ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿ ಮೂರು ತಿಂಗಳುಗಳು ಕಳೆದರೂ, ಸರ್ಕಾರವು ಇಲ್ಲಿಯವರೆಗೆ ಅಧಿಕೃತ ‘ಡಿನೋಟಿಫಿಕೇಶನ್’ ಆದೇಶವನ್ನು ಹೊರಡಿಸದಿರುವುದು ಭೂಸ್ವಾಧೀನ ವಿರೋಧಿ ರೈತರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಸರ್ಕಾರದ ಈ ವಿಳಂಬ ನೀತಿಯಿಂದ ರೋಸಿಹೋಗಿರುವ ರೈತರು, ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ಇದರ ಭಾಗವಾಗಿ ಇಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದರು.
ಜುಲೈ 15ರಂದು ಮುಖ್ಯಮಂತ್ರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಮೌಖಿಕವಾಗಿ ಸ್ಪಷ್ಟವಾಗಿ ಘೋಷಿಸಿದ್ದರು. ಆದರೆ, ಈವರೆಗೂ ಮುಖ್ಯಮಂತ್ರಿಗಳ ಮಾತಿಗೆ ಅಧಿಕೃತ ಮುದ್ರೆ ದೊರೆತಿಲ್ಲ. ಈ ನಡುವೆ, ಸರ್ಕಾರದ ಘೋಷಣೆಗೆ ವಿರುದ್ಧವಾಗಿ ಎರಡು ಹಳ್ಳಿಗಳ ಜಮೀನುಗಳಿಗೆ ಬೆಲೆ ನಿಗದಿ ಸಭೆ ನಡೆಸುವ ಹುನ್ನಾರಗಳು ನಡೆದಿದ್ದು, ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿವೆ.
ಈ ಹಿನ್ನೆಲೆಯಲ್ಲಿ, ಸರ್ಕಾರದ ಘೋಷಣೆಯಂತೆ ಸಂಪೂರ್ಣ ಭೂಸ್ವಾಧೀನವನ್ನು ಕೈಬಿಡುವ ಅಧಿಕೃತ ಆದೇಶವನ್ನು ತಕ್ಷಣ ಹೊರಡಿಸಬೇಕು ಎಂದು ಒತ್ತಾಯಿಸಲು ರೈತರ ನಿಯೋಗವು ಶುಕ್ರವಾರ (ಅ.17) ಹರಳೂರು ಬಳಿಯ ಏರೋಸ್ಪೇಸ್ ಡಿಫೆನ್ಸ್ ಪಾರ್ಕ್‌ಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿತು. ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನೂ ನಿಯೋಗವು ಭೇಟಿಯಾಗಿ, ಮುಖ್ಯಮಂತ್ರಿಗಳ ಭೂಸ್ವಾಧೀನ ರದ್ದತಿ ಆದೇಶಕ್ಕೆ ಸಾಕ್ಷಿಯಾಗಿದ್ದ ಅವರೂ ಕೂಡ ರೈತರ ಸಮಸ್ಯೆ ಬಗೆಹರಿಸಲು ತಕ್ಷಣ ಡಿನೋಟಿಫಿಕೇಶನ್ ಆದೇಶ ಹೊರಡಿಸಲು ಕ್ರಮವಹಿಸುವಂತೆ ಒತ್ತಾಯಿಸಿತು.

‘ದೀಪಾವಳಿ ನಂತರ ಆದೇಶ..’; ಸಚಿವ ಪಾಟೀಲ್ ಭರವಸೆ
ರೈತರ ನಿಯೋಗದೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲರು, “ಈ ಕುರಿತು ಈಗಾಗಲೇ ಸರ್ಕಾರದಲ್ಲಿ ಚರ್ಚೆಯಾಗಿದೆ. ದೀಪಾವಳಿ ಹಬ್ಬ ಮುಗಿದ ನಂತರ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವ ಆದೇಶ ಹೊರಡಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಆದರೆ, ಅಧಿಕೃತ ಆದೇಶ ಹೊರಬೀಳುವವರೆಗೆ ತಮ್ಮ ಆತಂಕ ನಿವಾರಣೆಯಾಗುವುದು ಕಷ್ಟ ಎಂದು ಸಚಿವರಿಗೆ ತಿಳಿಸಿರುವ ರೈತರು, ಸಮಿತಿಯಲ್ಲಿ ಚರ್ಚಿಸಿ ತಮ್ಮ ಮುಂದಿನ ಹೋರಾಟದ ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದಾರೆ.
ನೇಮಕಾತಿ ಆದೇಶಕ್ಕೆ ಹೈಕೋರ್ಟ್ ತಡೆ; ಒಳಮೀಸಲಾತಿ ಅನ್ಯಾಯ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅಲೆಮಾರಿ ಸಮುದಾಯಗಳು


