“ಕ್ರಿಮಿನಲ್ ಕಾನೂನುಗಳು ಮುಗ್ದ ನಾಗರಿಕರಿಗೆ ಕಿರುಕುಳ ನೀಡುವ ಅಸ್ತ್ರವಾಗಬಾರದು” ಎಂದಿರುವ ಸುಪ್ರೀಂ ಕೋರ್ಟ್, ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಳಿಸಲಾಗಿದೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ದಾಖಲಿಸಲಾಗಿದ್ದ ಐದು ಎಫ್‌ಐಆರ್‌ಗಳನ್ನು ಶುಕ್ರವಾರ (ಅ.17) ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಪ್ರಯಾಗ್‌ರಾಜ್‌ನ ಸ್ಯಾಮ್ ಹಿಗ್ಗಿನ್‌ಬಾಟಮ್ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಇತರರ ವಿರುದ್ಧ 2021ರ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಮಾಡಿದೆ ಎಂದು ವರದಿಯಾಗಿದೆ.
ಬಲವಂತದ ಮತಾಂತರದಲ್ಲಿ ಭಾಗವಹಿಸಿದ ಅಥವಾ ಅದಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್ ಮತ್ತು ಇತರ ವಿರುದ್ದ ದಾಖಲಿಸಿದ್ದ ಎಫ್‌ಐಆರ್‌ಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳು ‘ಕಾನೂನು ದೌರ್ಬಲ್ಯಗಳು, ಕಾರ್ಯವಿಧಾನದ ಲೋಪಗಳು ಮತ್ತು ವಿಶ್ವಾಸಾರ್ಹ ಸಾಕ್ಷ್ಯಗಳ ಕೊರತೆ’ ಯನ್ನು ಹೊಂದಿವೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದ್ದಾರೆ. ವಿಚಾರಣೆಯನ್ನು ಮುಂದುವರಿಸುವುದು ‘ನ್ಯಾಯದ ಅಣಕ’ ಎಂದು ತಿಳಿಸಿದ್ದಾರೆ.
“ಕ್ರಿಮಿನಲ್ ಕಾನೂನನ್ನು ಅಮಾಯಕ ವ್ಯಕ್ತಿಗಳಿಗೆ ಕಿರುಕುಳ ನೀಡುವ ಸಾಧವಾಗಿ ಬಳಸಲು ಅನುಮತಿಸುವುದಿಲ್ಲ. ಪ್ರಾಸಿಕ್ಯೂಷನ್ ಸಂಸ್ಥೆಗಳು ನಂಬಿಕೆಗೆ ಅರ್ಹವಲ್ಲದ ವಿಷಯಗಳ ಆಧಾರದ ಮೇಲೆ ತಮ್ಮ ಇಚ್ಛೆಯಂತೆ ಮತ್ತು ಕಲ್ಪನಾತೀತವಾಗಿ ಮೊಕದ್ದಮೆ ಹೂಡುತ್ತಿವೆ” ಎಂದು 2022ರಲ್ಲಿ ದಾಖಲಾದ ಎಫ್‌ಐಆರ್‌ಗಳಲ್ಲಿ ಒಂದರ ನೋಂದಣಿಯಲ್ಲಿನ ‘ಸ್ಪಷ್ಟವಾದ ಉಲ್ಲಂಘನೆಗಳನ್ನು’ ಉಲ್ಲೇಖಿಸುತ್ತಾ ಪೀಠ ಹೇಳಿರುವುದಾಗಿ ವರದಿಯಾಗಿದೆ.
ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಥವಾ ದತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು 2021ರ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಲ್ಲ ಎಂದು ನ್ಯಾಯಾಲಯ ಹೇಳಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.
ಪ್ರತಿಯೊಂದು ಎಫ್‌ಐಆರ್‌ನ ವಿವರಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಮತಾಂತರಗೊಂಡಿದ್ದಾರೆ ಎನ್ನಲಾದ ಯಾವುದೇ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿಲ್ಲ ಎಂದು ತಿಳಿಸಿದೆ.
ಪ್ರಕರಣದ ಒಂದು ಎಫ್‌ಐಆರ್ ಬಗ್ಗೆ ಮಾತನಾಡಿದ ನ್ಯಾಯಾಧೀಶರು, ದೂರುದಾರ ವಿಶ್ವ ಹಿಂದೂ ಪರಿಷತ್ ಸದಸ್ಯ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ‘ನೊಂದಣಿಗೊಂಡ ವ್ಯಕ್ತಿ’ ಅಲ್ಲ ಎಂದು ಹೇಳಿರುವುದಾಗಿ ಟೆಲಿಗ್ರಾಫ್ ವರದಿ ತಿಳಿಸಿದೆ.
ತಿದ್ದುಪಡಿ ಮಾಡದ ಕಾನೂನಿನ ಸೆಕ್ಷನ್ 4ರ ಅಡಿಯಲ್ಲಿ, ದೂರುದಾರ ಮತಾಂತರಗೊಂಡ ವ್ಯಕ್ತಿಯ ಸಂಬಂಧಿಯಾಗಿರಬೇಕು ಎಂದಿತ್ತು. ಯಾವುದೇ ವ್ಯಕ್ತಿಗೆ ಮತಾಂತರದ ವಿರುದ್ಧ ದೂರು ದಾಖಲಿಸಲು ಅವಕಾಶ ನೀಡುವಂತೆ ಕಾನೂನನ್ನು 2024ರಲ್ಲಿ ತಿದ್ದುಪಡಿ ಮಾಡಲಾಯಿತು.
ಪ್ರಸ್ತುತ ಪ್ರಕರಣದ ಎಫ್‌ಐಆರ್ ಅನ್ನು ಕಾನೂನು ತಿದ್ದುಪಡಿ ಮಾಡುವ ಮೊದಲೇ ದಾಖಲಿಸಲಾಗಿದ್ದು, ಹಾಗಾಗಿ, ದೂರು ಅಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಆಪಾದಿತ ಘಟನೆಯ ಬಗ್ಗೆ ವಿಳಂಬಿತ ದೂರುಗಳನ್ನು ಸಲ್ಲಿಸಲು ‘ಸ್ವಹಿತಾಸಕ್ತಿ ಹೊಂದಿರುವ ವ್ಯಕ್ತಿಗಳನ್ನು’ ಪ್ರೋತ್ಸಾಹಿಸುವ ಮೂಲಕ ಪೊಲೀಸರು ಸಾಕ್ಷ್ಯಾಧಾರಗಳ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
“ಸಾಕ್ಷಿಗಳು ಕಾನೂನುಬಾಹಿರ ಧಾರ್ಮಿಕ ಮತಾಂತರಕ್ಕೆ ಒಳಗಾಗಿಲ್ಲ, ಅಥವಾ ಏಪ್ರಿಲ್ 14, 2022ರಂದು ನಡೆದ ಸಾಮೂಹಿಕ ಮತಾಂತರದ ಸ್ಥಳದಲ್ಲಿ ಅವರು ಇರಲಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಒಂದೇ ಘಟನೆಗೆ ಸಂಬಂಧಿಸಿದಂತೆ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ ಎಂಬುವುದನ್ನು ಗಮನಿಸಿದ ಪೀಠ, “ಇದು ತನಿಖಾ ಪ್ರಕ್ರಿಯೆಯ ನ್ಯಾಯಸಮ್ಮತತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಆರೋಪಿಗಳನ್ನು ಅನಗತ್ಯ ಕಿರುಕುಳಕ್ಕೆ ಒಳಪಡಿಸುತ್ತದೆ” ಎಂದಿದೆ.
ಆದಾಗ್ಯೂ, ಆರು ಪ್ರಕರಣಗಳಲ್ಲಿ ಒಂದು ಪ್ರತ್ಯೇಕ ಅಪರಾಧಗಳನ್ನು ಒಳಗೊಂಡಿರುವುದರಿಂದ ನ್ಯಾಯಾಲಯವು ಅರ್ಜಿಗಳ ಗುಂಪಿನಿಂದ ಬೇರ್ಪಡಿಸಿದೆ. ಆ ಪ್ರಕರಣದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಆರೋಪಿಗಳಿಗೆ ನೀಡಲಾದ ಬಂಧನದಿಂದ ಮಧ್ಯಂತರ ರಕ್ಷಣೆಯ ಬಗ್ಗೆ ನ್ಯಾಯಾಲಯ ನಿರ್ಧರಿಸುವವರೆಗೆ ಅದು ಮುಂದುವರಿಯಲಿದೆ ಎಂದು ಹೇಳಿದೆ.
ಡಿಸೆಂಬರ್ 2021ಮತ್ತು ಜನವರಿ 2023 ರ ನಡುವೆ, ಫತೇಪುರ್ ಜಿಲ್ಲೆ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ರಾಜ್ಯದ ಮತಾಂತರ ವಿರೋಧಿ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.
ವಿಶ್ವ ಹಿಂದೂ ಪರಿಷತ್ತಿನ ಫತೇಪುರ್ ಘಟಕದ ಉಪಾಧ್ಯಕ್ಷ ಹಿಮಾಂಶು ದೀಕ್ಷಿತ್ ಅವರ ದೂರಿನ ಆಧಾರದ ಮೇಲೆ ಏಪ್ರಿಲ್ 15, 2022 ರಂದು ದಾಖಲಿಸಲಾದ ಎಫ್‌ಐಆರ್ ಇವುಗಳಲ್ಲಿ ಒಂದು.
ಕ್ರಿಶ್ಚಿಯನ್ ಧರ್ಮದ ಆಚರಣೆಯ ದಿನವಾದ ಮಾಂಡಿ ಗುರುವಾರದಂದು ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 90 ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಈ ಪ್ರಕರಣ ಆರೋಪವಾಗಿತ್ತು.
ಹಣ ಮತ್ತು ಇತರ ಆಮಿಷಗಳನ್ನು ಒಡ್ಡಿ ಹಿಂದೂಗಳನ್ನು ಕಾರ್ಯಕ್ರಮಕ್ಕೆ ಕರೆಸಲಾಗಿತ್ತು. ಅಲ್ಲಿ ಮತಾಂತರ ಮಾಡಲಾಗಿತ್ತು ಎಂದು ದೂರುದಾರ ಆರೋಪಿಸಿದ್ದರು.
ದೂರು ಸ್ವೀಕರಿಸಿ ಪೊಲೀಸರು ಮತಾಂತರ ವಿರೋಧಿ ಕಾನೂನಿನ ಜೊತೆಗೆ, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ಸುಲಿಗೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಡಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ರಾಯ್ ಬರೇಲಿ ದಲಿತ ವ್ಯಕ್ತಿ ಗುಂಪುಹತ್ಯೆ; ಬಲಿಪಶು ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ


