2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ‘ಮತಗಳ್ಳತನ’ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆರೋಪಗಳ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ಮಾಡಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಅ.13) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಅರ್ಜಿದಾರರಿಗೆ ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗದ ಮುಂದೆ ಪ್ರಸ್ತಾಪಿಸುವಂತೆ ಹೇಳಿತು. ಅರ್ಜಿದಾರರ ಪರ ವಕೀಲರು, ಭಾರತೀಯ ಚುನಾವಣಾ ಆಯೋಗಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅದು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು ಎಂದು ಲೈವ್ ಲಾ ವರದಿ ಮಾಡಿದೆ.
ಆದಾಗ್ಯೂ, ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಪೀಠ, ಅರ್ಜಿದಾರರು ಈ ವಿಷಯವನ್ನು ಚುನಾವಣಾ ಆಯೋಗದ ಮುಂದೆ ಮುಂದುವರಿಸಬಹುದು ಎಂದು ಹೇಳಿತು ಮತ್ತು ಅದನ್ನು ವಿಲೇವಾರಿ ಮಾಡಿತು. ಈ ವೇಳೆ, ಅರ್ಜಿದಾರರ ಪರ ವಕೀಲರು, ಈ ವಿಷಯವನ್ನು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಸಮಯ ಮಿತಿಯನ್ನು ನಿಗದಿಪಡಿಸುವಂತೆ ಕೋರಿದರು. ಆದರೆ, ಪೀಠವು ಅಂತಹ ಯಾವುದೇ ನಿರ್ದೇಶನವನ್ನು ನೀಡಲು ನಿರಾಕರಿಸಿತು ಎಂದು ಲೈವ್ ಲಾ ವರದಿ ವಿವರಿಸಿದೆ.
ರೋಹಿತ್ ಪಾಂಡೆ ಎಂಬವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವವರೆಗೆ ಮತ್ತು ಮತದಾರರ ಪಟ್ಟಿಗಳ ಸ್ವತಂತ್ರ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯ ಪರಿಷ್ಕರಣೆ ಅಥವಾ ಅಂತಿಮಗೊಳಿಸುವಿಕೆ ಮಾಡಬಾರದು ಎಂದು ನಿರ್ದೇಶಿಸಲು ಕೋರಲಾಗಿತ್ತು.
ಮತದಾರರ ಪಟ್ಟಿಯ ತಯಾರಿಕೆ, ನಿರ್ವಹಣೆ ಮತ್ತು ಪ್ರಕಟಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಚುನಾವಣಾ ಆಯೋಗವು ಬದ್ಧ ಮಾರ್ಗಸೂಚಿಗಳನ್ನು ರೂಪಿಸಿ ಹೊರಡಿಸಬೇಕೆಂದು ಅರ್ಜಿದಾರರು ಕೋರಿದ್ದರು. ಇದರಲ್ಲಿ ನಕಲಿ ಅಥವಾ ಕಾಲ್ಪನಿಕ ನಮೂದುಗಳನ್ನು ಪತ್ತೆಹಚ್ಚುವ ಮತ್ತು ತಡೆಗಟ್ಟುವ ಕಾರ್ಯವಿಧಾನಗಳು ಸೇರಿವೆ.
ಅರ್ಥಪೂರ್ಣ ಪರಿಶೀಲನೆ ಮತ್ತು ಸಾರ್ವಜನಿಕ ಪರಿಶೀಲನೆಗೆ ಅನುವು ಮಾಡಿಕೊಡಲು ಮತದಾರರ ಪಟ್ಟಿಯನ್ನು ಸುಲಭವಾಗಿ ಪ್ರವೇಶಿಸಬಹುದಾದ, ಮೆಶಿನ್ ರೇಡೆಬಲ್ ಮತ್ತು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (ಒಸಿಆರ್) ಫಾರ್ಮೆಟ್‌ನಲ್ಲಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು.
ಮತಗಳ್ಳತನದ ಬಗ್ಗೆ ಜುಲೈ 24ರಂದು ಸಂಸತ್ ಮುಂದೆ ಮೊದಲ ಹೇಳಿಕೆ ಕೊಟ್ಟಿದ್ದ ರಾಹುಲ್ ಗಾಂಧಿ, ಆಗಸ್ಟ್ 7ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ಆರೋಪದ ಕುರಿತು ದಾಖಲೆ ಬಿಡುಗಡೆ ಮಾಡಿದ್ದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 2024ರ ಲೋಕಸಭೆ ಚುನಾವಣೆಯ ವೇಳೆ ಬರೋಬ್ಬರಿ 1 ಲಕ್ಷಕ್ಕೂ (1,00, 250) ಹೆಚ್ಚು ಮತಗಳ್ಳತನ ನಡೆದಿದೆ ಎಂದಿದ್ದರು.
“ಆದಾಯ ನಿಂತು ಹೋಗಿದೆ”: ಕೇಂದ್ರ ಸಚಿವ ಸ್ಥಾನ ತೊರೆದು ನಟನೆಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ ಸುರೇಶ್ ಗೋಪಿ


