ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ಬದಲಾಗಿ ರಾಹುಲ್ ಗಾಂಧಿ. ಸತ್ಯವನ್ನು ಹೇಳಿದ್ದಕ್ಕಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಶನಿವಾರ ರಾಹುಲ್ ಗಾಂಧಿ ಘೋಷಿಸಿ ಪಕ್ಷದ ಕಾರ್ಯಕರ್ತರಿಂದ ಭಾರೀ ಮೆಚ್ಚುಗೆ ಪಡೆದಿದ್ದರು. ಇದೀಗ ಆ ವಿಷಯವು ಮಹರಾಷ್ಟ್ರದಲ್ಲಿ ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಮಹಾರಾಷ್ಟ್ರದ ಕಾಂಗ್ರೆಸ್‌ನ ನೂತನ ಮಿತ್ರಪಕ್ಷ ಶಿವಸೇನೆಯು, ತಮ್ಮ ಪಕ್ಷವು ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರನ್ನು ಗೌರವಿಸಿಸುತ್ತದೆ. ಅದೇ ರೀತಿ ಕಾಂಗ್ರೆಸ್ ಸಹ ವೀರ್ ಸಾವರ್ಕರ್ ಅವರನ್ನು ಅವಮಾನಿಸಬಾರದು ಎಂದು ಹೇಳಿದೆ.
ನಾವು ಪಂಡಿತ್ ನೆಹರು ಮತ್ತು ಮಹಾತ್ಮ ಗಾಂಧಿಯನ್ನು ಗೌರವಿಸುತ್ತೇವೆ. “ನೀವು ವೀರ್ ಸಾವರ್ಕರ್ ಅವರನ್ನು ಅವಮಾನಿಸಬಾರದು. ಸಂವೇದನಾಶೀಲರಾದ ಯಾರಿಗೂ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ” ಎಂದು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
We respect Pandit Nehru and Mahatma gandhi , you dont insult savarkar ,समझने वाले समझ गये है …
जय हिंद!!— Sanjay Raut (@rautsanjay61) December 14, 2019
“ವೀರ್ ಸಾವರ್ಕರ್ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ದೇವರಲ್ಲ, ರಾಷ್ಟ್ರಕ್ಕೂ ಕೂಡ. ಅವರ ಹೆಸರು ರಾಷ್ಟ್ರೀಯ ಹೆಮ್ಮೆ ಮತ್ತು ಸ್ವಾಭಿಮಾನದಿಂದ ಕೂಡಿದೆ. ನೆಹರೂ ಮತ್ತು ಗಾಂಧಿಯವರಂತೆ ಅವರು ಸ್ವಾತಂತ್ರ್ಯ ಸಾಧಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅಂತಹ ಎಲ್ಲ ದೇವರುಗಳನ್ನು ಗೌರವಿಸಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಸಾವರ್ಕರ್ ವಿಷಯವು ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ’ (ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ) ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಎನ್‌ಸಿಪಿ ಅಜಿತ್ ಪವಾರ್ “ಉದ್ಧವ್ ಜಿ, ಸೋನಿಯಾ ಜಿ, ಮತ್ತು ಪವಾರ್ ಸಾಹೆಬ್ ಪ್ರಬುದ್ಧ ಜನರು. ಅವರು ಅದನ್ನು ನಿಭಾಯಿಸುತ್ತಾರೆ ಎಂದು ಉತ್ತರಿಸಿದ್ದಾರೆ.
ಇದಕ್ಕೂ ಮೊದಲು ಸಿಎಬಿಯನ್ನು ಶಿವಸೇನೆ ವಿರೋಧಿಸಿತ್ತು. ಆದರೆ ಲೋಕಸಭೆಯಲ್ಲಿ ಆಶ್ಚರ್‍ಯಕರವಾಗಿ ಅದರ ಪರ ಮತ ಹಾಕಿತ್ತು. ಶಿವಸೇನೆಯ ಈ ನಿಲುವಿನಿಂದ ಸಿಟ್ಟಿಗೆದ್ದ ರಾಹುಲ್ ಗಾಂಧಿ “ಸಿಎಬಿ ಭಾರತೀಯ ಸಂವಿಧಾನದ ಮೇಲಿನ ಆಕ್ರಮಣವಾಗಿದೆ. ಅದನ್ನು ಬೆಂಬಲಿಸುವ ಎಲ್ಲರೂ ನಮ್ಮ ರಾಷ್ಟ್ರದ ಅಡಿಪಾಯದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದರು. ತದನಂತರ ಶಿವಸೇನೆ ರಾಜ್ಯಸಭೆಯಲ್ಲಿ ಸಿಎಬಿಯನ್ನು ವಿರೋಧಿಸಿ ಪದತ್ಯಾಗ ಮಾಡಿತ್ತು.
ಇನ್ನು ರಾಹುಲ್ ಗಾಂಧಿ “ಮೋದಿಯವರು ಮೇಕ್ ಇನ್ ಇಂಡಿಯಾ ಎಂದು ಘೋಷಣೆ ನೀಡಿದ್ದರು. ಆದರೀಗ ರೇಪ್ ಇನ್ ಇಂಡಿಯಾ” ಆಗಿದೆ ಎಂದು ಟೀಕಿಸಿದ್ದರು. ಈ ಹೇಳಿಕೆಗೆ ರಾಹುಲ್ ಕ್ಷಮೆಯಾಚಿಸಬೇಕೆಂದು ಬಿಜೆಪಿಯು ಪಟ್ಟು ಹಿಡಿದಿತ್ತು. ಉಭಯ ಸದನಗಳಲ್ಲಿ ಈ ಬಗ್ಗೆ ಪ್ರತಿಭಟನೆಗಳು ದಾಖಲಾಗಿದ್ದವು.
ಇದಕ್ಕೆ ಪ್ರತಿಕ್ರಿಯೆಯಾಗಿ “ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ನಾನು ರಾಹುಲ್ ಗಾಂಧಿ. ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ ಮತ್ತು ಯಾವುದೇ ಕಾಂಗ್ರೆಸ್ಸಿಗರೂ ಹಾಗೆ ಮಾಡುವುದಿಲ್ಲ. ಭಾರತದ ಆರ್ಥಿಕತೆಯನ್ನು ನಾಶಪಡಿಸಿದ್ದಕ್ಕಾಗಿ ದೇಶಕ್ಕೆ ಕ್ಷಮೆಯಾಚಿಸಬೇಕಾಗಿರುವುದು ನರೇಂದ್ರ ಮೋದಿ ಮತ್ತು ಅವರ ಸಹಾಯಕ ಅಮಿತ್ ಶಾ” ಎಂದು ಶನಿವಾರ ಮಧ್ಯಾಹ್ನ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಪಕ್ಷದ ಮೆಗಾ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.


