ನವೆಂಬರ್ 2ರಂದು ಚಿತ್ತಾಪುರ ಪಟ್ಟಣದಲ್ಲಿ ಶಾಂತಿಯುತವಾಗಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಅನುಮತಿ ಕೋರಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಕಲಬುರಗಿಯ ಆರ್‌ಎಸ್‌ಎಸ್ ಸಂಚಾಲಕ ಅಶೋಕ್ ಪಾಟೀಲ್ ಅವರಿಗೆ ಹೈಕೋರ್ಟ್‌ನ ಕಲಬುರಗಿ ಪೀಠ ಭಾನುವಾರ (ಅ.19) ನಿರ್ದೇಶಿಸಿದೆ.
ಇಂದು (ಭಾನುವಾರ) ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಚಿತ್ತಾಪುರ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಪೀಠ, ಮಧ್ಯಂತರ ಆದೇಶ ನೀಡಿದೆ.
ಆರ್‌ಎಸ್‌ಎಸ್ ಪಥ ಸಂಚಲನ ನಡೆಸುವ ಸಮಯದಲ್ಲೇ ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ ಸಂಘಟನೆಯವರು ಚಿತ್ತಾಪುರ ಪಟ್ಟಣದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿದ್ದಾರೆ. ಒಂದೇ ಸಮಯದಲ್ಲಿ ಪಥ ಸಂಚಲನಕ್ಕೆ ಎಲ್ಲಾ ಸಂಘಟನೆಗಳು ಅನುಮತಿ ಕೇಳಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಹಾಗಾಗಿ, ಅನುಮತಿ ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಅನುಮತಿ ನಿರಾಕರಿಸುವ ಪತ್ರದಲ್ಲಿ ತಹಶೀಲ್ದಾರ್ ಹೇಳಿದ್ದರು.
ಇಂದು ವಿಚಾರಣೆ ವೇಳೆ, ಬೇರೆ ದಿನದಂದು ಪಥಸಂಚಲನ ಆಯೋಜಿಸಲು ಸಾಧ್ಯವೇ? ಎಂದು ನ್ಯಾಯಮೂರ್ತಿ ಎಂ. ಎಸ್ ಕಮಲ್ ಅವರ ಏಕಸದಸ್ಯ ಪೀಠವು ಅರ್ಜಿದಾರರನ್ನು ಕೇಳಿದೆ. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್, ನವೆಂಬರ್ 2ರಂದು ಆಯೋಜಿಸಬಹುದು ಎಂದಿದ್ದಾರೆ.
ಅರ್ಜಿದಾರರಿಗೆ ಕಾರ್ಯಕ್ರಮ ನಡೆಸಲು ಗೊತ್ತುಪಡಿಸಿದ ಸ್ಥಳವನ್ನು ಒದಗಿಸುವುದನ್ನು ರಾಜ್ಯ ಸರ್ಕಾರ ಖಚಿತಪಡಿಸುತ್ತದೆ ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ತಿಳಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರ್‌ಎಸ್ಎಸ್ ನ.2ರಂದು ಪಥಸಂಚಲನ ಆಯೋಜಿಸಲು ನಿಗದಿಪಡಿಸಲಾಗಿದೆ. ಅದಕ್ಕೆ ಅನುಮತಿ ನೀಡಲು ರೂಟ್ ಮ್ಯಾಪ್ ಹಾಗೂ ತಹಶೀಲ್ದಾರ್ ಕೇಳಿದ್ದ ವಿವರಣೆಗಳೊಂದಿಗೆ ಹೊಸದಾಗಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು. ಅದನ್ನು ಕಲಬುರಗಿ ಜಿಲ್ಲಾಧಿಕಾರಿ ಪರಿಗಣಿಸಬೇಕು. ಈ ಕುರಿತ ವರದಿಯನ್ನು ಅ.24ರ ಮಧ್ಯಾಹ್ನ 2.30ಕ್ಕೆ ಸಲ್ಲಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿದೆ.
ಆರ್‌ಎಸ್‌ಎಸ್‌ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು, ಇವರ ಬಗ್ಗೆ ಎಚ್ಚರ ಇರಲಿ : ಸಿಎಂ ಸಿದ್ದರಾಮಯ್ಯ


