ಇಂದು (ಅಕ್ಟೋಬರ್ 19) ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಹಮ್ಮಿಕೊಂಡಿದ್ದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಆದೇಶಿಸಿದ್ದಾರೆ.
ಪಥ ಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಆರ್‌ಎಸ್‌ಎಸ್ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ಪ್ರಹ್ಲಾದ ವಿಶ್ವಕರ್ಮ ಅವರಿಗೆ ಶನಿವಾರ (ಅಕ್ಟೋಬರ್ 18) ರಾತ್ರಿ ಪತ್ರ ಬರೆದಿರುವ ತಹಶೀಲ್ದಾರ್, “ಆರ್‌ಎಸ್‌ಎಸ್ ಪಥ ಸಂಚಲನ ನಡೆಸುವ ಸಮಯದಲ್ಲೇ ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ ಸಂಘಟನೆಯವರು ಚಿತ್ತಾಪುರ ಪಟ್ಟಣದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿದ್ದಾರೆ. ಒಂದೇ ಸಮಯದಲ್ಲಿ ಪಥ ಸಂಚಲನಕ್ಕೆ ಎಲ್ಲಾ ಸಂಘಟನೆಗಳು ಅನುಮತಿ ಕೇಳಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಹಾಗಾಗಿ, ಅನುಮತಿ ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳು ವರದಿ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾಗಿರುವ ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಿಮಿತ್ತ ಭಗವಾಧ್ವಜ, ಬ್ಯಾನರ್ ಹಾಗೂ ಬಂಟಿಂಗ್ಸ್ ಗಳನ್ನು ಅಳವಡಿಸಲಾಗಿತ್ತು. ಇದಕ್ಕೆ ಸೂಕ್ತ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪುರಸಭೆ ಅಧಿಕಾರಿಗಳು ಶನಿವಾರ ನಸುಕಿನಲ್ಲಿಯೇ ಅವುಗಳನ್ನು ತೆರವುಗೊಳಿಸಿದ್ದರು. ಈಗ ಸ್ವತಃ ತಹಶೀಲ್ದಾರ್ ಅವರೇ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿ ಆದೇಶ ಪ್ರಕಟಿಸಿದ್ದಾರೆ.
ಅಕ್ಟೋಬರ್ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಶಾಲಾ – ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಹಾಗೂ ಇತರೆ ಸ್ಥಳಗಳನ್ನು ಯಾವುದೇ ಖಾಸಗಿ ಸಂಘ – ಸಂಸ್ಥೆ, ಸಂಘಟನೆಗಳು ತಮ್ಮ ಚಟುವಟಿಕೆಗಳಿಗೆ ಬಳಸುವ ಮುನ್ನ ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಇದಕ್ಕೂ ಮುನ್ನ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದರು. ಸಚಿವರ ಪತ್ರ ಪರಿಗಣಿಸಿ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗ್ತಿದೆ. ಆದರೆ, ಇದು ಆರ್‌ಎಸ್‌ಎಸ್ ಅನ್ನು ಮಾತ್ರ ಗುರಿಯಾಗಿಸಿ ತೆಗೆದುಕೊಂಡ ತೀರ್ಮಾನ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಪತ್ರ ಬರೆದ ಬಳಿಕ ಅವರಿಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋವನ್ನು ಪ್ರಿಯಾಂಕ್ ಖರ್ಗೆ ಅಕ್ಟೋಬರ್ 15ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ಬೆದರಿಕೆ ಕರೆ ಮಾಡಿದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಅಕ್ಟೋಬರ್ 16ರಂದು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಅಕ್ಟೋಬರ್ 16ರಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ತಾಪುರದ ಪರಾಜಿತ ಬಿಜೆಪಿ ಅಭ್ಯರ್ಥಿ, ಮಣಿಕಂಠ ರಾಠೋಡ್ “ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಇವತ್ತು ಫೋನ್ ಮೂಲಕ ಬೆದರಿಕೆ ಹಾಕಿದವರು, ಮುಂದೆ ನಿಮ್ಮ ಮನೆಗೂ ಬರಬಹುದು” ಎಂದು ಹೇಳಿದ್ದಾರೆ.
“ಆರ್‌ಎಸ್‌ಎಸ್‌ನವರು ಬಹಳ ಕಟ್ಟರ್ ಪಂಥದವರು, ಸ್ವಾಭಿಮಾನಿ ದೇಶ ಭಕ್ತರು, ಹಣಕ್ಕಾಗಿ ಯಾವುದೋ ಪರಿವಾರದ ಗುಲಾಮಗಿರಿ ಬೆಳೆಸುವವರು ಆರ್‌ಎಸ್‌ಎಸ್‌ನವರು ಅಲ್ಲ” ಎಂದಿದ್ದಾರೆ.
ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಿಷೇಧ ಮಾಡಲಿ ಮುಂದೆ ನೋಡುವ, ಸರ್ಕಾರ ಶಾಶ್ವತ ಇರುವುದಿಲ್ಲವಲ್ಲ. ಸಚಿವ ಸಂಪುಟದಲ್ಲಿ ತೀರ್ಮಾನ ಆದರೆ ಇಡೀ ಕರ್ನಾಟಕದ ಕಾನೂನು, ಸುವ್ಯವಸ್ಥೆ ಕೆಟ್ಟು ಹೋಗುವ ಪರಿಸ್ಥಿತಿ ಬರುತ್ತದೆ” ಎಂದು ಹೇಳಿದ್ದಾರೆ. ಈ ಮೂಲಕ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ.


