತು ಈಜಿಪ್ಟ್‌ನಲ್ಲಿ ನಡೆಯುವ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಲ್ಪಟ್ಟ ಗಾಝಾದ ಜನತೆ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಹೊಸ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
‘ಮತ್ತೊಂದು ನಕ್ಬಾ’: ಗಾಝಾ ಚೇತರಿಕೆಗೆ ತಲೆಮಾರುಗಳೇ ಬೇಕು ಎಂದ ಯುಎನ್ ತಜ್ಞರು


